ಕುಶಾಲನಗರ, ಜೂ. ೨೭: ಸಮಾಜ ಸೇವೆಯ ಮೂಲಕ ಇತರರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿ ಕೈಜೋಡಿಸುತ್ತಿರುವ ಕೊಡಗು ಜಿಲ್ಲೆಯ ಮಾಧ್ಯಮ ಸ್ಪಂದನ ತಂಡದ ಕೊಡುಗೆ ಅಪಾರ ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಮಾಧ್ಯಮ ಸ್ಪಂದನ, ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಕೊಡಗು ರಕ್ತನಿಧಿ ಕೇಂದ್ರ ಹಾಗೂ ಸೈರಸ್ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಕುಶಾಲನಗರದಲ್ಲಿ ಆಯೋಜಿಸಲಾಗಿದ್ದ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದÀರು. ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರೂ ಇತರರ ಸಮಸ್ಯೆಗಳಿಗೆ ಮಿಡಿಯುವ ಅಗತ್ಯತೆಯಿದೆ. ಜಿಲ್ಲೆಯ ಪತ್ರಕರ್ತರು ಮಾಧ್ಯಮ ಸ್ಪಂದನ ಎಂಬ ತಂಡವನ್ನು ಕಟ್ಟಿ ಸಮಾಜಮುಖಿ ಕೆಲಸಗಳಲ್ಲಿ ಸದಾ ತಮ್ಮನ್ನು ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಮಾಧ್ಯಮ ಸ್ಪಂದನದ ಸ್ಥಾಪಕ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಅಸಹಾಯಕ ಪರಿಸ್ಥಿತಿಯಲ್ಲಿರುವ ಪ್ರತಿಯೊಬ್ಬರಿಗೂ ಸಹಾಯ ಮಾಡುವ ಮನಸ್ಥಿತಿ ಎಲ್ಲರಲ್ಲೂ ಇರಬೇಕು. ಸೇವಾ ಕಾರ್ಯಗಳು ಸನ್ಮಾನ ಗೌರವಗಳಿಗೆ ಸೀಮಿತವಾಗಬಾರದು ಎಂದರು. ಯಾವುದೇ ಫಲಪೇಕ್ಷೆ ಇಲ್ಲದೆ ಮಾಡಬೇಕು.

ರಕ್ತದಾನ ಶಿಬಿರದ ಮೂಲಕ ಸಂಗ್ರಹಿಸುವ ರಕ್ತವನ್ನು ರಕ್ತನಿಧಿ ಕೇಂದ್ರಕ್ಕೆ ನೀಡಲಾಗುತ್ತದೆ ಎಂದರು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅನು ಕಾರ್ಯಪ್ಪ ಮಾತನಾಡಿ, ರಕ್ತದ ಅಗತ್ಯವಿದ್ದವರಿಗೆ ಮಾತ್ರ ರಕ್ತದ ಪ್ರಾಮುಖ್ಯತೆ ತಿಳಿದಿರುತ್ತದೆ. ಇಂತಹ ಶಿಬಿರಗಳು ಹಲವಾರು ಜೀವಗಳನ್ನು ಉಳಿಸಲು ಸಹಕಾರಿ ಆಗುತ್ತದೆ ಎಂದರು.

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕಿ ಸವಿತಾ ರೈ ಮಾತನಾಡಿ, ಮಾಧ್ಯಮ ಸ್ಪಂದನ ತಂಡ ೨೦೧೯ ರಿಂದಲೂ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡು ಬಂದಿದ್ದು, ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ ಎಂದರು.

ಅತಿಥಿಯಾಗಿ ಆಗಮಿಸಿದ್ದ ಜಿ.ಎಲ್.ನಾಗರಾಜ್ ಮಾತನಾಡಿ, ರಕ್ತದಾನ ಶ್ರೇಷ್ಠ ದಾನವಾಗಿದೆ ಎಂದರು. ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ ಎನ್ ಚಂದ್ರಮೋಹನ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಬಿರದ ಸಂಚಾಲಕ ಕೆ.ಬಿ. ಷಂಶುದ್ಧೀನ್ ವಹಿಸಿದ್ದರು. ಕೊಡಗು ರಕ್ತನಿಧಿ ಕೇಂದ್ರದ ಮುಖ್ಯಸ್ಥರಾದ ಡಾ.ಕೆ.ಪಿ.ಕರುಂಬಯ್ಯ ರಕ್ತ ಹಾಗೂ ರಕ್ತದಾನದ ಪ್ರಾಮುಖ್ಯತೆ ಬಗ್ಗೆ ಉಪನ್ಯಾಸ ನೀಡಿದರು.

ಶಿಬಿರದಲ್ಲಿ ಒಟ್ಟು ೯೦ ದಾನಿಗಳಿಂದ ರಕ್ತವನ್ನು ಸಂಗ್ರಹಿಸಲಾಯಿತು. ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಸಂಘ ಸಂಸ್ಥೆಗಳ ಪ್ರಮುಖರು ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ್ದರು. ಶಿಬಿರದಲ್ಲಿ ಪತ್ರಕರ್ತರಿಗೆ ಹಾಗೂ ಕುಟುಂಬಸ್ಥರಿಗೆ ಸೈರಸ್ ಆಸ್ಪತ್ರೆ ಮೂಲಕ ಉಚಿತ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗಿತ್ತು. ಮಾಧ್ಯಮ ಸ್ಪಂದನ ತಂಡದ ಸದಸ್ಯ ರೆಜಿತ್ ಕುಮಾರ್ ನಿರೂಪಿಸಿದರು. ಟಿ.ಆರ್.ಪ್ರಭುದೇವ್ ಸ್ವಾಗತಿಸಿದರು. ಎಚ್.ಸಿ.ಜಯಪ್ರಕಾಶ್ ವಂದಿಸಿದರು. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಈ ಸಂದರ್ಭ ಸೈರಸ್ ಆಸ್ಪತ್ರೆಯ ಮೂಳೆ ಶಸ್ತçಚಿಕಿತ್ಸೆ ತಜ್ಞರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ ಟಿ.ಪಿ.ಜಿನಾಶ್, ಡಾ ಜೈನುಲ್ ಅಬಿದೀನ್, ಹಾಸಿರ್, ವ್ಯವಸ್ಥಾಪಕರಾದ ಅಕ್ಷತ್, ಮಾಧ್ಯಮ ಸ್ಪಂದನ ತಂಡದ ಸದಸ್ಯರು, ಕುಶಾಲನಗರ ಪತ್ರಕರ್ತರ ಸಂಘದ ಪದಾಧಿಕಾರಿಗಳು ರಕ್ತ ನಿಧಿ ಕೇಂದ್ರದ ಸಿಬ್ಬಂದಿ, ಸೈರಸ್ ಆಸ್ಪತ್ರೆಯ ಸಿಬ್ಬಂದಿ ಇದ್ದರು.