ಸುಂಟಿಕೊಪ್ಪ: ಇಂದಿನ ದಿನಗಳಲ್ಲಿ ಯುವ ಜನತೆಯು ದುಶ್ಚಟಗಳ ದಾಸತ್ವಕ್ಕೆ ಸಿಲುಕಿಕೊಂಡು ತಮ್ಮ ಬದುಕನ್ನು ವಿನಾಶಗೊಳಿಸಿಕೊಳ್ಳುತ್ತಿರುವುದು ಆಘಾತಕಾರಿ ಸಂಗತಿ ಎಂದು ಸುಂಟಿಕೊಪ್ಪ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ಅನಂತ್‌ಕುಮಾರ್ ಪಿಯುಸಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಸುಂಟಿಕೊಪ್ಪದ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಹಾಗೂ ಮಾದಕ ವಸ್ತು ವಿರೋಧಿ ಜಾಗೃತಿ ಕಾರ್ಯಕ್ರಮದಲ್ಲಿ ಇಂದಿನ ಯುವಪೀಳಿಗೆ ಮಾದಕ ದ್ರವ್ಯ, ಧೂಮಪಾನÀ ಹಾಗೂ ಮದ್ಯಪಾನದಂತಹ ದುಶ್ಚಟಗಳಿಗೆ ದಾಸರಾಗಿ ಬಲಿಯಾಗುತ್ತಿರುವುದು ಪೋಷಕರಿಗೂ, ಸಮಾಜಕ್ಕೂ ಅತಂಕಕಾರಿ ವಿಚಾರವಾಗಿದೆ. ಇದನ್ನು ತಡೆಯಲು ಮತ್ತು ಅವುಗಳಿಂದ ಆರೋಗ್ಯ ಹಾಗೂ ಭವಿಷ್ಯದ ಮೇಲಾಗುವ ಭೀಕರ ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಶ್ರೀಲತಾ ವಹಿಸಿದ್ದರು. ಈ ಸಂದರ್ಭ ಉಪನ್ಯಾಸಕರುಗಳಾದ ಸುನೀತಾ ಗಿರೀಶ್, ಈಶ, ಪೊಲೀಸ್ ಸಿಬ್ಬಂದಿಗಳಾದ ಸುದೀಶ್ ಕುಮಾರ್, ರಮೇಶ್ ಬಿರಾದರ್, ಮಹಿಳಾ ಸಿಬ್ಬಂದಿ ದಿವ್ಯ, ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮೂರ್ನಾಡು ಪದವಿಪೂರ್ವ ಕಾಲೇಜು

ನಾಪೋಕ್ಲು: ಇಲ್ಲಿಗೆ ಸಮೀಪದ ಮೂರ್ನಾಡು ಪದವಿಪೂರ್ವ ಕಾಲೇಜಿನ ಎನ್‌ಎಸ್‌ಎಸ್ ಘಟಕ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಯ ವತಿಯಿಂದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತುವಿನ ಬಳಕೆಯ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಗ್ರಾಮಾಂತರ ಠಾಣೆಯ ಠಾಣಾಧಿಕಾರಿ ಗೋಪಾಲ್ ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಸಹಾಯಕ ಠಾಣೆ ಅಧಿಕಾರಿ ದಿನೇಶ್ ಮಾದಕ ವಸ್ತುವಿನ ದುಷ್ಪರಿಣಾಮ ಮತ್ತು ಅಪ್ರಾಪ್ತರು ವಾಹನ ಚಲಾಯಿಸುವುದರಿಂದ ಆಗುವ ಅನಾಹುತಗಳ ಬಗ್ಗೆ ಅರಿವು ಮೂಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿದ್ಯಾಸಂಸ್ಥೆ ಕಾರ್ಯದರ್ಶಿ ವೇಣು ಅಪ್ಪಣ್ಣ, ಪಿಎಸ್‌ಐ ಪುಟ್ಟಮ್ಮ ಮತ್ತು ಪ್ರಾಂಶುಪಾಲೆ ದೇವಕಿ ಮಾತನಾಡಿದರು. ಈ ಸಂದರ್ಭ ಬೋಧಕ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶ್ರೀ ಸದ್ಗುರು ಅಪ್ಪಯ್ಯ ಪ್ರೌಢಶಾಲೆ

ಕೂಡಿಗೆ: ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ವತಿಯಿಂದ ಕೂಡಿಗೆಯ ಹೆಗ್ಗಡಹಳ್ಳಿ ಗ್ರಾಮದಲ್ಲಿರುವ ಶ್ರೀ ಸದ್ಗುರು ಅಪ್ಪಯ್ಯ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿಯನ್ನು ಕುಶಾಲನಗರ ಪೊಲೀಸ್ ಠಾಣೆಯ ಸಹಾಯಕ ಠಾಣಾಧಿಕಾರಿ ಕುಮಾರಿ ನೀಡಿದರು.

ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪೋಕ್ಸೋ, ಸೈಬರ್ ಕ್ರೆöÊಂ ಅಪರಾಧಗಳು, ಬಾಲ್ಯ ವಿವಾಹ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ, ರಸ್ತೆ ಸುರಕ್ಷತೆಯ ಕುರಿತು, ಶಿಕ್ಷಣದ ಮಹತ್ವದ ಬಗ್ಗೆ, ಇಆರ್‌ಎಸ್‌ಎಸ್ ೧೧೨, ಮಕ್ಕಳ ಸಹಾಯವಾಣಿ ೧೦೯೮, ಸೈಬರ್ ಕ್ರೆöÊಂ ಸಹಾಯವಾಣಿ ೧೯೩೦ ಇವುಗಳ ಬಳಸುವಿಕೆಯ ಬಗ್ಗೆ ಸೂಕ್ತ ಕಾನೂನು ಅರಿವು ಸೇರಿದಂತೆ ಇಲಾಖೆಯ ವಿವಿಧ ಮಾಹಿತಿಯನ್ನು ಒದಗಿಸಲಾಯಿತು.

ಈ ಸಂದರ್ಭ ಸೋಮವಾರಪೇಟೆ ತಾಲೂಕು ಕ್ಷೇತ್ರ ಸಮನ್ವಯ ಶಿಕ್ಷಣಾಧಿಕಾರಿ ಮಂಜೇಶ್, ಶಾಲಾ ಮುಖ್ಯೋಪಾಧ್ಯಾಯಿನಿ ಪುಷ್ಪ, ಶಾಲಾ ಶಿಕ್ಷಕರ ವೃಂದ, ವಿದ್ಯಾರ್ಥಿಗಳು ಇದ್ದರು.