ವಿಶೇಷ ವರದಿ: ಪುತ್ತರಿರ ಕರುಣ್ ಕಾಳಯ್ಯ
ಚೆಟ್ಟಳ್ಳಿ, ಜೂ. ೨೬: ಪ್ರಕೃತಿ ಸೌಂದರ್ಯ, ಹಚ್ಚಹಸಿರಿನ ಬೆಟ್ಟಗಳು, ದಟ್ಟ ಅರಣ್ಯಗಳು ಹಾಗೂ ಧುಮ್ಮಿಕ್ಕುವ ನದಿಗಳಿಗೆ ಹೆಸರು ವಾಸಿಯಾಗಿರುವ ಕೊಡಗು ಜಿಲ್ಲೆಯ ಸಾಹಸ ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆಯಾದ ವೈಟ್ ವಾಟರ್ ರ್ಯಾಫ್ಟಿಂಗ್ ಚಟುವಟಿಕೆಗಳು ಈ ಬಾರಿ ಮಳೆಯ ನಿರೀಕ್ಷೆಯಲ್ಲಿ ಕಾದು ಕುಳಿತಿವೆ.
ಕಳೆದ ಬಾರಿ ಮೇ ತಿಂಗಳಲ್ಲೇ ಮುಂಗಾರ ಆರಂಭ ಗೊಂಡಿತ್ತು. ಆದರೆ ಈ ಬಾರಿ ಮುಂಗಾರಿನ ಸಮಯ ಆರಂಭವಾಗಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿರುವುದರಿಂದ ನದಿಗಳಲ್ಲಿ ನೀರಿನ ಹರಿವು ಇನ್ನೂ ಪೂರ್ಣ ಪ್ರಮಾಣದಲ್ಲಿ ಹೆಚ್ಚಾಗಿಲ್ಲ. ಪರಿಣಾಮ ಪ್ರವಾಸೋದ್ಯಮ ಹಾಗು ರ್ಯಾಫ್ಟಿಂಗ್ ಮಾಲೀಕರು ಉತ್ತಮ ಮಳೆಯತ್ತ ಚಿತ್ತ ನೆಟ್ಟಿದ್ದಾರೆ.
ಸಾಹಸ ಜಲಕ್ರೀಡಾ ಪ್ರವಾಸೋದ್ಯಮದ ಪ್ರಮುಖ ಅಕರ್ಷಣೀಯ ಕೇಂದ್ರವಾಗಿ ಬೆಳೆದಿರುವ ಕುಶಾಲನಗರ ಸಮೀಪದ ದುಬಾರೆ, ದಕ್ಷಿಣ ಕೊಡಗಿನ ಬರಪೊಳೆ(ಕೆಕೆಆರ್) ಹಾಗೂ ಸೋಮವಾರಪೇಟೆ ಸಮೀಪದ ಕುಮಾರಧಾರಾ ಪ್ರದೇಶಗಳು ಪ್ರತಿವರ್ಷ ಸಾವಿರಾರು ಸಾಹಸಪ್ರಿಯ ಪ್ರವಾಸಿಗರನ್ನು ಸೆಳೆಯುತ್ತವೆ. ವಿಶೇಷವಾಗಿ ಮುಂಗಾರು ಅವಧಿಯಲ್ಲಿ ನದಿಗಳಲ್ಲಿ ನೀರಿನ ಹರಿವು ಹೆಚ್ಚಿದಾಗ ಈ ಜಲಸಾಹಸ ಕ್ರೀಡೆ ಮೈನವಿರೇಳಿಸುವ ಅನುಭವವನ್ನು ನೀಡುತ್ತದೆ.
ಜಿಲ್ಲೆಯ ಮೂರು ಪ್ರಮುಖ ಜಲಸಾಹಸ ಕೇಂದ್ರಗಳಲ್ಲಿ ಒಟ್ಟು ೬೧ ರ್ಯಾಫ್ಟಿಂಗ್ ಮಾಲೀಕರು ಕಾರ್ಯನಿರ್ವ ಹಿಸುತ್ತಿದ್ದಾರೆ. ದುಬಾರೆ ಪ್ರದೇಶದಲ್ಲಿ ೫೫ ರ್ಯಾಫ್ಟಿಂಗ್ ಮಾಲೀಕರು ಇದ್ದು, ೨೯ ಡಬಲ್ ರಾಫ್ಟ್ ಹಾಗೂ ೨೬ ಸಿಂಗಲ್ ರಾಫ್ಟ್ಗಳನ್ನು ಒಳಗೊಂಡAತೆ ಒಟ್ಟು ೮೪ ರಾಫ್ಟ್ಗಳು ಕಾರ್ಯಾಚರಣೆಗೆ ಸಜ್ಜಾಗಿವೆ. ಬರಪೊಳೆ ಪ್ರದೇಶದಲ್ಲಿ ನಾಲ್ವರು ಮಾಲೀಕರು ತಲಾ ೬ ರಾಫ್ಟ್ಗಳಂತೆ ಒಟ್ಟು ೨೪ ರಾಫ್ಟ್ಗಳನ್ನು ಹೊಂದಿದ್ದಾರೆ. ಕುಮಾರಧಾರಾದಲ್ಲಿ ಇಬ್ಬರು ಮಾಲೀಕರು ಕಾರ್ಯನಿರ್ವಹಿಸುತ್ತಿದ್ದು, ೪ ರಾಫ್ಟ್ ಹಾಗೂ ನಾಲ್ಕು ಕಯಾಕ್ಗಳು ಲಭ್ಯವಿವೆ. ಜೊತೆಗೆ ಸ್ಥಳೀಯ ಹಾಗೂ ದಾಂಡೇಲಿಯಿAದ ನುರಿತ ರ್ಯಾಫ್ಟರ್ಗಳು ಆಗಮಿಸಿ ಸಿದ್ಧತೆ ನಡೆಸುತಿದ್ದಾರೆ.
