ಸಿದ್ದಾಪುರ, ಜು. ೨ : ಸಂಘಟಿತರಾಗಿ ಸಮಾಜದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಕರವೇ ಕಾರ್ಯಕರ್ತರು ಸದಾ ಮುಂಚೂಣಿಯಲ್ಲಿರುವುದು ಹೆಮ್ಮೆಯಾಗಿದೆ ಎಂದು ಕರವೇ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷ ಪಿ. ಕೃಷ್ಣೇಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.

ನೆಲ್ಲಿಹುದಿಕೇರಿಯ ವಿಎಸ್‌ಎಸ್‌ಎನ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಕರವೇ ನೂತನ ಸದಸ್ಯರ ಸೇರ್ಪಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ರಕ್ಷಣಾ ವೇದಿಕೆಯು ನಾಡಿನ ನೆಲ, ಭಾಷೆ, ಜಲ, ಸಂಸ್ಕೃ್ರತಿಯನ್ನು ಕಾಪಾಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ನೆಲೆಗೊಂಡ ಬಲಿಷ್ಠ ಸಂಘಟನೆಯಾಗಿದೆ. ಕಾರ್ಯಕರ್ತರು ಸಮಾಜದ ಒಳಿತಿಗಾಗಿ ಸಂಘಟಿತರಾಗಿ ಸಮಸ್ಯೆಗಳ ನಿವಾರಣೆಗೆ ನಿಂತರೆ ಫಲ ನಿಶ್ಚಿತವಾಗಿದ್ದು ಕಾರ್ಯಕರ್ತರು ಒಗ್ಗಟ್ಟಿನಿಂದ ನಿಲ್ಲುವ ಮೂಲಕ ಸಂಘಟನೆಯನ್ನು ಬಲಪಡಿಸಬೇಕೆಂದು ಕರೆ ನೀಡಿದರು.

ಇದೇ ಸಂದರ್ಭ ಸಿದ್ದಾಪುರ, ನೆಲ್ಲಿಹುದಿಕೇರಿ, ಅರೆಕಾಡು ವ್ಯಾಪ್ತಿಯ ಹಲವಾರು ಮಂದಿ ಕರವೇ ಸ್ವಾಭಿಮಾನಿ ಬಣಕ್ಕೆ ನೂತನ ಸದಸ್ಯರಾಗಿ ಸೇರ್ಪಡೆಗೊಂಡರು. ಕಾರ್ಯಕ್ರಮದಲ್ಲಿ ಕರವೇ ಸ್ವಾಭಿಮಾನಿ ಬಣದ ಕೊಡಗು ಜಿಲ್ಲಾಧ್ಯಕ್ಷ ಫ್ರಾನ್ಸಿಸ್ ಡಿಸೋಜಾ, ಜಿಲ್ಲಾ ಉಸ್ತುವಾರಿ ತನು ಕಿಶೋರ್, ಜಿಲ್ಲಾ ಉಪಾಧ್ಯಕ್ಷ ವಿ.ಎಸ್. ರಾಜಶೇಖರ್‌ಗೌಡ, ಜಿಲ್ಲಾ ಗೌರವಾಧ್ಯಕ್ಷ ಕೆ. ಚಂದ್ರು, ವೀರಾಜಪೇಟೆ ತಾಲೂಕು ಅಧ್ಯಕ್ಷ ಬೆಲ್ಲು ಕಾರ್ಯಪ್ಪ, ಜಿಲ್ಲಾ ಕಾರ್ಯದರ್ಶಿ ಸುರೇಶ್ ನೆಲ್ಲಿಕಲ್, ಜಿಲ್ಲಾ ಸಲಹೆಗಾರ ಸಜಿಲ್ ಕುಮಾರ್, ಕುಶಾಲನಗರ ತಾಲೂಕು ಅಧ್ಯಕ್ಷ ಕೆ.ಎಸ್. ಶಿವ, ನೆಲ್ಲಿಹುದಿಕೇರಿ ಘಟಕ ಅಧ್ಯಕ್ಷ ಹರೀಶ್, ಉಪಾಧ್ಯಕ್ಷ ರಶಾದ್, ಕಾರ್ಯದರ್ಶಿ ನಂದ ಹಾಜರಿದ್ದರು.