ಮಡಿಕೇರಿ, ಜು. ೧ : ಕೊಡಗು ಎಂದಾಕ್ಷಣ ಎಲ್ಲರ ಸ್ಮೃತಿಪಟಲದಲ್ಲಿ ಮೂಡಿಬರುವದು ಇಲ್ಲಿನ ಪಕೃತಿ, ಪರಿಸರ, ವಿಭಿನ್ನ ಸಂಸ್ಕೃತಿ, ಪದ್ಧತಿ ಆಚಾರ-ವಿಚಾರಗಳೊಂದಿಗೆ ಕೊಡಗು ದೇಶಸೇವೆ ಹಾಗೂ ಕ್ರೀಡೆಗೆ ನೀಡಿರುವ ಅಭೂತಪೂರ್ವ ಕೊಡುಗೆ., ಪ್ರತಿ ಮನೆಗಳಿಂದಲೂ ದೇಶಸೇವೆಗಾಗಿ ಭಾರತೀಯ ಸೇನೆಗೆ ಸೈನಿಕರನ್ನು ನೀಡಿರುವ ಈ ನಮ್ಮ ಪುಟ್ಟ ಕೊಡಗು ಜಿಲ್ಲೆ ಕ್ರೀಡಾ ಕ್ಷೇತ್ರಕ್ಕೂ ಮಹತ್ತರ ಕೊಡುಗೆ ನೀಡಿದೆ. ರಾಜ್ಯ, ರಾಷ್ಟç, ಅಂತರರಾಷ್ಟç ಮಟ್ಟದ ಕ್ರೀಡಾಪಟುಗಳನ್ನು ನೀಡಿರುವ ಕೀರ್ತಿ ಕೊಡಗಿಗೆ ಸಲ್ಲುತ್ತದೆ. ಎಲ್ಲಾ ವಿಭಾಗದ ಕ್ರೀಡೆಗಳಲ್ಲೂ ಕೊಡಗಿನ ಕ್ರಿಡಾಪಟುಗಳು ಸಾಧನೆ ಮಾಡಿದ್ದಾರೆ. ಅದರಲ್ಲೂ ಹಾಕಿ ಎಂದರೆ ಅದು ‘ಕೊಡಗು’ ಎಂದೇ ಅರ್ಥ., ಹಾಕಿ ಕೊಡಗಿನ ಜನರ ರಕ್ತದಲ್ಲೇ ಅಡಗಿದೆ. ಹಾಗಾಗಿ ಕೊಡಗು ಕ್ರೀಡಾ ಜಿಲ್ಲೆ ಎಂದೇ ಜನಜನಿತ., ವಿಶ್ವ ದಾಖಲೆ ಬರೆದ ‘ಕೊಡವ ಕೌಟುಂಬಿಕ ಹಾಕಿ ಉತ್ಸವ’ ಹಾಗೂ ಪ್ರತಿ ಜನಾಂಗದ ನಡುವೆ ನಡೆಯುತ್ತಿರುವ ಕ್ರೀಡಾಕೂಟಗಳೇ ಇದಕ್ಕೆ ಸಾಕ್ಷಿ.,
ಹಾಕಿಯೇ ಮನೆ ಮಾತಾಗಿರುವ ಕೊಡಗು ಜಿಲ್ಲೆಯಲ್ಲಿ ಹಾಕಿ ಸೇರಿದಂತೆ ಇತರ ಕ್ರೀಡೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸರಕಾರದ ಮುಖೇನ ಕ್ರೀಡಾ ವಸತಿ ನಿಲಯಗಳನ್ನು ತೆರೆದು ತರಬೇತಿ ನೀಡಲಾಗುತ್ತಿದೆ. ವಸತಿ ನಿಲಯದಲ್ಲಿದ್ದುಕೊಂಡು ತರಬೇತಿ ಪಡೆದ ಹಲವಷ್ಟು ಮಂದಿ ಆಟಗಾರರು ರಾಜ್ಯ, ರಾಷ್ಟç, ಅಂತರರಾಷ್ಟç