ಒಟ್ಟಾರೆಯಾಗಿ ಮೂರು ಕೇಂದ್ರಗಳಲ್ಲಿ ೧೧೪ ರಾಫ್ಟ್ಗಳು ಹಾಗೂ ೪ ಕಯಾಕ್ಗಳು ಪ್ರವಾಸಿಗರ ಆಕÀರ್ಷಣೆಗೆ ಸಿದ್ಧವಾಗಿದ್ದರೂ, ನದಿಗಳಲ್ಲಿ ಅಗತ್ಯ ಪ್ರಮಾಣದ ನೀರಿನ ಹರಿವು ದೊರೆಯದ ಕಾರಣ ಚಟುವಟಿಕೆಗಳು ಪೂರ್ಣ ಪ್ರಮಾಣದಲ್ಲಿ ಚುರುಕುಗೊಂಡಿಲ್ಲ.
ವೈಟ್ ವಾಟರ್ ರ್ಯಾಫ್ಟಿಂಗ್ ಕೇವಲ ಸಾಹಸ ಕ್ರೀಡೆಯಲ್ಲ. ಇದು ಜಿಲ್ಲೆಯ ಪ್ರವಾಸೋದ್ಯಮ ಆರ್ಥಿಕತೆಯ ಪ್ರಮುಖ ಅಂಗವಾಗಿದೆ. ರ್ಯಾಫ್ಟಿಂಗ್ ಚಟುವಟಿಕೆಗಳನ್ನು ಅವಲಂಬಿಸಿ ನೂರಾರು ಯುವಕರು ಉದ್ಯೋಗ ಪಡೆದಿದ್ದು, ಮಳೆಗಾಲದಲ್ಲಿ ಹೋಂಸ್ಟೇ, ರೆಸಾರ್ಟ್, ಹೋಟೆಲ್, ಸಾರಿಗೆ, ಹಾಗೂ ಸ್ಥಳೀಯ ವ್ಯಾಪಾರಿಗಳಿಗೆ ಆದಾಯದ ಮೂಲವಾಗಲಿದೆ. ಪ್ರವಾಸಿಗರ ಸಂಖ್ಯೆ ಹೆಚ್ಚಿದಂತೆ ಜಿಲ್ಲೆಯ ಪ್ರವಾಸೋದ್ಯಮ ಚಟುವಟಿಕೆಗಳಿಗೂ ಹೊಸ ಚೈತನ್ಯ ದೊರೆಯುತ್ತದೆ.
ದುಬಾರೆಯ ಕಾವೇರಿ ನದಿಯಲ್ಲಿ ನಡೆಯುವ ರ್ಯಾಫ್ಟಿಂಗ್
ಕುಟುAಬ ಸಮೇತ ಆಗಮಿಸುವ ಪ್ರವಾಸಿಗರನ್ನು ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಸೆಳೆಯುತ್ತಿದ್ದರೆ, ಬರಪೊಳೆ ನದಿಯ ವೇಗದ ರಾಪಿಡ್ಗಳು ಸಾಹಸ ಪ್ರಿಯರಿಗೆ ರೋಮಾಂಚಕಾರಿ ಅನುಭವ ನೀಡುತ್ತವೆ. ಕುಮಾರಧಾರಾದಲ್ಲೂ ಇತ್ತೀಚಿನ ವರ್ಷಗಳಲ್ಲಿ ಜಲಸಾಹಸ ಕ್ರೀಡೆಗಳಿಗೆ ಉತ್ತಮ ಸ್ಪಂದನ ವ್ಯಕ್ತವಾಗುತ್ತಿದೆ. ಈ ನಡುವೆ ರ್ಯಾಫ್ಟಿಂಗ್ ಚಟುವಟಿಕೆಗಳಿಗೆ ಅಗತ್ಯ ಅನುಮತಿಯನ್ನು ಪ್ರವಾಸೋದ್ಯಮ ಇಲಾಖೆ ನೀಡಿದೆ. ದುಬಾರೆ ಆನೆ ಕ್ಯಾಂಪ್ ಇಲ್ಲದೆ ಪ್ರವಾಸಿಗರು ಬರುತ್ತಿಲ್ಲ.
