ಕೋವರ್ ಕೊಲ್ಲಿ ಇಂದ್ರೇಶ್
ಬೆಂಗಳೂರು, ಜು. ೨: ಬ್ಯಾಂಕ್ ಹರಾಜು ಪ್ರಕ್ರಿಯೆಯ ಗಂಭೀರ ಲೋಪವೊಂದು ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ರಾಜ್ಯ ಹೈ ಕೋರ್ಟ್ನ ಗಮನಕ್ಕೆ ಬಂದಿದ್ದು ಇದನ್ನು ಗಂಭೀರವಾಗಿ ಪರಿಗಣಿಸಿದೆ.
ನೋಂದಾಯಿತ ಆದರೆ “ಅರ್ಹತೆ ಇಲ್ಲದ” ಮೌಲ್ಯಮಾಪಕರೊಬ್ಬರು ಕೊಡಗು ಜಿಲ್ಲೆಯಲ್ಲಿ ೨೦೧೪ ರಲ್ಲಿ ರೂ. ೩.೧೨ ಕೋಟಿಗೂ ಹೆಚ್ಚು ಮೌಲ್ಯದ ೩೯ ಎಕರೆ ಕಾಫಿ ಮತ್ತು ಏಲಕ್ಕಿ ತೋಟವನ್ನು ೨೦೨೪ ರಲ್ಲಿ ರೂ. ೬೧ ಲಕ್ಷ ಅತ್ಯಲ್ಪ ಮೊತ್ತಕ್ಕೆ ಮೌಲ್ಯಮಾಪನ ಮಾಡಿದ್ದಾರೆ ಎಂದು ಹೈಕೋರ್ಟ್ ಕಂಡು ಹಿಡಿದಿದೆ, ಇದರ ಪರಿಣಾಮವಾಗಿ ಬ್ಯಾಂಕ್ ೨೦೨೪ ರಲ್ಲಿ ಹರಾಜಿನಲ್ಲಿ ಕೇವಲ ರೂ. ೯೯ ಲಕ್ಷಕ್ಕೆ ಈ ತೋಟವನ್ನು ಮಾರಾಟ ಮಾಡಿದೆ.
ಕಾನೂನು ಪ್ರಕಾರ ೧೯೫೭ ರ ಸಂಪತ್ತು-ತೆರಿಗೆ ಕಾಯ್ದೆಯ ಸೆಕ್ಷನ್ ೩೪ಂಃ ಅಡಿಯಲ್ಲಿ ಆದಾಯ-ತೆರಿಗೆ ಇಲಾಖೆಯು ಮೌಲ್ಯಮಾಪಕರಿಗೆ ನೀಡಿದ ನೋಂದಣಿ ಪ್ರಮಾಣಪತ್ರವು “ಕೃಷಿ ಭೂಮಿ, ತೋಟಗಳು, ಅರಣ್ಯಗಳು, ಗಣಿಗಳು ಮತ್ತು ಕ್ವಾರಿಗಳನ್ನು ಮೌಲ್ಯಮಾಪನ ಮಾಡುವುದನ್ನು ನಿಷೇಧಿಸಿದೆ” ಎಂದು ಸ್ಪಷ್ಟವಾಗಿ ಹೇಳಿದ್ದರೂ ಸಹ, “ತೋಟ ಆಸ್ತಿಗಳು/ಇತರ ಆಸ್ತಿಗಳ ಮೌಲ್ಯಮಾಪನವನ್ನು ಕೈಗೊಳ್ಳಲು ತಾನು ಅರ್ಹನಾಗಿದ್ದೇನೆ...” ಎಂದು ಹೇಳಿಕೊಂಡು ಅಫಿಡವಿಟ್ ಸಲ್ಲಿಸಿದ್ದ ಬ್ಯಾಂಕಿನ ಮೌಲ್ಯಮಾಪಕರ ವರ್ತನೆಯ ಬಗ್ಗೆಯೂ ನ್ಯಾಯಾಲಯವು ಆಘಾತ ವ್ಯಕ್ತಪಡಿಸಿದೆ.
ಮೌಲ್ಯ ಮಾಪಕರ ವಿರುದ್ಧ ಕ್ರಮ
ಈ ವಿಷಯ ಬಹಿರಂಗವಾದ ನಂತರ, ನ್ಯಾಯಾಲಯವು ಕಾನೂನಿನ ಬಲವಿಲ್ಲದಿದ್ದರೂ ತೋಟದ ಆಸ್ತಿಯ ಮೌಲ್ಯಮಾಪನವನ್ನು ಕೈಗೊಂಡಿದ್ದಕ್ಕಾಗಿ ಮೌಲ್ಯ ಮಾಪಕ ವೈ ಆರ್ ಶ್ರೀಕಾಂತ್ ವಿರುದ್ಧ ಏಕೆ ಮೊಕದ್ದಮೆ ಹೂಡಬಾರದು ಮತ್ತು ನ್ಯಾಯಾಲಯದ ಮುಂದೆ ಸುಳ್ಳು ಅಫಿಡವಿಟ್ ಸಲ್ಲಿಸಿದ್ದಕ್ಕಾಗಿ ಕ್ರಿಮಿನಲ್ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಬಾರದು ಎಂಬ ಕಾರಣವನ್ನು ಕೇಳಿ ಷೋಕಾಸ್ ನೋಟೀಸ್ ನೀಡಲು ಆದೇಶಿಸಿತು. ಕೊಡಗು ಜಿಲ್ಲೆಯ ಭಾಗಮಂಡಲದ ಮುಂಡ್ರೋಟ್ ಗ್ರಾಮದಲ್ಲಿರುವ ೩೯ ಎಕರೆ ತೋಟವನ್ನು ಕೆನರಾ ಬ್ಯಾಂಕಿನಲ್ಲಿ ಅಡವಿಟ್ಟು ೨೦೧೪ ರಲ್ಲಿ ತೋಟದ ಮಾಲೀಕರಾದ ಲೀತಾ ಅಬ್ರಹಾಂ ಸಾಲ ಪಡೆದಿದ್ದರು. ಆಸ್ತಿಯ ಹರಾಜು ಮಾರಾಟವನ್ನು ಪ್ರಶ್ನಿಸಿ ಲೀತಾ ಅವರು ಸಲ್ಲಿಸಿದ್ದ ಅರ್ಜಿಯ ಮೇರೆಗೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಮಧ್ಯಂತರ ಆದೇಶ ಹೊರಡಿಸಿದ್ದಾರೆ. ಅರ್ಜಿದಾರರು ಸಮಾನ ಮಾಸಿಕ ಕಂತುಗಳ ಮೂಲಕ ಸಾಲವನ್ನು ಮರುಪಾವತಿಸುವಲ್ಲಿ ವಿಫಲರಾದ ನಂತರ, ಬ್ಯಾಂಕ್ ಸರ್ಫೇಸಿ ಕಾಯ್ದೆ, ೨೦೦೨ ರ ಅಡಿಯಲ್ಲಿ ಮಾರಾಟ ಪ್ರಕ್ರಿಯೆ ಪ್ರಾರಂಭಿಸಿತು. ಈ ಪ್ರಕ್ರಿಯೆಯ ಭಾಗವಾಗಿ ಜನವರಿ ೨೦೨೪ ರಲ್ಲಿ ಆನ್ ಲೈನ್ ಮೂಲಕ ಕೇವಲ ೯೯ ಲಕ್ಷ ರೂಪಾಯಿಗಳಿಗೆ ವ್ಯಕ್ತಿಯೊಬ್ಬರಿಗೆ ಹರಾಜು ಮೂಲಕ ಮಾರಾಟ ಮಾಡಲಾಯಿತು. ಇದನ್ನು ಪ್ರಶ್ನಿಸಿ ಮಾಲೀಕರು ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಹೈಕೋರ್ಟ್ ಮೆಟ್ಟಿಲು ಏರಿದ್ದರು.
‘ಭಯಾನಕ ವ್ಯವಹಾರ’
ಮೌಲ್ಯಮಾಪನ ಪ್ರಕ್ರಿಯೆಯನ್ನು ನ್ಯಾಯಾಲಯವು “ಭಯಾನಕ ವ್ಯವಹಾರ ಎಂದು ಕರೆದಿದೆ, ಏಕೆಂದರೆ ೨೦೨೩ ರಲ್ಲಿ ರಾಜ್ಯ ಸರ್ಕಾರವೇ ನಿಗದಿಪಡಿಸಿದ ಭೂಮಿಯ ಮಾರ್ಗದರ್ಶನ ಮೌಲ್ಯವು ಭೂಮಿಯಲ್ಲಿ ಬೆಳೆದಿದ್ದ ಬೆಳೆಗಳ ಮೌಲ್ಯವನ್ನು ಹೊರತುಪಡಿಸಿ ರೂ. ೨.೭೩ ಕೋಟಿಯಾಗಿದ್ದರೂ, ಮೌಲ್ಯಮಾಪಕರು ೩೯ ಎಕರೆ ಭೂಮಿ ಮತ್ತು ತೋಟದ ಒಟ್ಟು ಮೌಲ್ಯವನ್ನು ರೂ. ೬೧ ಲಕ್ಷಕ್ಕೆ ಲೆಕ್ಕ ಹಾಕಿದ್ದಾರೆ ಎಂದು ಹೈ ಕೋರ್ಟ್ ಗಮನಿಸಿತು. ಅತ್ಯಂತ ಆಘಾತಕಾರಿ ಸಂಗತಿಯೆAದರೆ, ೨೦೧೪ರಲ್ಲಿ ಅರ್ಜಿದಾರರಿಗೆ ಸಾಲ ಮಂಜೂರು ಮಾಡಿದಾಗ ಬ್ಯಾಂಕ್ ಸ್ವತಃ ೩೯ ಎಕರೆ ತೋಟವನ್ನು ರೂ. ೨.೭೩ ಕೋಟಿಗೆ ಮೌಲ್ಯಮಾಪನ ಮಾಡಿದೆ ಎಂದು ನ್ಯಾಯಾಲಯ ಗಮನಿಸಿದೆ.