ಮಟ್ಟದಲ್ಲೂ ಸಾಧನೆ ಮಾಡಿದ್ದಾರೆ. ಆದರೆ., ಇದೀಗ ಕ್ರೀಡಾರ್ಥಿಗಳ ಗರಡಿಮನೆ ಎಂದೇ ಪರಿಗಣಿತವಾಗಿರುವ ಕ್ರೀಡಾ ವಸತಿ ನಿಲಯವನ್ನೇ ಮುಚ್ಚುವ ಹಂತಕ್ಕೆ ಸರಕಾರದ ಅಧಿಕಾರಿಗಳು ತಲಪಿದ್ದಾರೆ ಎಂದರೆ ಅದು ಕ್ರಿಡಾ ಜಿಲ್ಲೆ ಎಂದೇ ಗುರುತಿಸಿಕೊಂಡಿರುವ ಈ ಪುಟ್ಟ ಜಿಲ್ಲೆಗೆ ಮಾಡುತ್ತಿರುವ ಅವಮಾನವೇ ಸರಿ..!
ಕನಸಿನ ಕ್ರೀಡಾ ಶಾಲೆ
ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ, ಕೊಡಗಿನ ಕುಶಾಲನಗರ ಭಾಗದವರೇ ಆದ ದಿ. ಆರ್. ಗುಂಡೂರಾವ್ ಅವರ ಕನಸಿನಕೂಸು ಈ ಕೂಡಿಗೆ ಕ್ರೀಡಾ ವಸತಿ ಶಾಲೆ. ಪ್ರಮುಖವಾಗಿ ಹಾಕಿಯನ್ನೊಳಗೊಂಡು ಅಥ್ಲೆಟಿಕ್ಸ್ ಕ್ರೀಡೆಯೊಂದಿಗೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಸಲುವಾಗಿ ಕ್ರೀಡಾ ವಸತಿ ಶಾಲೆಯಾಗಿ ರೂಪುಗೊಂಡಿತು. ರಾಜ್ಯಾದಾದ್ಯಂತ ವಿವಿಧ ಜಿಲ್ಲೆಗಳಿಂದ ಆಯ್ಕೆಯಾದ ಸಹಸ್ರಾರು ಮಂದಿ ವಿದ್ಯಾರ್ಥಿಗಳು ಈ ಕ್ರೀಡಾ ಶಾಲೆಯಲ್ಲಿ ಕಲಿತು, ತರಬೇತಿ ಪಡೆದು ರಾಜ್ಯ, ರಾಷ್ಟç, ಅಂತರರಾಷ್ಟç ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.
ಹಿರಿಯ ಬಾಲಕರ ನಿಲಯ
ಮಡಿಕೇರಿಯಲ್ಲಿ ಪ್ರಾಥಮಿಕ, ಕೂಡಿಗೆ ಹಾಗೂ ಪೊನ್ನಂಪೇಟೆಯಲ್ಲಿ ಪ್ರೌಢಶಾಲಾ ಹಂತದವರೆಗೆ ಮಾತ್ರ ಕ್ರೀಡಾ ವಸತಿ ನಿಲಯಗಳಿದ್ದುದರಿಂದ ಪಿಯುಸಿ ನಂತರದ ವ್ಯಾಸಂಗಕ್ಕೆ ಕ್ರೀಡಾರ್ಥಿಗಳು ಬೆಂಗಳೂರು ಹಾಗೂ ಬಳ್ಳಾರಿ ಕ್ರೀಡಾ ನಿಲಯಗಳನ್ನು