ಶನಿವಾರಸಂತೆ, ಜು. ೩: ಭಾರತೀಯ ಸೇನೆಯಲ್ಲಿ ೨೮ ವರ್ಷಗಳ ಕಾಲ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿ ಸ್ವಗ್ರಾಮ ಹೆಗ್ಗುಳ ಗ್ರಾಮಕ್ಕೆ ಆಗಮಿಸಿದ ಯೋಧ ಹೆಚ್.ಎ. ಸತೀಶ್ ಅವರಿಗೆ ಗೆಳೆಯರ ಬಳಗದ ವತಿಯಿಂದ ಶನಿವಾರಸಂತೆಯಲ್ಲಿ ಅದ್ದೂರಿ ಸ್ವಾಗತ ನೀಡಿ, ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.

ಗುಡುಗಳಲೆ ವೃತ್ತಕ್ಕೆ ಆಗಮಿಸಿದ ಯೋಧ ಹೆಚ್.ಎ.ಸತೀಶ್ ಅವರನ್ನು ಬಂಧು-ಬಾAಧವರು, ಗೆಳೆಯರು ಸ್ವಾಗತಿಸಿ, ಮುಖ್ಯರಸ್ತೆಯಲ್ಲಿ ತೆರೆದ ಜೀಪಿನಲ್ಲಿ ಭವ್ಯ ಮೆರವಣಿಗೆ ಮೂಲಕ ಕಿತ್ತೂರು ರಾಣಿ ಚೆನ್ನಮ್ಮ ವೃತ್ತಕ್ಕೆ ಕರೆತರಲಾಯಿತು.ಗೆಳೆಯರು ಜೆಸಿಬಿ ಯಂತ್ರದ ಮೂಲಕ ಪುಷ್ಪವೃಷ್ಠಿ ಮಾಡಿ, ಹಾರ-ತುರಾಯಿ ಹಾಕಿ ಜಯಘೋಷ ಮಾಡಿದರು. ಅಭಿನಂದನಾ ಕಾರ್ಯಕ್ರಮದಲ್ಲಿ ಸಮಾಜಸೇವಕ, ದಾನಿ ಹರಪಳ್ಳಿ ರವೀಂದ್ರ ಮಾತನಾಡಿ, ದೇಶದ ಗಡಿ ಕಾಯುವ ಯೋಧ ಕರ್ತವ್ಯ ಮುಗಿಸಿ ತನ್ನೂರಿಗೆ ಆಗಮಿಸಿದಾಗ ಗೌರವಾಧರಗಳಿಂದ ಸ್ವಾಗತಿಸುವುದು ಎಲ್ಲರ ಆದ್ಯ ಕರ್ತವ್ಯ.ತನ್ನ ಕುಟುಂಬ, ತನ್ನೂರು, ಹಬ್ಬಹರಿದಿನ, ಎಲ್ಲವನ್ನೂ ಬಿಟ್ಟು,ಗಡಿಯಲ್ಲಿ ನಿಂತು ದೇಶ ರಕ್ಷಣೆಗೆ ಪ್ರಾಣವನ್ನು ಪಣವಾಗಿಡುವ ಯೋಧರ ಶಿಸ್ತು, ಸಮಯಪಾಲನೆ, ಕರ್ತವ್ಯ ನಿಷ್ಠೆ ಸಮಾಜಕ್ಕೆ ಮಾದರಿ. ದೇಶದ ಎಲ್ಲರ ಸುಖನಿದ್ರೆಗೆ ಸೈನಿಕರ ತ್ಯಾಗವೇ ಕಾರಣ…ಎಂದರು. ಬೆಂಗಳೂರಿನ ನಿವೃತ್ತ ಯೋಧ ಗಿರೀಶ ಮಲ್ಲಪ್ಪ ಮಾತನಾಡಿ, ಯೋಧ ಮತ್ತು ರೈತನ ಕರ್ತವ್ಯದಿಂದ ದೇಶ ಸುಭೀಕ್ಷವಾಗುವುದು.ಕರ್ತವ್ಯ ಮುಗಿಸಿ ನಿವೃತ್ತಿ ಹೊಂದಿ ಬರುವ ಯೋಧರ ಮುಂದಿನ ಜೀವನಕ್ಕೆ ರಾಜ್ಯ ಸರ್ಕಾರ ದಾರಿ ತೋರಿಸಬೇಕು ಎಂದು ಆಗ್ರಹಿಸಿದರು. ಯೋಧ ಸತೀಶ್ ಕೃತಜ್ಞತೆಯ ನುಡಿಗಳನ್ನಾಡಿ, ಸೇನೆಗೆ ಕೊಡಗು ಜಿಲ್ಲೆಯ ಕೊಡುಗೆ ಅಪಾರ.