“ಈ ವ್ಯತ್ಯಾಸವು ಗಣನೀಯವಾಗಿರುವುದು ಮಾತ್ರವಲ್ಲ; ಇದು ಆಶ್ಚರ್ಯಕರವಾಗಿದೆ. ಇಂತಹ ಮೌಲ್ಯಮಾಪನವು ಪ್ರಾಥಮಿಕವಾಗಿ ಗಂಭೀರ ಸಂಶಯವನ್ನು ಹುಟ್ಟು ಹಾಕಿದೆ ಎಂದು ನ್ಯಾಯಾಲಯ ಗಮನಿಸಿತು, “ಆಸ್ತಿಯ ಮೌಲ್ಯದಲ್ಲಿನ ಇಂತಹ ತೀವ್ರ ಮತ್ತು ವಿವರಿಸಲಾಗದ ಅಪಮೌಲ್ಯೀಕರಣವು ಸ್ವಾಭಾವಿಕವಾಗಿ ಕಠಿಣ ಪರಿಶೀಲನೆಗೆ ಅನುವು ಮಾಡಿಕೊಟ್ಟಿದೆ ಎಂದು ನ್ಯಾಯಾಲಯ ಹೇಳಿದೆ.
ಆರ್‌ಟಿಐ ಬಹಿರಂಗಪಡಿಸಿದ ಸತ್ಯ
ಏಪ್ರಿಲ್ ೨೦೨೪ ರಲ್ಲಿ ಆರ್‌ಟಿಐ ಕಾಯ್ದೆಯಡಿ ಅರ್ಜಿದಾರರಿಗೆ ಸ್ವತಃ ಆದಾಯ ತೆರಿಗೆ ಇಲಾಖೆಯು ಒದಗಿಸಿದ ಮಾಹಿತಿಯೇ ಮೌಲ್ಯ ಮಾಪಕ ಶ್ರೀಕಾಂತ್ ಅವರನ್ನು ತಪ್ಪಿತಸ್ಥನ ಸ್ಥಾನದಲ್ಲಿ ನಿಲ್ಲಿಸಿದೆ. ಏಕೆಂದರೆ ಅವರ ನೋಂದಣಿ ಪ್ರಮಾಣಪತ್ರವು (“ಕೃಷಿ ಭೂಮಿಗಳು, ತೋಟಗಳು, ಕಾಡುಗಳು, ಗಣಿಗಳು ಮತ್ತು ಕ್ವಾರಿಗಳನ್ನು ಹೊರತುಪಡಿಸಿ) ಸ್ಥಿರ ಆಸ್ತಿಯ ಮೌಲ್ಯಮಾಪಕ” ಎಂದು ನೋಂದಾಯಿಸಲಾಗಿದೆ ಎಂದು ಸ್ಪಷ್ಟವಾಗಿ ಹೇಳಿದೆ. ಕುತೂಹಲಕಾರಿಯಾಗಿ, ಶ್ರೀಕಾಂತ್ ಫೆಬ್ರವರಿ ೨೦೨೪ ರಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಮಗೆ ಆದಾಯ ತೆರಿಗೆ ಇಲಾಖೆ ಮೌಲ್ಯ ಮಾಪನಕ್ಕೆ ಸೂಕ್ತ ಅನುಮತಿ ನೀಡಿದೆ ಎಂದು ಸಮರ್ಥಿಸಿಕೊಂಡಿದ್ದರು, ಆದರೆ ಮೌಲ್ಯಮಾಪಕರಾಗಿ ಅವರ ಸ್ಥಾನಮಾನದ ಕುರಿತು ಆದಾಯ ತೆರಿಗೆ ಇಲಾಖೆಯೇ ಏಪ್ರಿಲ್ ೨೦೨೪ ರಲ್ಲಿ ಆರ್‌ಟಿಐ ಅರ್ಜಿಗೆ ನೀಡಿದ ಉತ್ತರದಲ್ಲಿ ಈ ವಿಚಾರವನ್ನು ಸ್ಪಷ್ಟಪಡಿಸಿದೆ. ಶ್ರೀಕಾಂತ್ ಅವರ ಹಕ್ಕು ಮತ್ತು ಸಲ್ಲಿಸಿದ ದಾಖಲೆಯ ನಡುವಿನ ವಿರೋಧಾಭಾಸವು ಅಜಗಜಾಂತರವಾಗಿದೆ ಎಂದು ನ್ಯಾಯಾಲಯ ಹೇಳಿದೆ.