ಮಡಿಕೇರಿ, ಜು. ೩: ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿರುವ ಕಸ ವಿಲೇವಾರಿ ಘಟಕ ಹಾಗೂ ಮಾರುಕಟ್ಟೆಯಲ್ಲಿನ ಅವ್ಯವಸ್ಥೆ ಕಂಡು ನ್ಯಾಯಮೂರ್ತಿಗಳು ಹಾಗೂ ಉಪಲೋಕಾಯುಕ್ತರಾದ ಕೆ.ಎನ್. ಫಣೀಂದ್ರ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇದೇ ವೇಳೆ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡು ತ್ವರಿತ ಕ್ರಮಕೈಗೊಳ್ಳುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಬೆಳಿಗ್ಗೆ ೭ ಗಂಟೆಗೆ ಮಂಜುಮುಸುಕಿದ ವಾತಾವರಣ, ತುಂತುರು ಮಳೆಯ ನಡುವೆಯೇ ನಗರದ ಸ್ಟೋನ್‌ಹಿಲ್ ಬಳಿಯಿರುವ ಕಸ ವಿಲೇವಾರಿ ಘಟಕಕ್ಕೆ ತೆರಳಿದ ಫಣೀಂದ್ರ ಅವರು ಅಲ್ಲಿನ ಅಸಮರ್ಪಕ ತ್ಯಾಜ್ಯ ವಿಲೇವಾರಿ ಕಂಡು ಅತೃಪ್ತಿ ವ್ಯಕ್ತಪಡಿಸಿದರು. ತ್ಯಾಜ್ಯ ವಿಲೇವಾರಿ ವೈಜ್ಞಾನಿಕವಾಗಿ ನಡೆಯಬೇಕು. ಇಲ್ಲಿನ ವಾತಾವರಣ ಭೀತಿ ಹುಟ್ಟಿಸುತ್ತಿದೆ. ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ ಸಮಸ್ಯೆ ಈ ಮಟ್ಟಕ್ಕೆ ತಲುಪಲು ಕಾರಣವಾಗಿದೆ. ಕಸ ಘಟಕ ಇದೀಗ ಕಸದ ಬೆಟ್ಟದಂತಾಗಿದೆ ಎಂದು ನಗರಸಭೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಜ್ಞರನ್ನು ಕರೆಸಿ ವೈಜ್ಞಾನಿಕ ವಿಲೇವಾರಿಗೆ ಕ್ರಮವಹಿಸಬೇಕು. ಈ ಬಗ್ಗೆ ತಕ್ಷಣ ವರದಿ ಸಿದ್ಧಪಡಿಸಿ ನೀಡಬೇಕು. ಇಲ್ಲದಿದ್ದರೆ ಎಲ್ಲಾ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಕೊಳಚೆ ನೀರು ಜಲಮೂಲಕ್ಕೆ ಸೇರಿ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಇವೆಲ್ಲವನ್ನು ಅಧಿಕಾರಿಗಳು ಗಮನಹರಿಸಬೇಕಾಗಿತ್ತು. ಸಮರೋಪಾದಿಯಲ್ಲಿ ಕೆಲಸ ಮಾಡದಿದ್ದರೆ ನಾನು ಸುಮ್ಮನೆ ಬಿಡುವುದಿಲ್ಲ. ಶಿಕ್ಷೆಗೆ ಸರಕಾರಕ್ಕೆ ಶಿಫಾರಸ್ಸು ಮಾಡುತ್ತೇನೆ. ವೈಜ್ಞಾನಿಕ ಅಧ್ಯಯನವೆ ಇಲ್ಲಿ ಆಗಿಲ್ಲ. ಬೇರೆ ಜಿಲ್ಲೆಗಳಲ್ಲಿ ಸಂಸ್ಕರಣಾ ಘಟಕವಾದರೂ ಚೆನ್ನಾಗಿದೆ. ಇಲ್ಲಿ ಪರಿಸ್ಥಿತಿ ತೀರಾ ಹಾಳಾಗಿದೆ. ಸುತ್ತಮುತ್ತಲಿನ ನಿವಾಸಿಗಳಿಗೂ ತೊಡಕು ಉಂಟಾಗಿದೆ. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಿದ ರೀತಿ ಕಾಣುತ್ತಿಲ್ಲ. ಘಟಕ ಸ್ಥಳಾಂತರವಾಗುವ ತನಕವಾದರೂ ಕನಿಷ್ಟ ಶುಚಿತ್ವ ಕಾಪಾಡಬೇಕಲ್ಲವೆ ಎಂದು ಖಾರವಾಗಿ ಪ್ರಶ್ನಿಸಿದ ಅವರು, ಈ ದುರವಸ್ಥೆಯನ್ನು ಕಂಡು ನಾನು ಸುಮ್ಮನಿರಲು ಸಾಧ್ಯವಿಲ್ಲ ಎಂದರು.

ತ್ಯಾಜ್ಯವನ್ನು ವಿಂಗಡಿಸಿ ನೀಡುವ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು. ಇದಕ್ಕೆ ಕಾನೂನು ಸೇವೆಗಳ ಪ್ರಾಧಿಕಾರದ ಸಹಕಾರ ಪಡೆಯುವಂತೆ ಸಲಹೆ ನೀಡಿದರು.

ಮಾರುಕಟ್ಟೆ ದುಸ್ಥಿತಿ

ನಗರದ ಮಾರುಕಟ್ಟೆ ಸಂಕೀರ್ಣಕ್ಕೂ ಭೇಟಿ ನೀಡಿದ ಉಪಲೋಕಾಯುಕ್ತರು ಅಲ್ಲಿನ ವಾಸ್ತವಸ್ಥಿತಿಯನ್ನು ಕಂಡು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ವ್ಯಾಪಾರಿಗಳಿಂದಲೂ ಮಾಹಿತಿ ಪಡೆದುಕೊಂಡರು.

ಹೈಟೆಕ್ ಮಾರುಕಟ್ಟೆ ನಾಮಕಾವಸ್ಥೆಗೆಂಬAತಾಗಿದೆ. ಮಳೆಗಾಲದಲ್ಲಿ ನೀರು ಒಳಬರುತ್ತದೆ. ವ್ಯಾಪಾರ ಮಾಡಲು ಸಾಧ್ಯವಾಗುತ್ತಿಲ್ಲ. ಸಮರ್ಪಕವಾಗಿ ನೀರು ಹರಿಯುವ ವ್ಯವಸ್ಥೆ ಇಲ್ಲ. ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಅಶುಚಿತ್ವ ತಾಂಡವವಾಡುತ್ತಿದೆ, ಮಾಂಸ ಶುಚಿಗೊಳಿಸಲು ಸೂಕ್ತ ವ್ಯವಸ್ಥೆ ಇಲ್ಲ ಎಂಬುದೂ ಸೇರಿದಂತೆ ಇನ್ನಿತರ ಸಮಸ್ಯೆಗಳ ಕುರಿತು ವ್ಯಾಪಾರಿಗಳು ಉಪಲೋಕಾಯುಕ್ತರ ಗಮನಸೆಳೆದರು.

ವ್ಯಾಪಾರಿಗಳಿಗೆ ಮೊದಲು ರಕ್ಷಣೆ ನೀಡಬೇಕು. ಗುತ್ತಿಗೆ ನೀಡುವ ಬದಲು ನಗರಸಭೆಯಿಂದಲೇ ಮಾರುಕಟ್ಟೆ ನಿರ್ವಹಣೆ ಮಾಡಿ. ಸೂಕ್ತ ವ್ಯವಸ್ಥೆ ಇಲ್ಲದ ಮೇಲೆ ಗುತ್ತಿಗೆ ನೀಡುವುದರಿಂದ ಪ್ರಯೋಜನವಿಲ್ಲ. ವಾರದ ಸಂತೆ ದಿನದಂದು ಮಾರುಕಟ್ಟೆ ಶುಚಿತ್ವದಿಂದ ಇರಬೇಕು. ವ್ಯಾಪಾರಿಗಳಿಗೆ ಯಾವುದೇ ತೊಂದರೆ ಎದುರಾಗಬಾರದು ಎಂದು ನಿರ್ದೇಶನ ನೀಡಿದರು. ವ್ಯಾಪಾರಸ್ಥರು ಸಹ ಎಲ್ಲೆಂದರಲ್ಲಿ ಕಸ ಬಿಸಾಡಿದಲ್ಲಿ ದಂಡ ವಿಧಿಸಲಾಗುತ್ತದೆ. ಆದ್ದರಿಂದ ಈ ಬಗ್ಗೆ ಗಮನಹರಿಸಬೇಕು. ಮಾರುಕಟ್ಟೆ ವ್ಯಾಪ್ತಿಯಲ್ಲಿ ಗೇಟ್ ಅಳವಡಿಸಬೇಕು. ಹೆಚ್ಚಿನ ವಿದ್ಯುತ್ ಬಲ್ಬ್ ಕಲ್ಪಿಸಬೇಕು. ಟ್ಯೂಬ್‌ಲೈಟ್ ಸೇರಿದಂತೆ ವಿದ್ಯುತ್ ದೀಪಗಳನ್ನು ಅಳವಡಿಸಬೇಕು ಎಂದು ತಿಳಿಸಿದರು.

ಕಂಜೂಸ್‌ತನ ಯಾಕೆ..? - ದುಡ್ಡೇನ್ ನಿಮ್ದ..?

ಮಾರುಕಟ್ಟೆಯಲ್ಲಿ ಕುಡಿಯುವ ನೀರು ವ್ಯವಸ್ಥೆ ಕಲ್ಪಿಸಬೇಕೆಂದು ಉಪಲೋಕಾಯುಕ್ತರು ಸೂಚನೆ ನೀಡುವ ಸಂದರ್ಭ ಈಗಾಗಲೇ ವ್ಯವಸ್ಥೆ ಮಾಡಲಾಗಿದೆ ಎಂದು ಪೌರಾಯುಕ್ತ ರಮೇಶ್ ಅವರು ಹೇಳಿದ ಸಂದರ್ಭ ಅಲ್ಲಿ ಸರಿಯಾಗಿ ನೀರು ಲಭ್ಯವಾಗುವುದಿಲ್ಲ ಎಂದು ವ್ಯಾಪಾರಿಗಳು ದೂರಿದರು.

