ಮಡಿಕೇರಿ, ಜು. ೧ : ರಾಜ್ಯ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಯ ಅರ್ಹ ಫಲಾನುಭವಿಗಳ ಪುನರ್ ಪರಿಶೀಲನಾ ಕಾರ್ಯ ತಾ. ೧ ರಿಂದ ಅಧಿಕೃತವಾಗಿ ಆರಂಭವಾಗಿದ್ದು, ಸಿಬ್ಬಂದಿ ನೇರವಾಗಿ ಗ್ರಾಹಕರ ಮನೆ-ಮನೆಗೆ ಭೇಟಿ ನೀಡಲಿದ್ದಾರೆ.

ಕಳೆದ ೨೦೨೩ರ ಜುಲೈ ತಿಂಗಳಲ್ಲಿ ಜಾರಿಗೆ ಬಂದಿದ್ದ ಗೃಹ ಜ್ಯೋತಿ ಯೋಜನೆಯ ಅರ್ಹತೆಯನ್ನು ಮರು ಪರಿಶೀಲಿಸುವ ಉದ್ದೇಶದಿಂದ ಇಂಧನ ಇಲಾಖೆ ಈ ಮಹತ್ವದ ಕ್ರಮಕ್ಕೆ ಮುಂದಾಗಿದೆ.

ಸ್ಥಳದಲ್ಲೇ ದಾಖಲೆ ಪರಿಶೀಲನೆ, ಆ್ಯಪ್ ಮೂಲಕ ಮಾಹಿತಿ ಸಂಗ್ರಹ, ಸೆಸ್ಕ್ ಮೀಟರ್ ರೀಡರ್‌ಗಳು ಹಾಗೂ ಇಲಾಖೆಯ ಸಿಬ್ಬಂದಿಗಳು ಗ್ರಾಹಕರ ಮನೆಗಳಿಗೆ ಭೇಟಿ ನೀಡಿ, ಫಲಾನುಭವಿಗಳ ಮೂಲ ದಾಖಲೆಗಳನ್ನು ಸ್ಥಳದಲ್ಲೇ ಪರಿಶೀಲಿಸಲಿದ್ದಾರೆ. ಬಳಿಕ ವಿಶೇಷ ಮೊಬೈಲ್ ಆ್ಯಪ್ ಹಾಗೂ ಅಧಿಕೃತ ಘೋಷಣಾ ಪತ್ರದ ಮೂಲಕ ಹೊಸದಾಗಿ ಮಾಹಿತಿ ಸಂಗ್ರಹಿಸಿ, ಅರ್ಜಿ ಭರ್ತಿ ಮಾಡುವ ಪ್ರಕ್ರಿಯೆಯನ್ನು ಸ್ಥಳದಲ್ಲೇ ಪೂರ್ಣಗೊಳಿಸಲಿದ್ದಾರೆ.

ಈ ಪ್ರಕ್ರಿಯೆಗೆ ಮೀಟರ್ ರೀಡರ್ ಮೂಲಕ ಸ್ಥಳದಲ್ಲೇ ತಪಾಸಣೆ ಮಾಡುವುದು ಏಕೈಕ ಮಾರ್ಗವಾಗಿದ್ದು, ಸಾರ್ವಜನಿಕರು ಸಿಬ್ಬಂದಿಯೊAದಿಗೆ ಸಂಪೂರ್ಣವಾಗಿ ಸಹಕರಿಸಬೇಕೆಂದು ಸೆಸ್ಕ್ ಇಲಾಖೆ ಮನವಿ ಮಾಡಿದೆ.

ಈ ದಾಖಲೆಗಳು ಕಡ್ಡಾಯ : ಮನೆ-ಮನೆ ಭೇಟಿಯ ಸಂದರ್ಭದಲ್ಲಿ ಫಲಾನುಭವಿಗಳು ಆಧಾರ್ ಕಾರ್ಡ್, ಫಲಾನುಭವಿಯ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಮತದಾರರ ಗುರುತಿನ ಚೀಟಿ (ವೋಟರ್ ಐಡಿ), ಪ್ಯಾನ್ ಕಾರ್ಡ್, ರೇಷನ್ ಕಾರ್ಡ್ (ಪಡಿತರ ಚೀಟಿ), ಜಾತಿ ಪ್ರಮಾಣ ಪತ್ರ, ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಬಾಡಿಗೆ ಒಪ್ಪಂದದ ಪತ್ರ (ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ಮಾತ್ರ ಅನ್ವಯ) ಜಿಲ್ಲೆ ಮತ್ತು ತಾಲೂಕುಗಳಲ್ಲಿ ಏಕಕಾಲಕ್ಕೆ ಈ ಪರಿಶೀಲನಾ ಕಾರ್ಯ ಚುರುಕಾಗಲಿದೆ. ನಿಯಮಿತವಾಗಿ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿರುವ ಗ್ರಾಹಕರು ಯಾವುದೇ ಗೊಂದಲಕ್ಕೆ ಒಳಗಾಗದೆ, ತಮ್ಮ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಂಡು ಪ್ರಕ್ರಿಯೆ ಮುಗಿಸಿಕೊಳ್ಳುವಂತೆ ಸೆಸ್ಕ್ ಇಇ ರಾಮಚಂದ್ರ ಕೋರಿದ್ದಾರೆ.