ಮಡಿಕೇರಿ, ಜೂ. ೨೪: ಲವ್ ಜಿಹಾದ್ ವಿರುದ್ಧ ಹಿಂದೂ ಸುರಕ್ಷಾ ಸಮಿತಿ ಕುಶಾಲನಗರದಲ್ಲಿ ತಾ. ೩೦ ರಂದು ಹಮ್ಮಿಕೊಂಡಿರುವ ಜನಜಾಗೃತಿ ಜನಾಂದೋಲನಕ್ಕೆ ಕೊಡಗು ಹಿಂದೂ ಮಲಯಾಳಿ ಸಮಾಜ ಬೆಂಬಲ ನೀಡಲಿದೆ ಎಂದು ಅಧ್ಯಕ್ಷ ವಿ.ಎಂ. ವಿಜಯ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಶಾಲನಗರದ ವಿವಾಹಿತ ಮಹಿಳೆಯನ್ನು ಪುಸಲಾಯಿಸಿ ಮತಾಂತರಗೊಳಿಸಿದಲ್ಲದೆ ಆಕೆಯ ಮಗನನ್ನು ಬಲವಂತವಾಗಿ ಮತಾಂತರ ಮಾಡಲು ಯತ್ನಿಸಿದ್ದು ಖಂಡನೀಯ. ಈ ವಿಚಾರದಲ್ಲಿ ಪೊಲೀಸ್ ಇಲಾಖೆ ಕಾನೂನಾತ್ಮಕ ಕ್ರಮಕೈಗೊಳ್ಳಬೇಕು. ಬಾಲಕನಿಗೆ ಬಲವಂತವಾಗಿ ಸುನ್ನತ್ ಮಾಡಿಸಲಾಗಿದೆ. ಈ ಹಿನ್ನೆಲೆ ಪೋಕ್ಸೋ ಪ್ರಕರಣವನ್ನು ದಾಖಲಿಸಬೇಕು. ಕಾನೂನು ಹೋರಾಟಕ್ಕೆ ಹಿಂದೂ ಮಲಯಾಳಿ ಸಮಾಜವೂ ಸಹಕಾರ ನೀಡಲಿದೆ. ಮುಂದೆ ಈ ರೀತಿ ಘಟನೆ ಸಂಭವಿಸದAತೆ ಎಚ್ಚರವಹಿಸಬೇಕು. ಹಿಂದೂ ಸಮಾಜವೂ ಜಾಗೃತಗೊಳ್ಳಬೇಕು. ಕೋಮು ಸೌಹಾರ್ದತೆಗೆ ಧಕ್ಕೆ ತರುವ ಇಂತಹ ಕೃತ್ಯದ ಹಿಂದೆ ಜಾಲವಿದ್ದು, ಎನ್‌ಐಎ ತನಿಖೆಯಾಗಬೇಕು ಎಂದು ಆಗ್ರಹಿಸಿದರು. ಗೋಷ್ಠಿಯಲ್ಲಿ ಸಮಾಜದ ಉಪಾಧ್ಯಕ್ಷ ಟಿ.ಕೆ. ಸುಧೀರ್, ಸಲಹೆಗಾರ ಟಿ.ಆರ್. ವಾಸುದೇವ್, ಸದಸ್ಯ ಎಂ.ಸಿ. ಸುನಿಲ್ ಹಾಗೂ ಸೋಮವಾರಪೇಟೆ ತಾಲೂಕು ಉಪಾಧ್ಯಕ್ಷ ಅಜೀಷ್ ಕುಮಾರ್ ಹಾಜರಿದ್ದರು.