ಕುಶಾಲನಗರ, ಜು. ೨: ಚೀನಾ ದೇಶದಲ್ಲಿ ಟಿಬೆಟಿಯನ್ ಸಾಂಪ್ರದಾಯಿಕ ವ್ಯವಸ್ಥೆಯ ವಿರುದ್ಧ ಹಾಗೂ ಟಿಬೆಟಿಯನ್ ಭಾಷೆ ಸಂಸ್ಕೃತಿಯ ಮೇಲೆ ನಿರ್ಬಂಧ ಹೇರಿ ಜಾರಿಗೊಳಿಸಿರುವ ಕಾನೂನು ವಿರೋಧಿಸಿ ಬೈಲುಕೊಪ್ಪ ಟಿಬೆಟಿಯನ್ ಶಿಬಿರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.

ಮಿಡಲ್ ವೇ ಟಿಬೆಟನ್ ಯೂತ್ ಕಾಂಗ್ರೆಸ್ ಮತ್ತು ಟಿಬೆಟಿಯನ್ ಮಹಿಳಾ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ನೂರಾರು ಟಿಬೆಟಿಯನ್ ನಾಗರಿಕರು ಚೀನಾದಲ್ಲಿ ಎಥ್ನಿಕ್ ಯುನಿಟಿ ಹೆಸರಿನಲ್ಲಿ ಜಾರಿಗೊಳಿಸಿರುವ ಕಾನೂನನ್ನು ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿ ಘೋಷಣೆ ಕೂಗುತ್ತಾ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ತೆರಳಿ ಶಿಬಿರದ ನಾಗರಿಕರಲ್ಲಿ ಜಾಗೃತಿ ಮೂಡಿಸಿದರು.

ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಟಿಬೆಟಿಯನ್ ಸಂಘಟನೆಗಳ ಪ್ರಮುಖರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಂಬAಧ ಪ್ರತಿಭಟನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಸಂಘಟನೆಯ ಪ್ರಮುಖರಾದ ನೀಮಾ ಗ್ಯಾಲ್ಫೋ ಟಿಬೇಟಿಯನ್ ಸಂಪ್ರದಾಯ, ಭಾಷೆಯ ಬಳಕೆಯ ಮೇಲೆ ಮತ್ತಷ್ಟು ನಿರ್ಬಂಧಗಳು ಉಂಟಾಗುವ ಸಾಧ್ಯತೆ ಇರುವುದಾಗಿ ಆತಂಕ ವ್ಯಕ್ತಪಡಿಸಿದರು. ಸಾಂಸ್ಕೃತಿಕ ಸಂಪ್ರದಾಯಗಳ ದುರ್ಬಳಕೆ ಹಾಗೂ ಬಲವಂತದ ಸಾಂಸ್ಕೃತಿಕ ಸಮೀಕರಣಕ್ಕೆ ಈ ಕಾನೂನಿನಿಂದ ಉತ್ತೇಜನ ದೊರೆಯುವ ಸಾಧ್ಯತೆ ಇರುವುದಾಗಿ ಅವರು ಹೇಳಿದರು.

ಈ ಸಂದರ್ಭ ಮಾಜಿ ಅಧ್ಯಕ್ಷರಾದ ಸೇರಿಂಗ್, ಮಹಿಳಾ ಸಂಘಟನೆಯ ಪ್ರಮುಖರಾದ ಗೆಂದುನ್ ಮತ್ತಿತರರು ಇದ್ದರು.