ಆಶ್ರಯಿಸಬೇಕಿತ್ತು. ಈ ಹಿನ್ನೆಲೆಯಲ್ಲಿ ಕೂಡಿಗೆ ಶಾಲೆಯ ಪ್ರಾಂಶುಪಾಲರಾಗಿದ್ದ ಕುಂತಿ ಬೋಪಯ್ಯ, ಜನಪ್ರತಿನಿಧಿಗಳು, ಕ್ರೀಡಾಪ್ರೇಮಿಗಳ ಪ್ರಯತ್ನ ಹಾಗೂ ಪರಿಶ್ರಮದಿಂದಾಗಿ ಕೂಡಿಗೆ ಕ್ರೀಡಾ ಶಾಲಾ ಆವರಣದಲ್ಲಿಯೇ ಪಿಯುಸಿ ವಿದ್ಯಾರ್ಥಿಗಳಿಗಾಗಿ ಹಿರಿಯ ಬಾಲಕರ ವಸತಿ ನಿಲಯವನ್ನು ತೆರೆಯಲಾಯಿತು. ನೂತನ ಕಟ್ಟಡ ಕೂಡ ನಿರ್ಮಿಸಲಾಗಿದೆ. ವಿದ್ಯಾರ್ಥಿಗಳಿಗೆ ಆಸುಪಾಸಿನಲ್ಲೇ ಕಲಿಕೆಗಾಗಿ ಕಾಲೇಜುಗಳು ಕೂಡ ಇವೆ. ಈ ನಿಲಯದಲ್ಲಿ ತರಬೇತು ಪಡೆದುಕೊಂಡಿರುವ ಹಲವು ಮಂದಿ ರಾಜ್ಯ, ರಾಷ್ಟçಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಈಗಲೂ ಹೊರಜಿಲ್ಲೆಯಲ್ಲಿದ್ದುಕೊಂಡು ಸಾಧನೆ ಮಾಡುತಲಿದ್ದಾರೆ.
ನಿಲಯಗಳ ಪುನರ್‌ರಚನೆ
ಯುವ ಸಬಲೀಕರಣ ಮತ್ತು ಕ್ರಿಡಾ ಇಲಾಖೆ ಅಧೀನದಲ್ಲಿರುವ ಕ್ರೀಡಾ ಶಾಲೆ, ನಿಲಯಗಳನ್ನು ಪುನರ್‌ರಚಿಸಲು ಸರಕಾರ ಮುಂದಾಗಿದೆ. ಈ ಸಂಬAಧ ಇಲಾಖೆಯ ಸರಕಾರದ ಉಪ ಕಾರ್ಯದರ್ಶಿ ಎಸ್.ಎನ್.ಜಯಶ್ರೀ ಅವರು ಸುತ್ತೋಲೆ ಹೊರಡಿಸಿದ್ದಾರೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧೀನದಲ್ಲಿರುವ ಕ್ರೀಡಾ ವಸತಿ ಶಾಲೆ/ನಿಲಯಗಳಲ್ಲಿ ಕ್ರಿಡಾ ಜಗತ್ತಿನ ಹೊಸ ಆವಿಷ್ಕಾರಗಳನ್ನು ಹಾಗೂ ಸಂಶೋಧನೆಗಳ ಒಳನೋಟಗಳನ್ನು ೪ಮೂರನೇ ಪುಟಕ್ಕೆ
