ಪೊನ್ನಂಪೇಟೆ, ಜು. ೪: ಕಾಫಿ ಬೆಳೆಗಾರರಿಗೆ ತಾಂತ್ರಿಕ ಮಾಹಿತಿ, ಕಾಫಿ ಮಂಡಳಿಯ ವಿವಿಧ ಯೋಜನೆಗಳ ಕುರಿತು ಅರಿವು ಮೂಡಿಸುವ ಹಾಗೂ ಇಂಡಿಯಾ ಕಾಫಿ ಆ್ಯಪ್ ನೋಂದಣಿ ಪ್ರಕ್ರಿಯೆಗೆ ಉತ್ತೇಜನ ನೀಡುವ ಉದ್ದೇಶದಿಂದ ಕಾಫಿ ಮಂಡಳಿ, ಬಾಳೆಲೆ ವಲಯದ ವತಿಯಿಂದ ತಾ. ೭ರಂದು ಬೆಳಿಗ್ಗೆ ೧೦ ಗಂಟೆಗೆ ನಿಟ್ಟೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮಮಟ್ಟದ ಸಭೆಯನ್ನು ಆಯೋಜಿಸಲಾಗಿದೆ.

ಸಭೆಯಲ್ಲಿ ಕಾಫಿ ಬೆಳೆಯ ಪೋಷಕಾಂಶ ನಿರ್ವಹಣೆ, ಉತ್ತಮ ಕೃಷಿ ಪದ್ಧತಿಗಳು, ತೋಟದ ನಿರ್ವಹಣೆ ಸೇರಿದಂತೆ ಕಾಫಿ ಬೆಳೆ ಅಭಿವೃದ್ಧಿಗೆ ಸಂಬAಧಿಸಿದ ವಿವಿಧ ತಾಂತ್ರಿಕ ವಿಷಯಗಳ ಕುರಿತು ತಜ್ಞರು ಮಾಹಿತಿ ನೀಡಲಿದ್ದಾರೆ. ಅಲ್ಲದೆ ಕಾಫಿ ಮಂಡಳಿ ಅನುಷ್ಠಾನಗೊಳಿಸುತ್ತಿರುವ ವಿವಿಧ ಯೋಜನೆಗಳು, ಸೌಲಭ್ಯಗಳು ಹಾಗೂ ಬೆಳೆಗಾರರಿಗೆ ಲಭ್ಯವಿರುವ ಸೇವೆಗಳ ಕುರಿತು ಅಧಿಕಾರಿಗಳು ವಿವರಿಸಲಿದ್ದಾರೆ. ಇದೇ ವೇಳೆ ಇಂಡಿಯಾ ಕಾಫಿ ಆ್ಯಪ್‌ನಲ್ಲಿ ಕಾಫಿ ಬೆಳೆಗಾರರ ನೋಂದಣಿ ಕಾರ್ಯವೂ ನಡೆಯಲಿದೆ. ಇದುವರೆಗೆ ನೋಂದಣಿ ಮಾಡಿಸದ ಬೆಳೆಗಾರರು ಕಡ್ಡಾಯವಾಗಿ ಪ್ರಸಕ್ತ ಸಾಲಿನ ಮೂಲ ಆರ್‌ಟಿಸಿ ಹಾಗೂ ಆಧಾರ್ ಕಾರ್ಡ್ನ ಪ್ರತಿಯನ್ನು ಸಭೆಗೆ ತರಬೇಕು ಎಂದು ಕಾಫಿ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ. ನಿಟ್ಟೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಕಾಫಿ ಬೆಳೆಗಾರರು ಸಭೆಯಲ್ಲಿ ಭಾಗವಹಿಸಿ, ತಾಂತ್ರಿಕ ಮಾಹಿತಿ ಮತ್ತು ಕಾಫಿ ಮಂಡಳಿಯ ಯೋಜನೆಗಳ ಪ್ರಯೋಜನ ಪಡೆದುಕೊಳ್ಳುವಂತೆ ಕಾಫಿ ಮಂಡಳಿ, ಬಾಳೆಲೆ ವಲಯ ಮನವಿ ಮಾಡಿದೆ.