ಮಡಿಕೇರಿ, ಜೂ. ೨೭: ಹುಸಿ ಬಾಂಬ್ ಬೆದರಿಕೆ ಸಂದೇಶದಿAದ ಮತ್ತೊಮ್ಮೆ ಫಜೀತಿಯೊಂದಿಗೆ ಆತಂಕದ ವಾತಾವರಣ ಸೃಷ್ಟಿಯಾದ ಪ್ರಸಂಗ ಮರುಕಳಿಸಿದೆ. ಈ ದಿನ ಮಡಿಕೇರಿಯಲ್ಲಿರುವ ಜಿಲ್ಲಾ ನ್ಯಾಯಾಲಯ ಕಟ್ಟಡ ಹಾಗೂ ಸನಿಹದಲ್ಲೇ ಇರುವ ಕೇಂದ್ರೀಯ ವಿದ್ಯಾಲಯ ಶಾಲೆಗೆ ಈ ಹುಸಿ ಬಾಂಬ್ ಸಂದೇಶ ನ್ಯಾಯಾಲಯದ ಇ- ಮೇಲ್ ಮೂಲಕ ಬಂದಿತ್ತು. ತಾ. ೨೬ರ ರಾತ್ರಿ ೯.೫೫ಕ್ಕೆ ಸಂದೇಶ ಬಂದಿದ್ದು, ತಾ. ೨೭ರ ಮಧ್ಯಾಹ ಸ್ಫೋಟಗೊಳ್ಳುವ ಬೆದರಿಕೆ ಒಡ್ಡಲಾಗಿತ್ತು. ಸಂದೇಶದ ಬಗ್ಗೆ ಮಾಹಿತಿ ಬಂದ ತಕ್ಷಣ ಪೊಲೀಸರು ಬಾಂಬ್ ನಿಷ್ಕಿçÃಯ ದಳ, ಶ್ವಾನದಳ ಕಾರ್ಯಾಚರಣೆಗೆ ಇಳಿಯಬೇಕಾಯಿತು. ನ್ಯಾಯಾಲಯ ಕಟ್ಟಡ ಆವರಣ, ಕೇಂದ್ರೀಯ ಶಾಲೆಯ ಆವರಣದಲ್ಲಿ ಕೆಲತಾಸು ತಪಾಸಣೆ ನಡೆಸಲಾಯಿತು. ಸಿಬ್ಬಂದಿಗಳೂ, ವಿದ್ಯಾರ್ಥಿಗಳನ್ನು ಹೊರ ಕಳುಹಿಸಬೇಕಾದ ಅನಿವಾರ್ಯತೆಯಿಂದ ಫಜೀತಿ ಎದುರಿಸುವಂತಾಗಿತ್ತು. ಈ ಸಂದರ್ಭ ಈ ಭಾಗದಲ್ಲಿ ಜನಜಂಗುಳಿಯೂ ಏರ್ಪಟ್ಟಿತ್ತು. ಮುಂಜಾಗೃತಾ ಕ್ರಮವಾಗಿ ವಿದ್ಯಾರ್ಥಿಗಳನ್ನು ತಮ್ಮ - ತಮ್ಮ ಪೋಷಕರೊಂದಿಗೆ ವಾಪಸ್ಸು ಕಳಿಸಿದ್ದಾಗಿ ಪ್ರಾಂಶುಪಾಲ ಭಾಗ್ಯಾನಂದಮ್ ಹೇಳಿದರು.

ನ್ಯಾಯಾಲಯ ಕಟ್ಟಡಕ್ಕೆ ಇದು ಮೂರನೇ ಬಾರಿಗೆ ಬಂದ ಹುಸಿ ಬಾಂಬ್ ಸಂದೇಶವಾಗಿದೆ. ಈ ಬಾರಿ ಕೇಂದ್ರ ಸ್ವಾಮ್ಯದ ಕೇಂದ್ರೀಯ ವಿದ್ಯಾಲಯಕ್ಕೂ ಕಿಡಿಗೇಡಿಗಳು ಈ ಸಂದೇಶ ರವಾನಿಸಿದ್ದರು.

ಬಾಂಬ್ ನಿಷ್ಕಿçÃಯದಳ, ಶ್ವಾನದಳದ ಕಾರ್ಯಾಚರಣೆ ಬಳಿಕ ಪರಿಸ್ಥಿತಿ ತಿಳಿಯಾಯಿತು. ಪದೇ ಪದೇ ಈ ರೀತಿಯಾಗಿ ಹುಸಿ ಬಾಂಬ್ ಸಂದೇಶ ಬರುತ್ತಿರುವುದು ಪೊಲೀಸ್ ಇಲಾಖೆಗೂ ಸವಾಲಾಗಿದೆ. ಕೊಡಗು ಮಾತ್ರವಲ್ಲದೆ ರಾಜ್ಯದ ಇನ್ನಿತರ ಕಡೆಗಳಲ್ಲೂ ಈ ರೀತಿಯ ಪ್ರಸಂಗಗಳು ಎದುರಾಗುತ್ತಿವೆ. ಈ ಕುರಿತು ಪ್ರತಿಕ್ರಿಯಿಸಿದ ಎಸ್.ಪಿ. ಬಿಂದುಮಣಿ ಅವರು ಬೆದರಿಕೆ ಮೂಲ ಪತ್ತೆಗೆ ತನಿಖೆ ನಡೆಸುತ್ತಿರುವುದಾಗಿ ‘ಶಕ್ತಿ’ಗೆ ತಿಳಿಸಿದರು.

ಮಡಿಕೇರಿ ನ್ಯಾಯಾಲಯದೊಂದಿಗೆ ಮಂಗಳೂರು, ಧಾರವಾಡದ ನ್ಯಾಯಾಲಯ ಕಟ್ಟಡಕ್ಕೂ ಈ ರೀತಿಯ ಹುಸಿ ಬಾಂಬ್ ಸಂದೇ ಬಂದಿದ್ದು ಅಲ್ಲಿಯೂ ಆತಂಕದ ವಾತಾವರಣ ಸೃಷ್ಟಿಯಾಗಿದ್ದಾಗಿ ತಿಳಿದುಬಂದಿದೆ. ಇಡೀ ರಾಜ್ಯಾದ್ಯಂತ ಈ ಪ್ರಸಂಗ ತಲೆನೋವಾಗಿ ಪರಿಣಮಿಸಿದ್ದು ಇಲಾಖೆಗೆ ಸವಾಲಾಗಿದೆ.