(ಮೊದಲ ಪುಟದಿಂದ) ಶಾಲೆ/ನಿಲಯಗಳ ಕಾರ್ಯನಿರ್ವಹಣೆಯಲ್ಲಿ ಅಳವಡಿಸಿಕೊಂಡು ಹೆಚ್ಚು ಪರಿಣಾಮಕಾರಿಯಾಗಿ ಬಲಪಡಿಸಿ, ಉತ್ತಮ ಫಲಿತಾಂಶ ದೊರಕುವಂತೆ ಮಾಡಲು ೫ನೇ ತರಗತಿಯಿಂದ ೭ನೇ ತರಗತಿವರೆಗೆ ಎಲ್ಲ ವಸತಿ ನಿಲಯಗಳಲ್ಲಿ ಏಕ ಕ್ರೀಡೆಯಲ್ಲಿ ತರಬೇತಿ ನೀಡುವ ಬದಲು ಎಲ್ಲ ಕ್ರೀಡೆಗಳಲ್ಲಿ ತರಬೇತಿ ನೀಡುವ ಹಾಗೂ ದೈಹಿಕ ಕ್ಷಮತೆ ಮತ್ತು ಸಾಮಾನ್ಯ ಕ್ರೀಡಾ ಕೌಶಲ್ಯಗಳನ್ನು ಕ್ರೀಡಾಪಟುಗಳಲ್ಲಿ ಬೆಳೆಸಲು ಅಗತ್ಯ ವ್ಯವಸ್ಥೆ ರೂಪಿಸಲು ಪಿರಾಮಿಡಲ್ ಮಾದರಿಯಲ್ಲಿ ಕ್ರಿಡಾ ವಸತಿ ಶಾಲೆಗಳನ್ನು ಪುನರ್‌ರಚಿಸಿ ಕ್ರೀಡಾ ತರಬೇತುದಾರರೊಂದಿಗೆ ಫಿಸಿಯೋಥೆರಪಿ ಸೌಲಭ್ಯ, ಜಿಮ್ ಸೌಲಭ್ಯ ಮತ್ತಿತರ ವ್ಯವಸ್ಥೆಗಳನ್ನು ಹಿರಿಯ ಕ್ರಿಡಾಪಟುಗಳಿಗೆ ಹೆಚ್ಚಿನ ಒತ್ತು ನೀಡಿ ಒದಗಿಸುವ ಉದ್ದೇಶದಿಂದ ಯುವ ಸಬಲೀಕರಣ ಮತ್ತು ಕ್ರಿಡಾ ಇಲಾಖೆಯ ಶಾಲೆ/ನಿಲಯಗಳನ್ನು ಮೂರು ವರ್ಗಗಳಲ್ಲಿ ವಿಂಗಡಿಸಿ ಸುತ್ತೋಲೆ ಹೊರಡಿಸಿದ್ದಾರೆ.
ಸುತ್ತೋಲೆಯಲ್ಲಿ ಏನಿದೆ..?
ಸುತ್ತೋಲೆಯಲ್ಲಿನ ಮೂರು ವಿಂಗಡಣೆಯಲ್ಲಿ ಬುನಾದಿ ತರಬೇತಿ ಕ್ರೀಡಾ ವಸತಿ ನಿಲಯಗಳು (ಪ್ರಾಥಮಿಕ ವಿಭಾಗ), ಕಿರಿಯರ ಕ್ರೀಡಾ ವಸತಿ ನಿಲಯಗಳು (೮ ರಿಂದ ೧೦ನೇ ತರಗತಿವರೆಗೆ), ಹಿರಿಯರ ಕ್ರೀಡಾ ವಸತಿ ನಿಲಯಗಳು (೧೧ನೇ ತರಗತಿಯಿಂದ ಮೇಲ್ಪಟ್ಟು) ಎಂದು ವಿಂಗಡಿಸಲಾಗಿದೆ. ಪುನರ್‌ರಚಿತ ವ್ಯವಸ್ಥೆಯಡಿ ಕೆಲವೊಂದು ಷರತ್ತುಗಳನ್ನು ಕೂಡ ವಿಧಿಸಲಾಗಿದೆ. ೨೦೨೬-೨೭ನೇ ಸಾಲಿನಲ್ಲಿ ಪುನರ್‌ರಚಿತ ಮಾದರಿಯನುಸಾರ ಕ್ರೀ್ರಡಾಪಟುಗಳ ಹಂಚಿಕೆ ಕೈಗೊಳ್ಳತಕ್ಕದ್ದು. ಕಿರಿಯ ವಿಭಾಗಗಳಿರುವ ಕ್ರೀಡಾ ವಸತಿ ಶಾಲೆ/ನಿಲಯಗಳಲ್ಲಿ ಪುನರ್‌ರಚಿತ ಮಾದರಿಯಲ್ಲಿ ಹಿರಿಯರ ವಿಬಾಗ ಸೃಜನೆಯಾಗಿದ್ದಲ್ಲಿ ಕಿರಿಯ ಕ್ರೀಡಾಪಟುಗಳನ್ನು ಅದೇ ಕ್ರೀಡಾ ಶಾಲೆ/ನಿಲಯಗಳಲ್ಲಿ ಮುಂದುವರಿಸತಕ್ಕದ್ದು. ಶಾಲೆ/ನಿಲಯಗಳಲ್ಲಿ ಕ್ರೀಡೆಗಳ ಬದಲಾವಣೆಯಾಗಿದ್ದಲ್ಲಿ ಪ್ರಸ್ತುತ ಪ್ರವೇಶ ಪಡೆದಿರುವ ಶಾಲೆ/ ನಿಲಯದ ಕ್ರೀಡೆಯ ಬದಲಾವಣೆ ಆಧರಿಸಿ ಹಾಗೂ ಪ್ರವೇಶ ಲಭ್ಯತೆ ಆಧರಿಸಿ ಶಾಲೆ/ನಿಲಯಗಳ ಬದಲಾವಣೆಗೆ ಅವಕಾಶ ನೀಡತಕ್ಕದ್ದು. ಬುನಾದಿ ತರಬೇತಿ ಕ್ರೀಡಾ ವಸತಿ ನಿಲಯಗಳಲ್ಲಿ (ಈಜು ಮತ್ತು ಜಿಮ್ನಾಸ್ಟಿಕ್ ಹೊರತುಪಡಿಸಿ) ಎಲ್ಲಾ ಕ್ರೀಡೆಗಳಲ್ಲಿ ತರಬೇತಿ ನೀಡಿ ದೈಹಿಕ ಕ್ಷಮತೆ ಮತ್ತು ಸಾಮಾನ್ಯ ಕ್ರೀಡಾ ಕೌಶಲ್ಯಗಳ ಉನ್ನತೀಕರಣ ತರಬೇತಿ ನೀಡತಕ್ಕದ್ದು. ಈ ಮಾರ್ಗಸೂಚಿಗಳು ಪ್ರಸಕ್ತ ಸಾಲಿನಿಂದ ಮುಂದಿನ ಆದೇಶದವರೆಗೆ ಪ್ರವೇಶಾತಿಗೆ ಅನ್ವಯಿಸುತ್ತದೆ ಎಂದು ಷರತ್ತುಗಳನ್ನು ವಿಧಿಸಲಾಗಿದೆ.
ಆಯ್ಕೆಯಾದ ಬಳಿಕ ಸುತ್ತೋಲೆ..!
ಯಾವದೇ ಕ್ಷೇತ್ರದಲ್ಲಾಗಲೀ, ಸಂಸ್ಥೆಯಲ್ಲಾಗಲೀ ಯಾವದೇ ಬದಲಾವಣೆಗಳಿದ್ದರೂ ಕೆಲವು ಸಮಯಗಳ ಕಾಲಾವಕಾಶದೊಂದಿಗೆ ಮಾಡಲಾಗುತ್ತದೆ. ಆದರೆ ಈ ಕ್ರೀಡಾ ಕ್ಷೇತ್ರದಲ್ಲಿ ಕ್ರೀಡಾ ನಿಲಯಗಳಿಗೆ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ಮುಗಿದ ಬಳಿಕ ಬದಲಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ೨-೬-೨೦೨೬ರಂದು ಸುತ್ತೋಲೆ ಹೊರಡಿಸಿದ್ದು, ತಕ್ಷಣದಿಂದ ಜಾರಿಗೆ ತರುವಂತೆ ಸೂಚನೆ ನೀಡಲಾಗಿದೆ.
