ಚೆಟ್ಟಳ್ಳಿ, ಜು. ೧ : ವೀರಾಜಪೇಟೆಯ ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ಕರಾಟೆ - ಡೋ ಇಂಡಿಯಾದ ಐದನೇ ಡಿಗ್ರಿ ಬ್ಲಾಕ್ ಬೆಲ್ಟ್ ಪಡೆದಿರುವ ಕರ್ನಾಟಕದ ಮುಖ್ಯ ತರಬೇತುದಾರ ಚಂದ್ರನ್ ಗೋಜುರ್ಯ ಮತ್ತು ತಂಡದವರು ವಿದ್ಯಾರ್ಥಿಗಳಿಗೆ ಆತ್ಮರಕ್ಷಣೆ, ಶಿಸ್ತು ಆತ್ಮವಿಶ್ವಾಸ ಹಾಗೂ ವ್ಯಕ್ತಿತ್ವ ವಿಕಸನ ತರಬೇತಿ ನೀಡಿದರು.

ಮಹಿಳೆಯರು, ಮಕ್ಕಳು ಹಾಗೂ ಯುವಕರಿಗೆ ಆತ್ಮ ರಕ್ಷಣೆಯ ಮಹತ್ವವನ್ನು ತಿಳಿಸಿ ಪ್ರಾಯೋಗಿಕ ತರಬೇತಿ ನೀಡಿದರು.

ಅಪಾಯದ ಸಂದರ್ಭಗಳಲ್ಲಿ ತಮ್ಮನ್ನು ತಾವು ಸುರಕ್ಷಿತವಾಗಿ ಕಾಪಾಡಿಕೊಳ್ಳುವ ಕೌಶಲ್ಯ ಬಗ್ಗೆ ತಿಳಿಸಿ ಜಾಗೃತಿ ಮೂಡಿಸಿದರು. ಸ್ವರಕ್ಷಣೆಯ ತಂತ್ರ ಅರಿವಿದ್ದಲ್ಲಿ ಅಪಾಯಕಾರಿ ಸಂದರ್ಭಗಳಲ್ಲಿ ಧೈರ್ಯದಿಂದ ಪ್ರತಿಕ್ರಿಯಿಸಲು ಸಹಾಯ ಮಾಡುತ್ತದೆ. ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯನ್ನು ಬಲಪಡಿಸುತ್ತದೆ. ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯವನ್ನು ವೃದ್ಧಿಸುತ್ತದೆ. ತುರ್ತು ಪರಿಸ್ಥಿತಿಯಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಬೆಳೆಸುತ್ತದೆ ಎಂದು ಈ ಸಂದರ್ಭ ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ರಾದ ಎಂ.ಕೆ ಪದ್ಮ, ಸ್ವಾಗತಿಸಿದರು. ಕನ್ನಡ ಉಪನ್ಯಾಸಕಿ ಎಂ. ಪಿ. ದಮಯಂತಿ ವಂದಿಸಿದರು. ಕಾರ್ಯಕ್ರಮದಲ್ಲಿ ಎಂ.ಬಿ ದೇಚಮ್ಮ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕಿ ಕೆ. ಪಿ. ಗಾಯತ್ರಿ, ಅನುಪಮಾ ತಿಮ್ಮಯ್ಯ, ಪ್ರೇಮಾಂಜಲಿ, ಉಪನ್ಯಾಸಕ ವೃಂದದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.