ಪೊನ್ನಂಪೇಟೆ, ಜೂ. ೨೮: ಪೊನ್ನಂಪೇಟೆ ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಹಾಗೂ ಅಪಘಾತಗಳನ್ನು ತಡೆಗಟ್ಟುವ ಉದ್ದೇಶದಿಂದ ಆಯಕಟ್ಟಿನ ಸ್ಥಳಗಳಲ್ಲಿ ಅಳವಡಿಸಲು ಮೂರು ಕಾನ್ವೆಕ್ಸ್ ಮಿರರ್‌ಗಳನ್ನು ಪೊನ್ನಂಪೇಟೆ - ಕಾಟ್ರಕೊಲ್ಲಿ ಮಾತಾಯಿ ಪುರುಷ ಸ್ವಸಹಾಯ ಸಂಘದ ವತಿಯಿಂದ ಪೊನ್ನಂಪೇಟೆ ಪೊಲೀಸ್ ಠಾಣೆಗೆ ಕೊಡುಗೆ ನೀಡಲಾಯಿತು. ಇದೇ ಸಂದರ್ಭ ಸಂಘದ ವತಿಯಿಂದ ಇತ್ತೀಚೆಗೆ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾದ ಗೋಣಿಕೊಪ್ಪ ವೃತ್ತ ನಿರೀಕ್ಷಕ ಶಿವರಾಜ್ ಆರ್. ಮುದೋಳ್ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ವೃತ್ತ ನಿರೀಕ್ಷಕ ಶಿವರಾಜ್ ಆರ್. ಮುದೋಳ್, ಕಳೆದ ಎರಡೂವರೆ ವರ್ಷಗಳಿಂದ ಪಟ್ಟಣದ ಪ್ರಮುಖ ತಿರುವುಗಳಲ್ಲಿ ಕಾನ್ವೆಕ್ಸ್ ಮಿರರ್‌ಗಳನ್ನು ಅಳವಡಿಸುವ ನಿಟ್ಟಿನಲ್ಲಿ ಇಲಾಖೆಯ ಮೂಲಕ ಹಾಗೂ ದಾನಿಗಳ ಸಹಕಾರದಿಂದ ಪ್ರಯತ್ನಿಸುತ್ತಿದ್ದೆ. ಇದೀಗ ಮಾತಾಯಿ ಪುರುಷ ಸ್ವಸಹಾಯ ಸಂಘವು ಸಮಾಜಮುಖಿ ಕಾಳಜಿಯಿಂದ ಮಿರರ್‌ಗಳನ್ನು ನೀಡಿರುವುದು ಸಂತಸ ತಂದಿದೆ ಎಂದರು. ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ಠಾಣಾಧಿಕಾರಿ ನವೀನ್ ಜಿ., ಪೊಲೀಸ್ ಸಿಬ್ಬಂದಿ, ಮಾತಾಯಿ ಪುರುಷ ಸ್ವಸಹಾಯ ಸಂಘದ ಅಧ್ಯಕ್ಷ ಎಂ.ಬಿ. ಅನೀಸ್, ಕಾರ್ಯದರ್ಶಿ ಇ.ಎಂ. ಹರೀಶ್, ಖಜಾಂಚಿ ಕೆ.ಹೆಚ್. ಉಮ್ಮರ್ ಹಾಗೂ ಸದಸ್ಯರಾದ ಕೆ.ಬಿ. ವಿನು, ಕರುಣಾಕರ, ಸುದರ್ಶನ್, ಸಾದಿಕ್, ಕುಟ್ಟಪ್ಪ, ಮಹಮ್ಮದ್, ಸತೀಶ್, ಅಣ್ಣಪ್ಪ, ರುದ್ರಪ್ಪ, ಹನೀಫ್, ಮುರುಳಿ, ಸುರೇಶ್ ಟಿ.ವಿ, ಶೇಖರ್, ಹೆಚ್.ವಿ. ಸುರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.