ಮಡಿಕೇರಿ, ಜು. ೨: ದಕ್ಷಿಣ ಕೊಡಗಿನ ಬಾಡಗರಕೇರಿ ಗ್ರಾಮದಲ್ಲಿರುವ ಶ್ರೀ ಮೃತ್ಯುಂಜಯ ದೇವಸ್ಥಾನದಲ್ಲಿ ಕೈಗೊಳ್ಳಲಾಗಿದ್ದ ಜೀರ್ಣೋದ್ಧಾರ ಕೆಲಸ ಕಾರ್ಯಗಳು ಪೂರ್ಣಗೊಂಡಿದ್ದು, ತಾ. ೬ ರಿಂದ ೯ರ ತನಕ ಅಷ್ಟಬಂಧ ಬ್ರಹ್ಮಲಶೋತ್ಸವ ಕಾರ್ಯ ಹಮ್ಮಿಕೊಳ್ಳಲಾಗಿದೆ.

ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವಾಲಯ ಸಮಿತಿ ಅಧ್ಯಕ್ಷ ಚೋನಿರ ಸುಬ್ರಮಣಿ, ಉಪಾಧ್ಯಕ್ಷ ಕಾಯಪಂಡ ಸ್ಟಾಲಿನ್ ಗಣಪತಿ, ನಾಡ್ ತಕ್ಕ ಕಾಯಪಂಡ ಅಯ್ಯಪ್ಪ, ದೇವತಕ್ಕರಾದ ಅಣ್ಣೀರ ದಾದಾ ಗಣಪತಿ, ಕಾರ್ಯದರ್ಶಿ ಬಲ್ಯಮಿದೇರಿರ ಸಂಪತ್ ಅವರುಗಳು ಈ ಬಗ್ಗೆ ವಿವರವಿತ್ತರು.

ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲೂಕಿನ ಬಾಡಗರಕೇರಿ ಗ್ರಾಮದಲ್ಲಿರುವ ಶ್ರೀ ಮೃತ್ಯುಂಜಯ ದೇವಸ್ಥಾನ ಐತಿಹಾಸಿಕವಾಗಿದ್ದು, ನೂರಾರು ವರ್ಷಗಳ ಹಿನ್ನೆಲೆ ಹೊಂದಿದೆ.

ಈ ದೇವಸ್ಥಾನದಲ್ಲಿ ವರ್ಷದ ೩೬೫ ದಿನಗಳು ಮೃತ್ಯುಂಜಯ ಹೋಮ, ಮಹಾಮೃತ್ಯುಂಜಯ ಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದುಕೊಂಡು ಬರುತ್ತಿವೆ. ಸ್ಥಳೀಯ ಗ್ರಾಮ, ನಾಡು ಸೇರಿದಂತೆ ಜಿಲ್ಲೆ, ರಾಜ್ಯ, ಹೊರರಾಜ್ಯಗಳ ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಿದ್ದು ಪೂಜೆಗೆ ಆಗಮಿಸುವ ಭಕ್ತರಿಗೆ ಪ್ರತಿದಿನ ಅನ್ನಸಂತರ್ಪಣೆಯೂ ಇದೆ. ಗ್ರಾಮಸ್ಥರ ಉಸ್ತುವಾರಿ, ವಾರ್ಷಿಕ ತೆರಿಗೆ ಇತ್ಯಾದಿ ವ್ಯವಸ್ಥೆಯೊಂದಿಗೆ ದೇವಾಲಯವನ್ನು ನಿರ್ವಹಿಸಿಕೊಂಡು ಬರಲಾಗುತ್ತಿದೆ.

ಈ ದೇವಸ್ಥಾನದಲ್ಲಿ ಕೆಲವೊಂದು ಜೀರ್ಣೋದ್ಧಾರ ಕಾರ್ಯಗಳನ್ನು ಮಾರ್ಚ್ ೨೨ ರಿಂದ ಪ್ರಾರಂಭಿಸಲಾಗಿತ್ತು. ಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವಿಧಿ ವಿಧಾನ ನಡೆಸಲಾಗಿದೆ. ಈ ಅವಧಿಯಲ್ಲಿ ದೇವಾಲಯದಲ್ಲಿ ಪೂಜೆ ಪುನಸ್ಕಾರಗಳನ್ನು ನಿಲ್ಲಿಸದೆ ದೇವರನ್ನು ಬಾಲಾಲಯಕ್ಕೆ ತಂದು ಪ್ರತಿಷ್ಠಾಪಿಸಿ ನೆರವೇರಿಸಲಾಗುತ್ತಿತ್ತು. ಇದೀಗ ಅಂದಾಜು ರೂ. ೧.೨೦ ಕೋಟಿ ವೆಚ್ಚದ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಪ್ರಮುಖವಾಗಿ ಗರ್ಭಗುಡಿ, ತೀರ್ಥಮಂಟಪ, ಗಣಪತಿ ಗುಡಿಯನ್ನು ಜೀರ್ಣೋದ್ಧಾರ ಮಾಡಲಾಗಿದೆ. ಈ ಕಾರ್ಯಕ್ಕೆ ಊರು-ನಾಡು ಸೇರಿದಂತೆ ಭಕ್ತಾದಿಗಳಿಂದ ಹಣ ಕ್ರೋಢೀಕರಿಸಲಾಗಿದೆ.