ಸುತ್ತೋಲೆಯಲ್ಲೇ ಅವಕಾಶವಿದೆ..!
ಸರಕಾರದ ಉಪ ಕಾರ್ಯದರ್ಶಿಗಳು ಹೊರಡಿಸಿರುವ ಸುತ್ತೋಲೆಯಲ್ಲೇ ಕ್ರಿಡಾಪಟುಗಳನ್ನು ಮುಂದುವರಿಸಲು ಅವಕಾಶವಿದೆ. ಸುತ್ತೋಲೆಯ ಎರಡನೇ ಷರತ್ತಿನಲ್ಲಿ ಕಿರಿಯರ ವಿಭಾಗಗಳಿರುವ ಕ್ರಿಡಾ ವಸತಿ ನಿಲಯ/ ಶಾಲೆಗಳಲ್ಲಿ ಪುನರ್‌ರಚಿತ ಮಾದರಿಯಲ್ಲಿ ಹಿರಿಯರ ವಿಭಾಗ ಸೃಜನೆಯಾಗಿದ್ದಲ್ಲಿ ಕಿರಿಯ ಕ್ರೀಡಾಪಟುಗಳನ್ನು ಅದೇ ಕ್ರೀಡಾ ವಸತಿ ಶಾಲೆ/ನಿಲಯಗಳಲ್ಲಿ ಮುಂದುವರಿಸತಕ್ಕದ್ದು ಎಂದು ಸೂಚಿಸಲಾಗಿದೆ. ಹಾಗಾಗಿ ಕೂಡಿಗೆ ಕ್ರೀಡಾ ಶಾಲೆಯಲ್ಲಿ ಈ ಹಿಂದೆಯೇ ಸೃಜನೆಯಾಗಿರುವ ಹಿರಿಯ ಬಾಲಕರ ನಿಲಯದಲ್ಲಿಯೇ ಅವಕಾಶ ನೀಡಿ ಮುಂದುವರಿಸಬಹುದಾಗಿದೆ. ಇದಕ್ಕೆ ಅಧಿಕಾರಿಗಳ, ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಅಗತ್ಯವಿದೆ.
ಅತಂತ್ರರಾದ ವಿದ್ಯಾರ್ಥಿಗಳು..!
ರಾಜ್ಯದಾದ್ಯಂತ ಇರುವ ಎಲ್ಲ ಕ್ರೀಡಾ ವಸತಿ ಶಾಲೆ/ನಿಲಯಗಳಿಗೆ ಕಳೆದ ಫೆಬ್ರವರಿ ತಿಂಗಳಿನಲ್ಲಿಯೇ ಆಯ್ಕೆ ಮಾಡಲಾಗಿದೆ. ಆಯಾಯ ಕ್ರೀಡಾ ವಸತಿ ನಿಲಯಗಳ ಅಗತ್ಯಾನುಸಾರ ವಿದ್ಯಾರ್ಥಿಗಳ ಹಂಚಿಕೆ ಕೂಡ ಮಾಡಲಾಗಿದೆ. ಅಂತೆಯೇ ಕೂಡಿಗೆ ಹಿರಿಯ ಬಾಲಕರ ನಿಲಯಕ್ಕೆ ಆಯ್ಕೆ ಬಯಸಿದ್ದ ವಿದ್ಯಾರ್ಥಿಗಳ ಪೈಕಿ ಒಟ್ಟು ೧೭ ಮಂದಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು. ಈಗಾಗಲೇ ತರಗತಿಗಳು ಕೂಡ ಆರಂಭವಾಗುತ್ತಿದ್ದು, ವಿದ್ಯಾರ್ಥಿಗಳು ನಿಲಯಕ್ಕೆ ದಾಖಲಾಗಬೇಕಿತ್ತು. ಆದರೆ, ಈ ಹೊಸ ಬದಲಾವಣೆಯಿಂದಾಗಿ ಕೂಡಿಗೆ ನಿಲಯಕ್ಕೆ ಯಾವದೇ ವಿದ್ಯಾರ್ಥಿಗೆ ಅವಕಾಶ ನೀಡಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ. ಕೆಲವರನ್ನು ಬೆಂಗಳೂರು ಹಾಗೂ ಬಳ್ಳಾರಿ ಕ್ರಿಡಾ ನಿಲಯಕ್ಕೆ ಕಳುಹಿಸುವದಾಗಿ ಇಲಾಖಾ ಮೂಲಗಳಿಂದ ತಿಳಿದು ಬಂದಿದ್ದು, ಕೆಲವರು ಅಲ್ಲಿಗೆ ತೆರಳಲು ಹಿಂದೇಟು ಹಾಕುತ್ತಿರುವದಾಗಿ ತಿಳಿದುಬಂದಿದೆ. ಇದರಿಂದಾಗಿ ಆ ವಿದ್ಯಾರ್ಥಿಗಳ ಕ್ರೀಡಾ ಭವಿಷ್ಯ ಇಲ್ಲಿಗೇ ಮುಕ್ತಾಯಗೊಳ್ಳಲಿದೆ..!
ಕೂಡಿಗೆಗೆ ಕೊಕ್..!
ರಾಜ್ಯದಲ್ಲಿ ಕೊಡಗು ಸೇರಿದಂತೆ ೭ ಜಿಲ್ಲೆಗಳ ವಸತಿ ನಿಲಯಗಳಲ್ಲಿ ಮಾತ್ರ ಹಾಕಿ ತರಬೇತಿ ನೀಡಲಾಗುತ್ತದೆ. ಆ ಪೈಕಿ ಬೆಂಗಳೂರಿನ ವಿದ್ಯಾನಗರದಲ್ಲಿನ ವಸತಿ ನಿಲಯದಿಂದ ಹಾಕಿಯನ್ನು ತೆಗೆದು ಹಾಕಲಾಗಿದೆ. ಇನ್ನುಳಿದಂತೆ ಕೂಡಿಗೆ ನಿಲಯಕ್ಕೆ ಕಿರಿಯ ಬಾಲಕರು ೪೦, ಬಾಲಕಿಯರು ೪೦ ಸೇರಿದಂತೆ ೮೦ ಮಂದಿಗೆ ಅವಕಾಶ ನೀಡಲಾಗಿದ್ದರೆ, ಅಥ್ಲೆಟಿಕ್ಸ್ನ್ನಲ್ಲಿ ೨೫ ಬಾಲಕರು ಹಾಗೂ ೨೫ ಬಾಲಕಿಯರಂತೆ ೫೦ಮಂದಿಗೆ ಅವಕಾಶ ನೀಡಲಾಗಿದೆ. ಆದರೆ, ಹಿರಿಯ ಬಾಲಕರ ನಿಲಯಕ್ಕೆ ಯಾವದೇ ಅವಕಾಶ ನೀಡಿಲ್ಲ. ಪೊನ್ನಂಪೇಟೆ ನಿಲಯಕ್ಕೆ ೩೫ ಕಿರಿಯ ಬಾಲಕರು ಹಾಗೂ ೨೫ ಬಾಲಕಿಯರಂತೆ ೫೦ ಮಂದಿಗೆ ಅವಕಾಶ ನೀಡಲಾಗಿದೆ. ಬಳ್ಳಾರಿಗೆ ೪೦ ಹಿರಿಯ, ೪೦ ಕಿರಿಯರಿಗೆ, ಗದಗದಲ್ಲಿ ೩೦ ಹಿರಿಯ, ೨೫ ಕಿರಿಯ, ಹಾಸನದಲ್ಲಿ ೨೫ ಹಿರಿಯ, ೨೫ ಕಿರಿಯ, ಮಂಗಳೂರಿನಲ್ಲಿ ೫೫ ಮಂದಿ ಕಿರಿಯರಿಗೆ, ಮೈಸೂರಿನಲ್ಲಿ ೬೦ ಮಂದಿ ಹಿರಿಯ ಬಾಲಕಿಯರಿಗೆ ಅವಕಾಶ ನೀಡಲಾಗಿದ್ದು, ಬೆಂಗಳೂರಿನ ಕಂಠೀರವ ನಿಲಯಕ್ಕೆ ೧೦೦ ಮಂದಿ ಹಿರಿಯ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ.
