ಮಡಿಕೇರಿ, ಜೂ. ೨೪: ಬೆಟ್ಟಗೇರಿ ಮತ್ತು ಚಂದ್ರಗಿರಿ ಗ್ರಾಮದಲ್ಲಿ ಗ್ರಾಮ ಆರೋಗ್ಯ ಪೋಷಣ್ ದಿನ, ಬೇಟಿ ಬಚಾವೋ ಬೇಟಿ ಪಡೋವೊ ಮತ್ತು ಇಲಾಖೆ ಯೋಜನೆಗಳ ಬಗ್ಗೆ ಮಾಹಿತಿ ಕಾರ್ಯಾಗಾರ ನೆರವೇರಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆಯ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಗ್ರಾಮ ಆರೋಗ್ಯ ಪೋಷಣ್ ದಿನಕ್ಕೆ ಸಂಬAಧಿಸಿದAತೆ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಆರೋಗ್ಯ ತಪಾಸಣೆ, ಮಕ್ಕಳಿಗೆ ಅಗತ್ಯವಿರುವ ಲಸಿಕೆಗಳ ಬಗ್ಗೆ, ಮಕ್ಕಳ ಅಪೌಷ್ಟಿಕತೆ ತಡೆಗಟ್ಟಲು ಪೌಷ್ಟಿಕಾಂಶದ ಬಗ್ಗೆ ಜಾಗೃತಿ ಮತ್ತು ಪೂರಕ ಆಹಾರ ವಿತರಣೆ ಬಗ್ಗೆ ಮಾಹಿತಿ, ಆರೋಗ್ಯ ನೈರ್ಮಲ್ಯದ ಬಗ್ಗೆ ಸಲಹೆಗಳನ್ನು ನೀಡಿದರು. ಮಡಿಲು ಯೋಜನೆ ಬಗ್ಗೆ, ಬಾಲಕರ ಬಾಲಮಂದಿರ, ಬಾಲಕಿಯರ ಬಾಲ ಮಂದಿರ, ಸುರಕ್ಷಿತ ಸ್ಪರ್ಶ ಅಸುರಕ್ಷಿತ ಸ್ಪರ್ಶಗೆ ತಿಳಿಸಿದರು.

ಪೊಲೀಸ್ ಸಿಬ್ಬಂದಿ ಚನ್ನಕೇಶವ ಗಾಂಜಾ - ತಂಬಾಕು ಸೇವನೆಯ ದುಷ್ಪರಿಣಾಮ ತಿಳಿಸುತ್ತಾ, ದುಶ್ಚಟಗಳಿಂದ ದೂರ ಇರಲು ತಿಳಿಸಿದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಣಪತಿ ಟಾಸ್ಕ್ಫೋರ್ಸ್ ಕಮಿಟಿಯ ಸದಸ್ಯರಿಗೆ ಮಳೆಗಾಲದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ವಿವರವಾಗಿ ತಿಳಿಸಿದರು. ಸಲಹೆ ಮಾರ್ಗದರ್ಶನವನ್ನು ಪಡೆದರು. ಅಂಗನವಾಡಿ ಮತ್ತು ಶಾಲಾ ವ್ಯಾಪ್ತಿಯಲ್ಲಿ ಆಪತ್ತಿನಲ್ಲಿರುವ ಮರಗಳನ್ನು ತೆರವುಗೊಳಿಸಲು ಕ್ರಮವಹಿಸುವ ಕುರಿತು ಚರ್ಚಿಸಲಾಯಿತು.

ಕಾರ್ಯಕ್ರಮದಲ್ಲಿ ಬೆಟ್ಟಗೇರಿ ಶಾಲಾ ಮುಖ್ಯ ಶಿಕ್ಷಕಿ ಧರಣಿ, ಶಿಕ್ಷಕಿ ಅನಿತಾ, ಗ್ರಾಮಸ್ಥರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಗ್ರಾಮ ಪಂಚಾಯಿತಿಯ ಸಿಬ್ಬಂದಿ ವರ್ಗದವರು, ಮಕ್ಕಳು, ಕಂದಾಯ ಇಲಾಖೆಯ ವೆಂಕಟೇಶ್, ಅರಣ್ಯ ಇಲಾಖೆಯ ಸಿಬ್ಬಂದಿ, ಚೆಸ್ಕಾಂ ಇಲಾಖೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಅಂಗನವಾಡಿ ಕಾರ್ಯಕರ್ತೆ ಪುಷ್ಪ ಸ್ವಾಗತಿಸಿ, ಮುತ್ತಮ್ಮ ವಂದಿಸಿದರು.ಇದೇ ಸಂದರ್ಭದಲ್ಲಿ ೩೦ ವರ್ಷ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಕುಂಬಳಕೇರಿ - ಉಕ್ಕುಡ ಅಂಗನವಾಡಿ ಕಾರ್ಯಕರ್ತೆ ಪಾರ್ವತಿ ಅವರಿಗೆ ಬೀಳ್ಕೊಡುಗೆ ನಡೆಸಲಾಯಿತು.