ಮಡಿಕೇರಿ, ಜೂ. ೨೫: ಸೆಪ್ಟೆಂಬರ್‌ನಲ್ಲಿ ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಟೂರ್ನಿಗೆ ಕೊಡಗಿನ ಬೊಳ್ಳಂಡ ಉನ್ನತಿ ಅಯ್ಯಪ್ಪ ಆಯ್ಕೆ ಆಗಿದ್ದಾರೆ.

ಒಡಿಶ್ಶಾ ರಾಜ್ಯದ ಬುಬನೇಶ್ವರದ ಕಾಳಿಂಗ ಕ್ರೀಡಾಂಗಣದಲ್ಲಿ ನಡೆದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ೨೦೦ ಮೀಟರ್ ಓಟ ವಿಭಾಗದಲ್ಲಿ ಬೆಳ್ಳಿ ಪದಕ ಸಾಧನೆಗೈದ ಉನ್ನತಿ ೨೩.೪ ಸೆಕೆಂಡ್‌ಗಳಲ್ಲಿ ೨೦೦ ಮೀಟರ್ ಕ್ರಮಿಸಿ ಏಷ್ಯನ್ ಗೇಮ್ಸ್ಗೆ ಅರ್ಹತೆ ಪಡೆದುಕೊಂಡರು. ಇತ್ತೀಚೆಗಷ್ಟೆ ೨೦೦ ಮೀಟರ್ ಓಟದಲ್ಲಿ ಕರ್ನಾಟಕ ರಾಜ್ಯದ ದಾಖಲೆಯನ್ನು ಹೊಂದಿದ್ದ ಕೊಡಗಿನವರೇ ಆದ ಅಶ್ವಿನಿ ನಾಚಪ್ಪ ಅವರ ದಾಖಲೆಯನ್ನು ಉನ್ನತಿ ಅವರು ಮುರಿದಿದ್ದರು. ಇದೀಗ ಏಷ್ಯನ್ ಗೇಮ್ಸ್ಗೆ ಆಯ್ಕೆ ಆಗುವ ಮೂಲಕ ಸಾಧನೆಗೈದಿದ್ದಾರೆ. ಇವರು ಮಡಿಕೇರಿಯವರಾದ ನ್ಯಾಷನಲ್ ಅಥ್ಲೆಟಿಕ್ ಕೋಚ್ ಬೊಳ್ಳಂಡ ಅಯ್ಯಪ್ಪ ಹಾಗೂ ಒಲಂಪಿಯನ್ ಪ್ರಮಿಳಾ ಅಯ್ಯಪ್ಪ ದಂಪತಿಯ ಪುತ್ರಿ.