ಎಲ್ಲ ವ್ಯವಸ್ಥೆಗಳಿವೆ..!
ಪ್ರಸ್ತುತ ಕೂಡಿಗೆ ಕ್ರೀಡಾ ಶಾಲೆ/ನಿಲಯ ವಿಶಾಲವಾದ ಜಾಗದಲ್ಲಿದೆ. ಅಥ್ಲೆಟಿಕ್ಸ್ ಸೇರಿದಂತೆ ಹಾಕಿ ಆಟಕ್ಕೆ ಇಲ್ಲಿ ಎಲ್ಲ ರೀತಿಯ ವ್ಯವಸ್ಥೆಗಳಿವೆ. ಸುಸಜ್ಜಿತವಾದ ಕಟ್ಟಡ, ಅಥ್ಲೆಟಿಕ್ ಟ್ರಾö್ಯಕ್, ನೂತನ ಟರ್ಫ್ ಎಲ್ಲವೂ ಇದೆ. ನುರಿತ ತರಬೇತುದಾರರೂ ಇದ್ದಾರೆ. ಆದರೂ ಕೂಡ ನಿಲಯವನ್ನು ಮುಚ್ಚುವ ಪ್ರಯತ್ನ ಆಗುತ್ತಿರುವದು ದುರಂತವೇ ಸರಿ..!
ಕ್ರೀಡಾ ಸಾಧನೆಯಲ್ಲಿ ಮೇರುಮಟ್ಟದಲ್ಲಿರುವ ಕೊಡಗು ಜಿಲ್ಲೆಯಲ್ಲಿ ಕ್ರೀಡೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಇನ್ನಷ್ಟು ಕ್ರೀಡಾ ಶಾಲೆ/ ನಿಲಯಗಳನ್ನು ತೆರೆಯುವ ಬದಲಿಗೆ ಪ್ರಸ್ತುತ ಇರುವ ನಿಲಯಗಳನ್ನೇ ಮುಚ್ಚಲು ಹೊರಟಿರುವದು ಕೊಡಗಿನ ಕ್ರೀಡಾ ಸಾಧಕರಿಗೆ, ಕ್ರೀಡಾ ಕ್ಷೇತ್ರಕ್ಕೆ ಮಾಡುತ್ತಿರುವ ಅವಮಾನ. ಈ ನಿಟ್ಟಿನಲ್ಲಿ ಕ್ರೀಡಾ ಶಾಲೆ ತರುವಲ್ಲಿ ಶ್ರಮಿಸಿದ ಜನಪ್ರತಿನಿಧಿಗಳು, ಹೋರಾಟಗಾರರು, ಕ್ರಿಡಾ ಪ್ರೇಮಿಗಳು, ಸಂಘ ಸಂಸ್ಥೆಗಳು ಸರಕಾರದ ಗಮನ ಸೆಳೆಯುವ ಅವಶ್ಯಕತೆಯಿದೆ. ಇರುವ ನಿಲಯಗಳನ್ನು ಮೇಲ್ದರ್ಜೆಗೇರಿಸುವ ಬದಲಿಗೆ ಬೀಗ ಹಾಕುವಂತಹ ಕಾರ್ಯಕ್ಕೆ ಸರಕಾರ ಮುಂದಾಗಿರುವದು ಸೋಜಿಗವೇ ಸರಿ..!
? ಕುಡೆಕಲ್ ಸಂತೋಷ್