ಮಡಿಕೇರಿ, ಜೂ. ೨೮: ನಗರದ ಐತಿಹಾಸಿಕ ಕೋಟೆ ಅರಮನೆ ಹಾಗೂ ಗದ್ದುಗೆಯನ್ನು ಸಂರಕ್ಷಿಸುವAತೆ ಹಾಗೂ ಅಭಿವೃದ್ಧಿಗೊಳಿಸಲು ಸಹಕರಿಸುವಂತೆ ಕೊಡಗಿನವರಾದ ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ಆಯೋಗದ ನಿವೃತ್ತ ಆಯುಕ್ತ ಜೆ.ಎಸ್. ವಿರೂಪಾಕ್ಷಯ್ಯ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರದ ಮುಖೇನ ಮನವಿ ಮಾಡಿದ್ದಾರೆ.

ಕೊಡಗನ್ನು ಆಳಿದ ರಾಜರು ನಿರ್ಮಿಸಿದ ಮಡಿಕೇರಿ ಅರಮನೆ, ಕೋಟೆ ಹಾಗೂ ರಾಜವಂಶಸ್ಥರ ಗದ್ದುಗೆಗಳು ಸೇರಿದಂತೆ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವುಳ್ಳ ಸ್ಮಾರಕಗಳು ದುಸ್ಥಿತಿಯಲ್ಲಿವೆ. ಇವುಗಳ ಕಾಯಕಲ್ಪಕ್ಕೆ ಸೂಕ್ತ ಸ್ಪಂದನ ದೊರೆಯದ ಹಿನ್ನೆಲೆ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಲಾಯಿತು. ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಮಂಡಿಸಲಾದ ವಾದಗಳು, ದಾಖಲೆಗಳು ಹಾಗೂ ಐತಿಹಾಸಿಕ ನಿದರ್ಶನಗಳನ್ನು ಪರಿಗಣಿಸಿ, ಅಂದಿನ ಮುಖ್ಯ ನ್ಯಾಯಮೂರ್ತಿಗಳಾದ ಅಭಯ್ ಶ್ರೀನಿವಾಸ್ ಓಕ್ ಅವರ ಪೀಠವು ಕರ್ನಾಟಕ ಸರ್ಕಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿತ್ತು. ಅದರನ್ವಯ, ಮಡಿಕೇರಿ ಅರಮನೆಯ ದುರಸ್ತಿ ಮತ್ತು ಸಂರಕ್ಷಣೆ ಕಾರ್ಯಕ್ಕಾಗಿ ಸುಮಾರು ರೂ. ೧೦.೫೦ ಕೋಟಿ ಅನುದಾನವನ್ನು ಬಿಡುಗಡೆ ಮಾಡಿ, ಕೇಂದ್ರ ಪುರಾತತ್ವ ಇಲಾಖೆಯ ಮೂಲಕ ಕಾರ್ಯ ಕೈಗೊಳ್ಳುವಂತೆ ಆದೇಶಿಸಲಾಗಿತ್ತು. ಈ ಅನುದಾನದ ಆಧಾರದ ಮೇಲೆ ಮಡಿಕೇರಿ ಅರಮನೆಯ ದುರಸ್ತಿ ಕಾರ್ಯ ಆರಂಭಗೊAಡಿದ್ದರೂ, ಸುಮಾರು ನಾಲ್ಕು ವರ್ಷಗಳಾದ ನಂತರವೂ ಕಾಮಗಾರಿ ಸಂಪೂರ್ಣವಾಗಿ ಪೂರ್ಣಗೊಂಡಿಲ್ಲ. ಇದಲ್ಲದೆ, ಅರಮನೆಯ ಸುತ್ತಲಿನ ಐತಿಹಾಸಿಕ ಕೋಟೆಯ ದುರಸ್ತಿ ಹಾಗೂ ಸಂರಕ್ಷಣೆ ಕಾರ್ಯ ಇನ್ನೂ ಪ್ರಾರಂಭವಾಗಿಲ್ಲ. ಈ ಕಾರ್ಯಗಳಿಗೆ ಅಂದಾಜು ರೂ. ೩ ಕೋಟಿ ಹಾಗೂ ಅರಮನೆ ಸುತ್ತಮುತ್ತಲಿನ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಅವುಗಳ ಅಭಿವೃದ್ಧಿ ಹಾಗೂ ದುರಸ್ತಿಗೂ ಅನುದಾನದ ಅಗತ್ಯವಿದೆ. ಒಟ್ಟಾರೆಯಾಗಿ ರೂ. ೫ ಕೋಟಿ ಹೆಚ್ಚುವರಿ ಅನುದಾನದ ಅವಶ್ಯಕತೆ ಇದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಅಂದಿನ ರಾಜವಂಶಸ್ಥರ ಗದ್ದುಗೆಗಳ ಸಂರಕ್ಷಣೆಗಾಗಿ ಸುಮಾರು ೧೯ ಎಕರೆ ಭೂಮಿಯನ್ನು ಮೀಸಲಿರಿಸಲಾಗಿದ್ದು, ಅದರಲ್ಲಿ ಸುಮಾರು ೧.೫೦ ಎಕರೆ ಭೂಮಿಯು ಅತಿಕ್ರಮಣಕ್ಕೊಳಗಾಗಿದೆ. ಈ ಅತಿಕ್ರಮಣವನ್ನು ತೆರವುಗೊಳಿಸಲು ಉಚ್ಚ ನ್ಯಾಯಾಲಯವು ನಿರ್ದೇಶನ ನೀಡಿದ್ದರೂ, ವಾಸ್ತವಾಂಶಗಳನ್ನು ಸಮರ್ಪಕವಾಗಿ ನ್ಯಾಯಾಲಯದ ಗಮನಕ್ಕೆ ತರದ ಕಾರಣ, ಕೆಲ ವ್ಯಕ್ತಿಗಳು ಏಕಸದಸ್ಯ ಪೀಠದಿಂದ ತಡೆಯಾಜ್ಞೆ ಪಡೆದಿದ್ದಾರೆ. ಪ್ರಸ್ತುತ ಈ ತಡೆಯಾಜ್ಞೆಯು ಅತಿಕ್ರಮಣಕಾರರಿಗೆ ಅನುಕೂಲಕರವಾಗಿದ್ದು, ಅದನ್ನು ತೆರವುಗೊಳಿಸಲು ಸರ್ಕಾರದ ಪರ ವಕೀಲರು ೪ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ) ಅಗತ್ಯ ಕ್ರಮ ಕೈಗೊಂಡಿರುವುದು ಕಂಡುಬರುತ್ತಿಲ್ಲ. ಪರಿಣಾಮವಾಗಿ, ರಾಜವಂಶಸ್ಥರ ಗದ್ದುಗೆಗಳ ಸಂರಕ್ಷಣೆ ಸಮರ್ಪಕವಾಗಿ ನಡೆಯುತ್ತಿಲ್ಲ ಹಾಗೂ ಸಂಪ್ರದಾಯಬದ್ಧ ಪೂಜಾ ಕಾರ್ಯಗಳೂ ನಿರ್ವಹಣೆಯಾಗುತ್ತಿಲ್ಲ. ಈ ಹಿನ್ನೆಲೆ ಸಂಬAಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳು, ಕೊಡಗು ಜಿಲ್ಲೆಯ ಜನಪ್ರತಿನಿಧಿಗಳು, ಸ್ಥಳೀಯ ಶಾಸಕರು ಹಾಗೂ ಲೋಕಸಭಾ ಸದಸ್ಯರನ್ನು ಒಳಗೊಂಡ ಸಭೆಯನ್ನು ನಡೆಸಿ ಮಡಿಕೇರಿ ಅರಮನೆ, ಕೋಟೆ ಹಾಗೂ ರಾಜವಂಶಸ್ಥರ ಗÀದ್ದುಗೆಗಳ ಸ್ಥಳ ಪರಿಶೀಲನೆ ನಡೆಸಿ, ಅವುಗಳ ಸಮಗ್ರ ಸಂರಕ್ಷಣೆ, ಅಭಿವೃದ್ಧಿ ಹಾಗೂ ಅತಿಕ್ರಮಣ ತೆರವುಗೊಳಿಸುವ ನಿಟ್ಟಿನಲ್ಲಿ ಅಗತ್ಯ ಮತ್ತು ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಕೋರಿದ್ದಾರೆ.