ಬಾಡಗರಕೇರಿ ಎಂಬದು ಬಾಡಗ-ಗೆರಕೇರಿ ಪೊರಾಡು ಗ್ರಾಮಗಳನ್ನು ಹೊಂದಿದೆ. ಈ ಮೂರು ಊರಿನ ನಿಧಿಯ ಮೂಲಕ ಆರಂಭಿಕವಾಗಿ ತಲಾ ರೂ ೧ ಲಕ್ಷ ಹಣ ಸಂಗ್ರಹವಾಗಿದೆ. ಜೊತೆಗೆ ಈ ಮೂರು ಊರಿನ ಜನರಿಂದ ಪ್ರತಿ ಒಲೆಗೆ ತಲಾ ರೂ. ೧ ಸಾವಿರದಂತೆ ತೆರಿಗೆ ರೂಪದಲ್ಲಿ ಜನರು ಹಣ ಸಂದಾಯ ಮಾಡಿದ್ದಾರೆ. ಜೊತೆಗೆ ಉದಾರವಾಗಿ ವಂತಿಗೆಯನ್ನು ನೀಡಿ ಸಹಕಾರ ನೀಡಿದ್ದಾರೆ.

ಊರಿನ ಜನತೆ ಯೊಂದಿಗೆ ಈ ಕ್ಷೇತ್ರದ ಭಕ್ತರು ಉದಾರ ಹಣ ಸಹಾಯ ಮಾಡಿದ್ದು, ಈ ಭಕ್ತಾದಿಗಳ ಕೊಡುಗೆಯನ್ನು ಸ್ಮರಿಸುವುದಾಗಿ ತಿಳಿಸಿದರು.

ಇದೀಗ ಜೀರ್ಣೋದ್ಧಾರಗೊಂಡ ಶ್ರೀ ಮೃತ್ಯುಂಜಯ ಕ್ಷೇತ್ರದಲ್ಲಿ ಪುನರ್ ನಿರ್ಮಾಣಗೊಂಡ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ನೂತನ ಗರ್ಭಗುಡಿಯಲ್ಲಿ ದೇವರ ಪುನರ್‌ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯ ಇದೇ ತಾ. ೬ನೇ ಸೋಮವಾರದಿಂದ ೯ರ ತನಕ ಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಜರುಗಲಿದೆ. ಬ್ರಹ್ಮಕಲಶೋತ್ಸವ ಹಿನ್ನಲೆ ತಾ. ೭ರಿಂದ ೯ರ ತನಕ ಸಾರ್ವಜನಿಕರಿಗೆ ಪೂಜಾ ಕೈಂಕರ್ಯ ಇರುವುದಿಲ್ಲ ಎಂದು ಅವರುಗಳು ಮಾಹಿತಿ ನೀಡಿದರು.