ಹೆಚ್ಚಿನ ಸಂಖ್ಯೆಯ ಸೈನಿಕರನ್ನು ದೇಶಕ್ಕೆ ಸಮರ್ಪಿಸಿರುವ ಕೊಡಗಿನಲ್ಲಿ ಜನಿಸಲು ಹೆಮ್ಮೆ ಪಡಬೇಕು. ದೇಶ ರಕ್ಷಣೆಗಾಗಿ ಸೇನೆ ಸೇರಲು ಯುವಜನತೆ ಮುಂದಾಗಬೇಕು ಎಂದು ಕರೆ ನೀಡಿದರು. ಯೋಧ ಸತೀಶರ ತಾಯಿ ಜಯಮ್ಮ, ಪತ್ನಿ ಭವ್ಯಾ, ಪುತ್ರಿ ಆರಾಧ್ಯ, ಸಹೋದರ ಯತೀಶ್, ರೈತ ಮೋರ್ಚ ಜಿಲ್ಲಾ ಉಪಾಧ್ಯಕ್ಷ ಎ.ಆರ್.ರಕ್ಷಿತ್ ಗೌಡ, ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೆಳೆಯರ ಬಳಗದ ಹೇಮಂತ್, ಪೃಥ್ವಿ, ರಘು, ಸುನೀಲ್, ರವಿ, ಸ್ವಾಮಿ,ರಕ್ಷಿತ್, ಎ.ಎಚ್.ಚಂದ್ರಕಾAತ್, ನಿವೃತ್ತ ಸೈನಿಕರ ಸಂಘದ ಸದಸ್ಯರು, ಮುಖಂಡರಾದ ಸಿ.ಜೆ.ಗಿರೀಶ್, ಹೊನ್ನರಾಜಪ್ಪ, ಅಶೋಕ್, ಪೊಲೀಸ್ ಠಾಣಾ ಪಿಎಸ್‌ಐ ಚಂದ್ರ, ವಿವಿಧ ಸಂಘ-ಸAಸ್ಥೆ ಸದಸ್ಯರು, ವರ್ತಕರು ಹಾಜರಿದ್ದು ಯೋಧ ಸತೀಶರನ್ನು ಅಭಿನಂದಿಸಿದರು.ಸುರಿವ ಮಳೆಯಲ್ಲೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಉಪನ್ಯಾಸಕ ಚಂದ್ರಕಾAತ್ ಸ್ವಾಗತಿಸಿ, ವಂದಿಸಿ ಕಾರ್ಯಕ್ರಮ ನಿರ್ವಹಿಸಿದರು. ಸತೀಶ್ ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗುಳ ಗ್ರಾಮದ ಕೃಷಿಕ ದಿವಂಗತ ಅಪ್ಪಸ್ವಾಮಿ-ಜಯಮ್ಮ ದಂಪತಿಯ ಪುತ್ರ. ಇವರು ದೇಶದ ಹಲವಾರು ಗಡಿಭಾಗಗಳಲ್ಲಿ ಕಾರ್ಗಿಲ್, ಜಮ್ಮು-ಕಾಶ್ಮೀರ, ರಾಜಸ್ಥಾನ್, ಅಸ್ಸಾಂ, ಮಣಿಪುರ,ಬಂಡಿಪುರ, ಪೂಂಚ್, ಸಿಯಾಚಿನ್ ಗ್ಲಾಸಿಯಾರ್, ಸುಡಾನ್ ನ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ ಯೋಧರಾಗಿ ತಮ್ಮ ಕರ್ತವ್ಯ ನಿರ್ವಹಿಸಿ ಸ್ವಗ್ರಾಮಕ್ಕೆ ಹಿಂದಿರುಗಿದ್ದಾರೆ.