ಮಡಿಕೇರಿ, ಜೂ.೨೯ : ಕುಶಾಲನಗರದ ನಿಸರ್ಗಧಾಮ ವ್ಯಾಪ್ತಿಯಲ್ಲಿ ನಡೆದಿರುವ ಮತಾಂತರ ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಕೊಡಗು ಜಿಲ್ಲಾ ಮಹಿಳಾ ಬಿಜೆಪಿ ಒತ್ತಾಯಿಸಿದೆ.

ಪತ್ರಿಕಾ ಪ್ರಕಟಣೆ ನೀಡಿರುವ ಮಹಿಳಾ ಬಿಜೆಪಿ ಜಿಲ್ಲಾಧ್ಯಕ್ಷೆ ಅನಿತಾ ಪೂವಯ್ಯ ಅವರು, ಮಹಿಳೆಯೊಬ್ಬರು ಹಾಗೂ ಆಕೆಯ ಪುತ್ರನ ಮತಾಂತರ ಪ್ರಕರಣ ಖಂಡನೀಯವಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಮತಾಂತರ ಪ್ರಕರಣವನ್ನು ವಿರೋಧಿಸಿ ಹಿಂದೂ ಸಂಘಟನೆಗಳ ವತಿಯಿಂದ ಜೂ.೩೦ ರಂದು (ಇಂದು) ಕುಶಾಲನಗರದಲ್ಲಿ ನಡೆಯುವ ಜನಾಂದೋಲನಕ್ಕೆ ಮಹಿಳಾ ಬಿಜೆಪಿ ಸಂಪೂರ್ಣ ಬೆಂಬಲವನ್ನು ನೀಡಲಿದೆ. ಅಮಾಯಕ ಹಿಂದೂ ಮಹಿಳೆಯರ ಮತಾಂತರವನ್ನು ಮತ್ತು ಹಿಂದೂಗಳ ಭಾವನೆಗೆ ಧಕ್ಕೆತರುವ ಯಾವುದೇ ಘಟನೆಗಳನ್ನು ಬಿಜೆಪಿ ಸಹಿಸುವುದಿಲ್ಲವೆಂದು ತಿಳಿಸಿದ್ದಾರೆ.

ಪವಿತ್ರ ಭೂಮಿ ಕಾವೇರಿ ನಾಡು ಕೊಡಗಿನಲ್ಲಿ ಮತಾಂತರ ಮತ್ತು ಲವ್ ಜಿಹಾದ್ ನಂತಹ ವಿಷಬೀಜಗಳನ್ನು ಬಿತ್ತುತ್ತಿರುವವರನ್ನು ಪೊಲೀಸ್ ಇಲಾಖೆ ತಕ್ಷಣ ಪತ್ತೆಹಚ್ಚಬೇಕು. ಜಿಲ್ಲೆಯಲ್ಲಿ ಇಲ್ಲಿಯವರೆಗೆ ನಡೆದಿರುವ ಪ್ರಕರಣಗಳ ಕುರಿತು ರಾಜ್ಯ ಗೃಹ ಇಲಾಖೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು. ರಾಜ್ಯ ಸರಕಾರ ಮತಾಂತರ ಮತ್ತು ಲವ್ ಜಿಹಾದ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅನಿತಾ ಪೂವಯ್ಯ ಒತ್ತಾಯಿಸಿದ್ದಾರೆ.