ಐಗೂರು, ಜು. ೪: ಕಳೆದ ಎಂಟು ತಿಂಗಳಿನಿAದ ಐಗೂರಿನಲ್ಲಿ ನೂತನ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ವಾಹನಗಳ ಸಂಚಾರವನ್ನು ಕಾಜೂರು ಪರ್ಯಾಯ ರಸ್ತೆಯ ಮೂಲಕ ಸುಮಾರು ೪ ಕಿ.ಮೀ ಹೆಚ್ಚುವರಿ ದೂರಕ್ಕೆ ತಿರುಗಿಸಲಾಗಿತ್ತು. ಈ ನಡುವೆ ಪಾದಚರಿಗಳ ಅನುಕೂಲಕ್ಕಾಗಿ ಸೇತುವೆ ಕಾಮಗಾರಿ ಪಕ್ಕದಲ್ಲಿ ಚೋರನ ಹೊಳೆಗೆ ಅಡ್ಡಲಾಗಿ ತಾತ್ಕಾಲಿಕ ಕಿರು ಸೇತುವೆ ನಿರ್ಮಿಸಲಾಗಿತ್ತು.

ವಿದ್ಯಾರ್ಥಿಗಳು ಕೂಲಿ ಕಾರ್ಮಿಕರು ಸೇರಿದಂತೆ ಗ್ರಾಮಸ್ಥರು ಇದೇ ತಾತ್ಕಾಲಿಕ ಸೇತುವೆಯನ್ನು ನಿತ್ಯ ಸಂಚಾರಕ್ಕೆ ಬಳಸುತ್ತಿದ್ದರು. ಆದರೆ ಮಳೆಯಿಂದ ನಿನ್ನೆ ರಾತ್ರಿ ಚೋರನ ಹೊಳೆಯಲ್ಲಿ ನೀರಿನ ಹರಿವು ಹೆಚ್ಚಾದ ಪರಿಣಾಮ ತಾತ್ಕಾಲಿಕ ಕಿರು ಸೇತುವೆ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ಇದರಿಂದ ಗ್ರಾಮದ ಎರಡು ಭಾಗಗಳ ನಡುವಿನ ಪಾದಚಾರಿಗಳ ಸಂಪರ್ಕ ಕಡಿದು ಹೋಗಿದ್ದು ಶನಿವಾರ ಬೆಳಗ್ಗಿನಿಂದಲೇ ನಿತ್ಯದ ಕೆಲಸಗಳಿಗೆ ತೆರಳಬೇಕಾದ ಪಾದಚರಿಗಳು, ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಪರದಾಡಿದ ದೃಶ್ಯ ಕಂಡುಬAತು. ಸಮಸ್ಯೆಗೆ ಸ್ಪಂದಿಸಿದ ಗುತ್ತಿಗೆದಾರರು ತ್ವರಿತವಾಗಿ ನೂತನ ಸೇತುವೆಯ ಮೇಲ್ಭಾಗದಲ್ಲಿ ಎರಡು ಕಡೆಗಳಿಂದ ಪಾದಚರಿಗಳು ಸುರಕ್ಷಿತವಾಗಿ ಸಂಚರಿಸಲು ತಾತ್ಕಾಲಿಕ ಪರ್ಯಾಯ ವ್ಯವಸ್ಥೆ ಕಲ್ಪಿಸಿದ್ದಾರೆ.