ಸುಂಟಿಕೊಪ್ಪ, ಜು. ೨: ಸುಂಟಿಕೊಪ್ಪ ಹೋಬಳಿಯ ಸರ್ವಾಂಗೀಣ ಅಭಿವೃದ್ಧಿಗೆ ತಾವು ಸಾಧ್ಯವಿರುವ ಎಲ್ಲಾ ಅನುದಾನವನ್ನು ತಂದು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಂತ ಹಂತವಾಗಿ ಹಮ್ಮಿಕೊಳ್ಳುವುದಾಗಿ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್‌ಗೌಡ ಹೇಳಿದರು.
ಸುಂಟಿಕೊಪ್ಪದ ವಾಹನ ಚಾಲಕರ ಮತ್ತು ಆಟೋ ಚಾಲಕ ಮತ್ತು ಮಾಲೀಕರ ಸಂಘದ ನಿಲ್ದಾಣದಲ್ಲಿ ಮೇಲ್ಚಾವಣಿ ನಿರ್ಮಾಣದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ಕಾಮಗಾರಿಯನ್ನು ಕರ್ನಾಟಕ ರಾಜ್ಯ ರಸ್ತೆ ನಿರ್ಮಾಣ ನಿಗಮಕ್ಕೆ ವಹಿಸಲಾಗಿದ್ದು ಶಾಸಕರ ಅನುದಾನ ರೂ ೪೦ ಲಕ್ಷ ನಿಗಧಿಗೊಳಿಸಲಾಗಿದೆ ಎಂದರು. ಕಾಮಗಾರಿಯ ಸಂದರ್ಭ ಸಾರ್ವಜನಿಕರು ಸೇರಿದಂತೆ ವಾಹನ ಚಾಲಕರು ಮತ್ತು ಆಟೋ ಚಾಲಕರು ಸಹಕಾರ ನೀಡಬೇಕಾಗಿರುವುದು ಅಗತ್ಯವೆಂದು ಅವರು ಕಿವಿಮಾತು ಹೇಳಿದರು.
ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ ಶಶಿಧರ್ ಮಾತನಾಡಿ, ಸುಂಟಿಕೊಪ್ಪ ಹೋಬಳಿಯ ಸರ್ವಾಂಗೀಣ ಅಭಿವೃದ್ಧಿಗೆ ಶಾಸಕರು ಕಟಿಬದ್ಧರಾಗಿದ್ದು, ಅನೇಕ ಗ್ರಾಮ ಪಂಚಾಯಿತಿಗಳ ದಶಕಗಳ ಸಮಸ್ಯೆಯನ್ನು ಪರಿಹರಿಸುತ್ತಾ ಬಂದಿದ್ದಾರೆ. ಅದೇ ದಶಕಗಳ ಬೇಡಿಕೆಯಾಗಿದ್ದ ಮೇಲ್ಚಾವಣಿ ನಿರ್ಮಾಣದ ಕನಸ್ಸು ನನಸಾಗುವ ದಿನಗಳು ನಮ್ಮ ಮುಂದೆ ಇರುವುದು ಸಂತಸದ ವಿಚಾರವಾಗಿದೆ ಎಂದು ಹೇಳಿದರು.
ಸಭೆಯನ್ನು ಉದ್ದೇಶಿಸಿ ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್.ಯು ರಫೀಕ್‌ಖಾನ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಹನ ಚಾಲಕರ ಸಂಘದ ಕೆ.ವಿ ಕಿಟ್ಟಣ್ಣ ರೈ ವಹಿಸಿದ್ದರು.
ಈ ಸಂದರ್ಭ ಆಟೋಚಾಲಕರ ಸಂಘದ ಅಧ್ಯಕ್ಷ ಶರೀಫ್, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳಾದ ಕೆ.ಇ ಕರೀಂ, ಶಿವಮ್ಮ ಮಹೇಶ್, ಪಂಚಾಯಿತಿ ಅಭಿವೃದ್ಧಿ ವಿ.ಜಿ ಲೋಕೇಶ್, ಹೋಬಳಿ ಕಾಂಗ್ರೆಸ್ ಅಧ್ಯಕ್ಷ ರಜಾಕ್, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ರಮಣಿ, ಕಾಂಗ್ರೆಸ್ ಮುಖಂಡ ಯಂಕನ ಶ್ರೀರಾಮ್, ಕಾನ್‌ಬೈಲ್ ಕಾಂಗ್ರೆಸ್ ಅಧ್ಯಕ್ಷ ಆದಂ ಹಾಗೂ ಪಂಚಾಯಿತಿ ಪೌರಕಾರ್ಮಿಕರು ಸೇರಿದಂತೆ ವಾಹನ ಚಾಲಕರು, ಸಾರ್ವಜನಿಕರು ಇದ್ದರು.