ಶ್ರೀಮಂಗಲ, ಜೂ. ೨೭: ವ್ಯಾಸಂಗ ಮಾಡಲು ಸಮೀಪದಲ್ಲಿ ಶಾಲೆ, ಆಟದ ಮೈದಾನಗಳೊಂದಿಗೆ ಸುಸಜ್ಜಿತವಾದ ವಸತಿ ನಿಲಯ ನಿರ್ಮಾಣವಾಗಿದ್ದು, ಈ ಭಾಗದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಸರಕಾರದ ಈ ಸೌಲಭ್ಯವನ್ನು ಪಡೆದು ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕೆಂದು ವೀರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಹೇಳಿದರು.
ಪೊನ್ನಂಪೇಟೆ ತಾಲೂಕು ವ್ಯಾಪ್ತಿಯ ಕುಟ್ಟದಲ್ಲಿ ರೂ ೩.೨೩ ಕೋಟಿ ಅನುದಾನದಲ್ಲಿ ಸುಸಜ್ಜಿತವಾಗಿ ನಿರ್ಮಿಸಿರುವ ಪರಿಶಿಷ್ಟ ಪಂಗಡದ ಮೆಟ್ರಿಕ್ ಪೂರ್ವ ಬಾಲಕರ ಸುಸಜ್ಜಿತ ವಿದ್ಯಾರ್ಥಿ ವಸತಿ ನಿಲಯವನ್ನು ನೆರವೇರಿಸಿ ಅವರು ಮಾತನಾಡಿದರು.
೨೦೨೪ನೇ ಇಸವಿ ಜನವರಿ ತಿಂಗಳಲ್ಲಿ ಈ ವಸತಿ ನಿಲಯ ಸ್ಥಾಪನೆಗೆ ಭೂಮಿಪೂಜೆಯನ್ನು ನೆರವೇರಿಸಲಾಗಿತ್ತು. ಇದೀಗ ವಸತಿ ನಿಲಯ ನಿರ್ಮಾಣವಾಗಿ ಉದ್ಘಾಟನೆ ಮಾಡಲಾಗುತ್ತಿದೆ. ಹೆಚ್ಚು ಬುಡಕಟ್ಟು ಜನಾಂಗ ವಾಸವಿರುವ ಪ್ರದೇಶವಾದ ಕುಟ್ಟ ಮತ್ತು ನಾಗರಹೊಳೆ ಭಾಗದ ವಿದ್ಯಾರ್ಥಿಗಳಿಗೆ ಬಹಳ ಸುಸಜ್ಜಿತವಾಗಿ ವಸತಿ ನಿಲಯವನ್ನು ನಿರ್ಮಾಣ ಮಾಡಲಾಗಿದೆ. ಕಟ್ಟಡದ ಕಾಮಗಾರಿಯೂ ಗುಣಮಟ್ಟದಿಂದ ಕೂಡಿದೆ. ಇದೇ ಶೈಕ್ಷಣಿಕ ವರ್ಷದಿಂದ ವಸತಿಗೃಹ ಆರಂಭವಾಗುತ್ತಿದೆ. ೧೦೦ ಮಕ್ಕಳಿಗೆ ಇಲ್ಲಿ ವಸತಿಗೆ ಅವಕಾಶವಿದ್ದು, ೨೪ ಕೊಠಡಿ ಲಭ್ಯವಿದೆ. ಈಗಾಗಲೇ ೫೨ ಮಕ್ಕಳು ಇದ್ದಾರೆ. ಇಲ್ಲಿ ಓದುವ ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದು ಶಾಸಕ ಪೊನ್ನಣ್ಣ ಹೇಳಿದರು.
ಐಟಿಡಿಪಿ ಅಧಿಕಾರಿ ಹೊನ್ನೇಗೌಡ ಅವರು ಮುಂದಿನ ವಾರ ನಿವೃತ್ತಿಯಾಗುತ್ತಿದ್ದು ನಿವೃತ್ತಿಗೆ ಮೊದಲು ವಸತಿ ಗೃಹವನ್ನು ಅವರ ಆಶಯಂತೆ ಪೂರ್ಣಗೊಳಿಸಿ ಉದ್ಘಾಟನೆ ಮಾಡಲಾಗಿದೆ ಎಂದು ಹೇಳಿದರು. ಈ ಸಂದರ್ಭ ಶಾಸಕರು ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದರು.
ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ಮಾಜಿ ತಾ. ಪಂ. ಸದಸ್ಯ ಪಲ್ವಿನ್ ಪೂಣಚ್ಚ, ಕುಟ್ಟ ವಲಯ ಕಾಂಗ್ರೆಸ್ ಅಧ್ಯಕ್ಷ ಹೆಚ್ ವೈ ರಾಮಕೃಷ್ಣ ಪ್ರಮುಖರಾದ ಮುಕ್ಕಾಟಿರ ನವೀನ್, ತೀತಿರ ಮಂದಣ್ಣ, ಜಿ.ಪಂ. ಮಾಜಿ ಸದಸ್ಯ ಬಾನಂಡ ಪ್ರಥ್ಯು, ಚೊಟ್ಟೆಯಂಡಮಾಡ ವಿಶು,ಅಪ್ಪಚಂಗಡ ಮೋಟಯ್ಯ, ಕೆ. ಬಾಡಗ ಗ್ರಾ. ಪಂ. ಮಾಜಿ ಅಧ್ಯಕ್ಷ ಚೆಪ್ಪುಡಿರ ಬೋಪಣ್ಣ, ನಾಲ್ಕೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ತೀತಿರ ಕಟ್ಟಿ ಕಾರ್ಯಪ್ಪ, ಕೆ.ಬಾಡÀಗ ವಲಯ ಅಧ್ಯಕ್ಷ ಚಿಮ್ಮಣಮಾಡ ರವಿ ನರೇಂದ್ರ, ಶೇಖರ್, ಕೇಚಮಾಡ ಸಿದ್ದು, ರಾಜನ್, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಕೊಡಗು ಜಿಲ್ಲೆಯ ಸಮನ್ವಯ ಅಧಿಕಾರಿ ಹೊನ್ನೇಗೌಡ ಸೇರಿದಂತೆ ಪ್ರಮುಖರು ಹಾಜರಿದ್ದರು.
- ಹರೀಶ್ ಮಾದಪ್ಪ