ಇತ್ತೀಚೆಗೆ ದುಬಾರೆಯಲ್ಲಿ ನಡೆದ ಆನೆಕಾಳಗದಿಂದ ಮಹಿಳೆ ಹಾಗೂ ತಿವಿತÀಕ್ಕೊಳಗಾದ ಸಾಕಾನೆಯ ಸಾವಿನ ಪ್ರಕರಣದಿಂದ ಸಾಕಾನೆ ಶಿಬಿರಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಯಿತು. ಈ ಕಾರಣದಿಂದಾಗಿ ದುಬಾರೆಯಲ್ಲಿ ಪ್ರವಾಸಿಗರ ಸಂಖ್ಯೆ ತೀರಾ ಕಡಿಮೆಯಾಗಿದೆ. ಮಳೆ ಹೆಚ್ಚಾಗಿ ವೈಟ್ ವಾಟರ್ ರ್ಯಾಫ್ಟಿಂಗ್ ಕ್ರೀಡೆಗೆ ಪ್ರವಾಸಿಗರು ಬರುವರೇ?
“ಈ ಬಾರಿಯೂ ವೈಟ್ ವಾಟರ್ ರ್ಯಾಫ್ಟ್ಟಿಂಗ್ ಕ್ರೀಡೆ ನಡೆಸಲು ನಿಯಮಾನು ಸಾರ ಅನುಮತಿ ನೀಡಲಾಗಿದೆ. ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ. ನದಿಗಳಲ್ಲಿ ನೀರಿನ ಹರಿವು ಹೆಚ್ಚಾದ ಬಳಿಕ ಚಟುವಟಿಕೆಗಳು ಮತ್ತಷ್ಟು ಚುರುಕುಗೊಳ್ಳಲಿವೆ” ಎಂದು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಶಶಿಧರ್ ಹೆಚ್. ತಿಳಿಸಿದ್ದಾರೆ. ವೈಟ್ ವಾಟರ್ ಕ್ರೀಡೆ ನಡೆಸಲು ಅಗತ್ಯವಾದ ನೀರಿನ ಹರಿವು ನಿರೀಕ್ಷಿತ ಮಟ್ಟದಲ್ಲಿಲ್ಲ. ಉತ್ತಮ ಮಳೆಯಾದರೆ ಮಾತ್ರ ಪ್ರವಾಸಿಗರಿಗೆ ಸುರಕ್ಷಿತ ಹಾಗೂ ರೋಮಾಂಚಕಾರಿ ಅನುಭವ ನೀಡಲು ಸಾಧ್ಯ. ಆದ್ದರಿಂದ ಮಳೆಯ ನಿರೀಕ್ಷೆಯಲ್ಲಿದ್ದೇವೆ ದುಬಾರೆ ರಿವರ್ ರ್ಯಾಫ್ಟಿಂಗ್ ಅಸೋಸಿಯೇಷನ್ಸ್ ನಿರ್ದೇಶಕ ಮೊಣ್ಣಂಡ ವಿಜು ಹೇಳುತ್ತಾರೆ.
ಮಳೆಯ ಪ್ರಮಾಣ ಹೆಚ್ಚಾಗಿ ನೀರಹರಿವು ಉಕ್ಕಿಹರಿದರೆ ಮಾತ್ರ ಬರಪೊಳೆಯಲ್ಲಿ ರ್ಯಾಫ್ಟಿಂಗ್ ನಡೆಸಲು ಸಾಧ್ಯವೆಂದು ಬರಪೊಳೆಯ ರ್ಯಾಪ್ಟಿಂಗ್ ಆಯೋಜಕ ಚಟ್ಟಂಗಡ ಸೋಮಣ್ಣ ಹೇಳುತ್ತಾರೆ. ಮುಂದಿನ ದಿನಗಳಲ್ಲಿ ಮುಂಗಾರು ಚುರುಕುಗೊಂಡು ಉತ್ತಮ ಮಳೆಯಾದರೆ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿ ಕೊಡಗಿನ ಜಲಸಾಹಸ ಕ್ರೀಡೆಗಳು ಮತ್ತೆ ಗರಿಗೆದರಲಿವೆ. ಸದ್ಯ ಮಾತ್ರ ಮಳೆಯ ಆಗಮನಕ್ಕಾಗಿ ಜಿಲ್ಲೆಯ ಸಾಹಸ ಪ್ರವಾಸೋದ್ಯಮ ವಲಯ ಕಾತರದಿಂದ ಕಾಯುತ್ತಿದೆ.