ಮಡಿಕೇರಿ, ಜು. ೧ : ಕರ್ನಾಟಕ ಸರ್ಕಾರವು ೨೦೨೬-೨೭ನೇ ಸಾಲಿನ ಮುಂಗಾರು ಹಂಗಾಮಿಗಾಗಿ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಜಾರಿಗೊಳಿಸಿದ್ದು, ಕೊಡಗು ಜಿಲ್ಲೆಯಲ್ಲಿ ಕಾಳುಮೆಣಸು ಹಾಗೂ ಅಡಿಕೆ ಬೆಳೆಗಳನ್ನು ವಿಮಾ ವ್ಯಾಪ್ತಿಗೆ ಒಳಪಡಿಸಲಾಗಿದೆ. ಹವಾಮಾನ ಆಧಾರಿತ ಅಂಶಗಳಾದ ಮಳೆಯ ಪ್ರಮಾಣ, ತಾಪಮಾನ ಸೇರಿದಂತೆ ಸ್ಥಳೀಯ ಟೆಲಿಮೆಟ್ರಿಕ್ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾಗುವ ಮಾಹಿತಿಯ ಆಧಾರದ ಮೇಲೆ ಬೆಳೆ ನಷ್ಟವನ್ನು ನಿರ್ಧರಿಸಿ ಪರಿಹಾರ ನೀಡಲಾಗುತ್ತದೆ.

೨೦೨೬-೨೭ನೇ ಸಾಲಿನ ಮುಂಗಾರು ಹಂಗಾಮಿಗೆ ಕಾಳುಮೆಣಸು ಬೆಳೆಗೆ ಪ್ರತಿ ಹೆಕ್ಟೇರ್‌ಗೆ ರೂ. ೪೭,೦೦೦ ವಿಮಾ ಮೊತ್ತ ನಿಗದಿಪಡಿಸಲಾಗಿದ್ದು, ರೈತರು ಶೇ.೫ರಂತೆ ರೂ. ೨,೩೫೦ ಪ್ರೀಮಿಯಂ ಪಾವತಿಸಬೇಕು. ಅಡಿಕೆ ಬೆಳೆಗೆ ಪ್ರತಿ ಹೆಕ್ಟೇರ್‌ಗೆ ರೂ. ೧,೨೮,೦೦೦ ವಿಮಾ ಮೊತ್ತ ನಿಗದಿಯಾಗಿದ್ದು, ರೂ. ೬,೪೦೦ ಪ್ರೀಮಿಯಂ ಪಾವತಿಸಬೇಕಿದೆ. ಎರಡೂ ಬೆಳೆಗಳಿಗೆ ವಿಮೆಯು ೨೦೨೬ರ ಆಗಸ್ಟ್ ೧ರಿಂದ ೨೦೨೭ರ ಜುಲೈ ೩೧ರವರೆಗೆ ಅನ್ವಯವಾಗಲಿದೆ. ವಿಮಾ ನೋಂದಣಿಗೆ ಜುಲೈ ೩೧ ಕೊನೆಯ ದಿನವಾಗಿದ್ದು, ಬೆಳೆ ಸಾಲ ಪಡೆದ ಹಾಗೂ ಬೆಳೆ ಸಾಲ ಪಡೆಯದ ರೈತರು ಸಮಾನ ಪ್ರೀಮಿಯಂ ದರದಲ್ಲಿ ಯೋಜನೆಯಡಿ ನೋಂದಾಯಿಸಿಕೊಳ್ಳಬಹುದು.

ವಿಮೆ ಮಾಡಿಸಿಕೊಳ್ಳಲು ಆಸಕ್ತ ರೈತರು ನಿಗದಿತ ಅರ್ಜಿಯೊಂದಿಗೆ ಪಹಣಿ, ಬ್ಯಾಂಕ್ ಖಾತೆ ಪಾಸ್‌ಬುಕ್, ಆಧಾರ್ ಕಾರ್ಡ್ ಪ್ರತಿಗಳು ಹಾಗೂ ಸ್ವಯಂ ಘೋಷಿತ ಬೆಳೆ ವಿವರಗಳನ್ನು ಸಲ್ಲಿಸಬೇಕು. ಬೆಳೆ ಸಾಲ ಪಡೆದ ರೈತರು ತಮ್ಮ ಬ್ಯಾಂಕ್ ಶಾಖೆಗಳಲ್ಲಿ, ಬೆಳೆ ಸಾಲ ಪಡೆಯದ ರೈತರು ಗ್ರಾಮ ಪಂಚಾಯಿತಿ ಮಟ್ಟದ ಗ್ರಾಮ ಒನ್ ಕೇಂದ್ರಗಳು ಅಥವಾ ಸಾಮಾನ್ಯ ಸೇವಾ ಕೇಂದ್ರಗಳ (ಅSಅ) ಮೂಲಕ ನೋಂದಣಿ ಮಾಡಿಸಿಕೊಳ್ಳಬಹುದು. ಕೊಡಗು ಜಿಲ್ಲೆಯಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲು ಯುನೈಟೆಡ್ ಇಂಡಿಯಾ ಇನ್ಸುರೆನ್ಸ್ ಕಂಪನಿಯನ್ನು ವಿಮಾ ಸಂಸ್ಥೆಯಾಗಿ ನೇಮಕ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಮೀಪದ ಬ್ಯಾಂಕ್ ಶಾಖೆ, ಯುನೈಟೆಡ್ ಇಂಡಿಯಾ ಇನ್ಸುರೆನ್ಸ್ ಕಂಪನಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗಳು, ರೈತ ಸಂಪರ್ಕ ಕೇಂದ್ರಗಳು ಅಥವಾ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿ ೯೩೫೩೫೩೪೮೭೧, ೯೪೪೮೪೦೭೮೧೬ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಶಶಿಧರ್ ತಿಳಿಸಿದ್ದಾರೆ.