ಪೂಜಾ ವಿವರಗಳು

ತಾ. ೬ ರಂದು ಸಂಜೆ ೬ ರಿಂದ ಕೈಂಕರ್ಯ ಪ್ರಾರಂಭಗೊಳ್ಳಲಿದೆ. ತಾ. ೭ ರಂದು ಬೆಳಿಗ್ಗೆ ೭ ರಿಂದ ಗಣಪತಿ ಹೋಮ, ಬಿಂಬಶುದ್ಧಿ, ಕಲಶಾಭಿಷೇಕ, ೧೨.೩೦ಕ್ಕೆ ಮಧ್ಯಾಹ್ನದ ಪೂಜೆ, ಮಂಟಪ ಸಂಸ್ಕಾರ ನಡೆಯಲಿದೆ. ತಾ. ೮ ರಂದು ಬೆಳಿಗ್ಗೆ ಅನುಜ್ಞಾ ಕಲಶಾಭಿಷೇಕ, ಸಂಹಾರ ತತ್ವಕಲಶ ಪೂಜೆ, ಸಂಹಾರ ತತ್ವಹೋಮ, ಶಯ್ಯಾಪೂಜೆ, ಸಂಹಾರ ತತ್ವಕಲಶಾಭಿಷೇಕ, ಧ್ಯಾನ ಸಂಕೋಚ, ಜೀವಕಲಶ, ಸಂಜೆ ೭ಕ್ಕೆ ದುರ್ಗಾ ನಮಸ್ಕಾರ ಪೂಜೆ, ಶಯ್ಯಾಗಮನ, ಶಯನ ಪೂಜೆ, ಸಂಜೆ ೭.೦೦ ರಿಂದ ಧ್ಯಾನಾಧಿವಾಸ, ಬ್ರಹ್ಮಕಲಶ ಪೂಜೆ, ಅಧಿವಾಸ ಹೋಮ, ಪರಿಕಲಸ ಪೂಜೆ, ಪ್ರಸಾದ ಅಧಿವಾಸ ಹೋಮ, ಪರಿಕಲಸ ಪೂಜೆ, ಪ್ರಸಾದ ಅಧಿವಾಸ, ಪೀಠಾಧಿವಾಸ, ಕಲಶಾಧಿವಾಸ ಕೈಂಕರ್ಯವಿದೆ. ತಾ. ೯ ರಂದು ಬೆಳಿಗ್ಗೆ ೭ ರಿಂದ ಗಣಪತಿ ಹೋಮ, ತತ್ವ ಹೋಮ, ತತ್ವಕಲಶ ಪೂಜೆ, ೯.೦೯ ರಿಂದ ೧೦.೨೨ರ ಸಿಂಹ ಲಗ್ನದ ಶುಭಮುಹೂರ್ತದಲ್ಲಿ ಶ್ರೀ ಮೃತ್ಯುಂಜಯ ದೇವರ ಬಿಂಬ ಪ್ರತಿಷ್ಠೆ, ಅಷ್ಟಬಂಧ ಲೇಪನ, ಜೀವ ಕಲಶಾಭಿಷೇಕ, ಶಿಖರ ಪ್ರತಿಷ್ಠೆ, ತತ್ವಕಲಶಾಭಿಷೇಕ, ೧.೩೦ಕ್ಕೆ ಮಹಾಪೂಜೆ, ಮಂತ್ರಾಕ್ಷತೆ ಜರುಗಲಿದೆ. ಮುಂದಿನ ದಿನಗಳಿಂದ ಎಂದಿನAತೆ ದೇಗುಲದ ಕೈಂಕರ್ಯಗಳು ಮುಂದುವರಿಯಲಿರುವುದಾಗಿ ಅವರುಗಳು ತಿಳಿಸಿದರು.

ದಿನನಿತ್ಯ ಪೂಜೆಗೆ ಆಗಮಿಸುವವರು ಬೆಳಿಗ್ಗೆ ೧೧.೩೦ರ ಒಳಗೆ ದೇವಾಲಯ ತಲುಪಬೇಕು. ನಂತರ ಬಂದವರಿಗೆ ಪೂಜೆಗೆ ಅವಕಾಶ ನೀಡಲು ಕಷ್ಟಸಾಧ್ಯವಾಗುತ್ತದೆ. ಪೂಜೆಗೆ ಬರುವ ಭಕ್ತರಿಗೆ ಪ್ರತಿದಿನ ಅನ್ನದಾನದ ವ್ಯವಸ್ಥೆ ಇರುತ್ತದೆ. ದೇವಾಲಯಕ್ಕೆ ಆಗಮಿಸುವ ಭಕ್ತರು ದೇವಾಲಯಕ್ಕೆ ಒಪ್ಪಿಗೆಯಾಗುವಂತಹತ ರೀತಿಯ ಉಡುಗೆ ಧರಿಸಿ ಆಗಮಿಸಿ ಸಂಪ್ರದಾಯ ಪಾಲಿಸಬೇಕು. ಬೇಕಾಬಿಟ್ಟಿಯಾದಂತಹ ಉಡುಗೆ-ತೊಡುಗೆಗಳಿಗೆ ಅವಕಾಶ ನೀಡಲಾಗುವುದಿಲ್ಲ ಹಾಗೂ ದೇವಾಲಯದ ಇನ್ನಿತರ ಕಟ್ಟುಪಾಡುಗಳಿಗೆ ಅನುಸಾರವಾಗಿ ಭಕ್ತರು ಸಹಕರಿಸುವಂತೆಯೂ ಅವರುಗಳು ಮನವಿ ಮಾಡಿದರು. ಗೋಷ್ಠಿಯಲ್ಲಿ ಗ್ರಾಮಸ್ಥರಾದ ಕಾಯಪಂಡ ಶಶಿ ಸೋಮಯ್ಯ ಉಪಸ್ಥಿತರಿದ್ದರು.