ಕುಶಾಲನಗರ, ಜು. ೪: ಮೈಸೂರಿನಿಂದ ಕುಶಾಲನಗರಕ್ಕೆ ಬರುತ್ತಿದ್ದ ಕಾರೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯರು ಆತಂಕಕ್ಕೆ ಒಳಗಾದ ಘಟನೆ ಕುಶಾಲನಗರ ಪಟ್ಟಣದ ಹೃದಯ ಭಾಗದಲ್ಲಿ ನಡೆದಿದೆ.
ಮೈಸೂರಿನ ವೈದ್ಯರಾದ ಡಾ. ಹರ್ಷ ಎಂಬವರು ತಮ್ಮ ಹೂಂಡೈ ಕಾರಿನಲ್ಲಿ ಕುಶಾಲನಗರಕ್ಕೆ ಬರುತ್ತಿದ್ದ ಸಂದರ್ಭ ಕೊಪ್ಪ ಬಳಿ ಕಾರಿನ ಇಂಜಿನ್ ಭಾಗದಲ್ಲಿ ಹೊಗೆ ಬರುತ್ತಿರುವುದು ಗೋಚರಿಸಿದೆ.
ಕುಶಾಲನಗರ ಅಂಚೆ ಕಚೇರಿ ಬಳಿ ತಲುಪಿದಾಗ ಕಾರಿನ ಇಂಜಿನ್ ದಿಢೀರನೆ ಸ್ಥಗಿತಗೊಂಡಿದ್ದು, ಬೆಂಕಿ ಕಾಣಿಸಿಕೊಂಡಿತು.
ತಕ್ಷಣ ಇದನ್ನು ಗಮನಿಸಿದ ಸ್ಥಳೀಯರು ನೀರು ಮತ್ತು ಬೆಂಕಿಶಮನ ವಸ್ತುಗಳನ್ನು ಬಳಸಿ ಆರಿಸುವಲ್ಲಿ ಯಶಸ್ವಿಯಾದರು.
ಈ ಸಂದರ್ಭ ವೈದ್ಯರು ತಕ್ಷಣ ಕಾರಿನಿಂದ ಹೊರಬಂದ ಕಾರಣ ಯಾವುದೇ ರೀತಿಯ ಅನಾಹುತ ಸಂಭವಿಸಿಲ್ಲ.