ಈ ಸಂದರ್ಭ ಅಸಮಾಧಾನ ವ್ಯಕ್ತಪಡಿಸಿದ ಉಪಲೋಕಾಯುಕ್ತರು, ಜನರ ಕೆಲಸ ಮಾಡಲು ಕಂಜೂಸ್‌ತನ ಯಾಕೆ? ದುಡ್ಡೇನ್ ನಿಮ್ದ.? ಸಾರ್ವಜನಿಕರ ದುಡ್ಡು ತಾನೇ.? ಅದನ್ನು ಸಾರ್ವಜನಿಕರಿಗೆ ವಿನಿಯೋಗಸಬೇಕಾಗಲ್ಲವೇ.? ಜೇಬಿಂದ ಕೊಟ್ಟ ರೀತಿ ಯಾಕೆ ನಡೆದುಕೊಳ್ಳುತ್ತೀರ ಎಂದು ತರಾಟೆಗೆ ತೆಗೆದುಕೊಂಡು ತಕ್ಷಣ ೨-೩ ಕಡೆಗಳಲ್ಲಿ ನೀರಿನ ಘಟಕ ಸ್ಥಾಪಿಸಬೇಕೆಂದು ತಾಕೀತು ಮಾಡಿದರು.

ಹಲವು ಬಾರಿ ಪ್ರತಿಭಟನೆ ಮಾಡಿದರೂ ನಗರಸಭೆ ಸ್ಪಂದನ ನೀಡಿಲ್ಲ. ಮಳೆ ನೀರು ನುಗ್ಗದಂತೆ ಇದುವರೆಗೂ ಕ್ರಮವಹಿಸಿಲ್ಲ ಎಂದು ವ್ಯಾಪಾರಿಗಳು ಅಹವಾಲು ಸಲ್ಲಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಉಪಲೋಕಾಯುಕ್ತರು, ಕಾಲಕಾಲಕ್ಕೆ ಚರಂಡಿ ಶುಚಿಗೊಳಿಸಬೇಕು. ಸ್ವಚ್ಛತೆ ಕಾಯ್ದುಕೊಳ್ಳಬೇಕು. ಇಲ್ಲಿನ ಪರಿಸ್ಥಿತಿಗೆ ಅಧಿಕಾರಿಗಳ ನಿರ್ಲಕ್ಷö್ಯವೇ ಕಾರಣವಾಗಿದ್ದು, ನೀವೇ ಇಲ್ಲಿಗೆ ಬಂದಾಗ ಇರಲು ಮನಸ್ಸು ಬರುತ್ತದಾ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸರಕಾರಿ ಬಸ್ ತಂಗುದಾಣಕ್ಕೆ ಭೇಟಿ

ನಗರದ ಸರಕಾರಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಉಪಲೋಕಾಯುಕ್ತರು ಸಿಸಿ ಕ್ಯಾಮರಾ, ಕುಡಿಯುವ ನೀರಿನ ಘಟಕ, ಗಡಿಯಾರ ಅಳವಡಿಸುವಂತೆ ಸೂಚನೆ ನೀಡಿದರು. ಇದೇ ಸಂದರ್ಭ ಪ್ರಯಾಣಿಕರು ಗ್ರಾಮೀಣ ಪ್ರದೇಶಗಳಿಗೆ ಸೂಕ್ತ ಬಸ್ ವ್ಯವಸ್ಥೆ ಇಲ್ಲದ ಬಗ್ಗೆ ಗಮನಕ್ಕೆ ತಂದರು. ಭೇಟಿ ಸಂದರ್ಭ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್. ಬಿಂದುಮಣಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್, ಹೆಚ್ಚುವರಿ ಜಿಲ್ಲಾಧಿಕಾರಿ ಸಹನಾ ಎಸ್.ಹಾದಿಮನಿ, ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ಉಪ ಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಮತ್ತು ಸಿವಿಲ್ ನ್ಯಾಯಾಧೀಶರಾದ ಕಿರಣ್ ಪಾಟೀಲ, ಲೋಕಾಯುಕ್ತ ಎಸ್‌ಪಿ ಉದೇಶ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ, ತಹಶೀಲ್ದಾರ್ ಶ್ರೀಧರ, ನಗರಾಭಿವೃದ್ಧಿ ಯೋಜನಾ ಯೋಜನಾ ನಿರ್ದೇಶಕ ಮಂಜುನಾಥ ರಾಮಣ್ಣ, ಪೌರಾಯುಕ್ತ ಎಚ್.ಆರ್.ರಮೇಶ್, ಪರಿಸರ ಅಧಿಕಾರಿ ಮಹೇಶ್ವರಿ ಸಿಂಗ್ ಹಾಗೂ ಎಇಇ ಸತೀಶ್ ಇತರರು ಹಾಜರಿದ್ದರು.