ವೀರಾಜಪೇಟೆ, ಜೂ. ೨೯: ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮನಗರ ಗ್ರಾಮದ ರಾಯಲ್ ಫ್ರೆಂಡ್ಸ್ ಕ್ರೀಡಾಸಂಸ್ಥೆ ರಾಮನಗರ (ಆರ್.ಕೆ.ಪಿ.ಎಲ್) ವತಿಯಿಂದ ಹೆಗ್ಗಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಾಲಾ ಬ್ಯಾಗ್ ವಿತರಣೆ ಮಾಡಲಾಯಿತು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ರಾಯಲ್ ಫ್ರೆಂಡ್ಸ್ ಕ್ರೀಡಾ ಸಂಸ್ಥೆಯ ಅಧ್ಯಕ್ಷ ಜಿಷ್ಣು ಕುಮಾರ್ ಕ್ರೀಡಾ ಸಂಸ್ಥೆಯು ಸತತ ಮೂರು ವರ್ಷಗಳಿಂದ ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ದೇಶಿಯ ಪ್ರೋ ಮ್ಯಾಟ್ ಕಬ್ಬಡಿ ಕ್ರೀಡೆಯನ್ನು ಆಯೋಜಿಸಿಕೊಂಡು ಬರುತ್ತಿದೆ. ಶಾಲಾ ಮುಖ್ಯೋಪಾಧ್ಯಾಯರ ಕೋರಿಕೆಯ ಮೇರೆಗೆ ಸಂಸ್ಥೆಯು ಆಯೋಜಿತ ಕ್ರೀಡೆಯಲ್ಲಿ ಉಳಿಕೆಯಾದ ಹಣ ಸುಮಾರು ೪೦,೦೦೦ ರೂ. ವೆಚ್ಚದಲ್ಲಿ ೯೮ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಾಲಾ ಬ್ಯಾಗ್‌ಗಳನ್ನು ವಿತರಣೆ ಮಾಡಲಾಗಿದೆ ಎಂದು ಹೇಳಿದರು. ಸ.ಹಿ.ಪ್ರಾ. ಶಾಲೆಯ ಮುಖ್ಯೋಪಾದ್ಯಾಯರಾದ ಸುಜಾತ ಮಾತನಾಡಿ ವಿದ್ಯಾ ದಾನ ಸರ್ವ ಶ್ರೇಷ್ಟವಾದುದು. ರಾಯಲ್ ಫ್ರೆಂಡ್ಸ್ ಕ್ರೀಡಾ ಸಂಸ್ಥೆಯು ಕ್ರೀಡೆಯನ್ನು ಬೆಳೆಸುವುದರೊಂದಿಗೆ ಸಮಾಜಿಕ ಕಳಕಳಿ ಹೊಂದಿರುವುದು ನಿಜಕ್ಕೂ ಶ್ಲಾಘನೀಯ ಎಂದರು. ಸಹಾರ ಫ್ರೆಂಡ್ಸ್ ಸೇವಾ ಸಂಸ್ಥೆ ವೀರಾಜಪೇಟೆ ಸಂಸ್ಥಾಪಕರಾದ ರವೂಫ್ ಮಾತನಾಡಿ ಸಂಘ ಸಂಸ್ಥೆಗಳು ಗ್ರಾಮೀಣ ವಿದ್ಯಾರ್ಥಿಗಳ ಏಳಿಗೆಗಾಗಿ ಸೇವಾ ಮನೋಭಾವದಿಂದ ವಿದ್ಯಾರ್ಥಿಗಳ ಚಟುವಟಿಕೆಗಳಿಗೆ ಪೂರಕವಾಗಿರುವ ಸಾಮಗ್ರಿಗಳನ್ನು ವಿತರಣೆ ಮಾಡುವುದು ಉತ್ತಮ ಎಂದು ಹೇಳಿದರು. ಕಾರ್ಯಕ್ರಮ ಉದ್ದೇಶಿಸಿ ಹಿರಿಯ ಶಿಕ್ಷಕಿ ಹೇಮಲತ ಮಾತನಾಡಿದರು.

ವೇದಿಕೆಯಲ್ಲಿ ರಾಯಲ್ ಫ್ರೆಂಡ್ಸ್ ರಾಮನಗರ ಸಂಸ್ಥೆಯ ಲವೀಶ್ ಟಿ.ಬಿ, ಸುರೇಶ್ ಎಂ.ಬಿ. ಲೋಕೇಶ್ ಬಿ.ಆರ್ ಹಾಗೂ ಶಾಲಾ ಅಭಿವೃದ್ದಿ ಸಮಿತಿ ಅದ್ಯಕ್ಷೆ ರೋಹಿಣಿ ಉಪಸ್ಥಿತರಿದ್ದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಗ್ಗಳ ಶಿಕ್ಷಕರುಗಳಾದ ನಾಜೀರಾ, ಲೂಸಿ ಸೇರಿದಂತೆ ಶಾಲಾ ಅಭಿವೃದ್ದಿ ಸಮಿತಿಯ ಸದಸ್ಯರು, ಮತ್ತು ರಾಯಲ್ ಫ್ರೆಂಡ್ಸ್ ಕ್ರೀಡಾ ಸಂಸ್ಥೆಯ ಸದಸ್ಯರು ಹಾಜರಿದ್ದರು.