ಚೆಯ್ಯಂಡಾಣೆ, ಜೂ. ೨೫: ನಾಪೋಕ್ಲುವಿನ ಸೇಕ್ರೆಡ್ ಹಾರ್ಟ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಸತ್ ಮಾದರಿ ಚುನಾವಣೆಯ ಮೂಲಕ ಶಾಲಾ ನಾಯಕರನ್ನು ಆಯ್ಕೆ ಮಾಡಲಾಯಿತು.
ಶಾಲೆಯಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ಪ್ರಜಾಪ್ರಭುತ್ವ ಮಾದರಿಯಲ್ಲಿ ಗುಪ್ತ ಮತದಾನದ ಮೂಲಕ ಶಾಲಾ ನಾಯಕರನ್ನು ಆಯ್ಕೆ ಮಾಡಿದರು. ಶಾಲಾ ನಾಯಕನಾಗಿ ಎ.ಜೆ. ದರ್ಶನ್, ಉಪನಾಯಕನಾಗಿ ಎ.ಆರ್. ಶಾಹಿದ್, ಸಾಂಸ್ಕೃತಿಕ ನಾಯಕಿಯಾಗಿ ಕೆ.ಹೆಚ್. ಅಫೀಫಾ, ಉಪನಾಯಕಿಯಾಗಿ ವಿನಿತ ವಿನೋದ್, ಕ್ರೀಡಾ ನಾಯಕನಾಗಿ, ಎಂ.ಇ. ಮಿಸ್ಹಬ್, ಉಪನಾಯಕನಾಗಿ ಕೆ.ಕೆ. ನಜಾನ್, ವಾರ್ತಾ ಇಲಾಖೆಯ ನಾಯಕಿಯಾಗಿ ಎಂ.ಜೆ. ಲೀನಾ, ಉಪನಾಯಕನಾಗಿ ಎ.ಎಂ. ಝಿಧಾನ್, ಶಿಸ್ತು ನಿರ್ವಹಣಾ ನಾಯಕನಾಗಿ ಎಂ.ಎಸ್. ಲಿಖಿತ್, ಉಪನಾಯಕನಾಗಿ ದಿನೇಶ್ ಆಯ್ಕೆಯಾದರು.
ಶಾಲೆಯ ಅಧ್ಯಕ್ಷ ಬದ್ದಂಜೆಟ್ಟೀರ ಗಪ್ಪಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕಿ ಶೃತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ಕಿರಣ್ ಅವರು ಮತದಾನ ಪ್ರಕ್ರಿಯೆ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಪ್ರಸಕ್ತ ಸಾಲಿನಲ್ಲಿ ಹೊಸದಾಗಿ ಶಾಲೆಗೆ ಸೇರಿದ ವಿದ್ಯಾರ್ಥಿಗಳಿಗೆ ಶಾಲೆಯ ಆಡಳಿತ ಮಂಡಳಿ ವತಿಯಿಂದ ಪೆನ್ನು ಹಾಗೂ ಹೂಗುಚ್ಚ ನೀಡಿ ಬರಮಾಡಿಕೊಳ್ಳಲಾಯಿತು.
ಚುನಾವಣೆಯ ಮೇಲ್ವಿಚಾರಕರಾಗಿ ಶಿಕ್ಷಕಿ ವಸಂತ ಲಕ್ಷಿö್ಮ ಹಾಗೂ ಎ.ಟಿ. ದಿವ್ಯ ಕಾರ್ಯನಿರ್ವಹಿಸಿದರು. ಬಳಿಕ ವಿದ್ಯಾರ್ಥಿಗಳಿಂದ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.
ಕಾರ್ಯಕ್ರಮವನ್ನು ಶಾಲೆಯ ಶಿಕ್ಷಕಿ ತಂಗಮ್ಮ ಸ್ವಾಗತಿಸಿ, ಬಿ.ಆರ್. ದಿವ್ಯ ವಂದಿಸಿದರು. ಈ ಸಂದರ್ಭ ಶಾಲೆಯ ಆಡಳಿತ ಮಂಡಳಿ ಪದಾಧಿಕಾರಿಗಳು, ಶಿಕ್ಷಕ ವೃಂದ, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.