ಮಡಿಕೇರಿ, ಜೂ. ೨೩: ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣವನ್ನು ಸ್ಫೋಟಿಸುವುದಾಗಿ ಇ-ಮೇಲ್ ಮೂಲಕ ಬಂದ ಬೆದರಿಕೆ ಸಂದೇಶ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಸಿತು. ಪೊಲೀಸರು, ಶ್ವಾನದಳ ಹಾಗೂ ಬಾಂಬ್ ನಿಷ್ಕಿçಯ ದಳದಿಂದ ತೀವ್ರ ಶೋಧ ನಡೆಸಿದ ಬಳಿಕ ಯಾವುದೇ ಸ್ಫೋಟಕ ಪತ್ತೆಯಾಗದೆ, ಇದು ಹುಸಿ ಬೆದರಿಕೆ ಎಂಬುದು ದೃಢಪಟ್ಟಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ನ್ಯಾಯಾಲಯ ಸಂಕೀರ್ಣಕ್ಕೆ ದೌಡಾಯಿಸಿ ಶ್ವಾನದಳ ಹಾಗೂ ಬಾಂಬ್ ನಿಷ್ಕಿçಯ ದಳದ ಸಹಾಯದಿಂದ ಸಂಪೂರ್ಣ ಪರಿಶೀಲನೆ ನಡೆಸಿದರು. ಪರಿಶೀಲನೆ ವೇಳೆ ಯಾವುದೇ ಅನುಮಾನಾಸ್ಪದ ವಸ್ತು ಅಥವಾ ಸ್ಫೋಟಕ ಸಾಧನ ಪತ್ತೆಯಾಗಿಲ್ಲ.
ಬೆದರಿಕೆ ಹಿನ್ನೆಲೆಯಲ್ಲಿ ನ್ಯಾಯಾಧೀಶರು, ವಕೀಲರು ಹಾಗೂ ನ್ಯಾಯಾಲಯಕ್ಕೆ ಆಗಮಿಸಿದ್ದ ಸಾರ್ವಜನಿಕರು ಬೆಳಿಗ್ಗೆ ೧೦.೪೫ರ ತನಕ ನ್ಯಾಯಾಲಯದ ಹೊರಭಾಗದಲ್ಲೇ ಕಾಯುವಂತಾಯಿತು. ಬಳಿಕ ಯಾವುದೇ ಅಪಾಯವಿಲ್ಲ ಎಂದು ಪೊಲೀಸರು ದೃಢಪಡಿಸಿದ ನಂತರ ನ್ಯಾಯಾಲಯದ ಕಲಾಪಗಳು ಎಂದಿನAತೆ ಮುಂದುವರಿದವು.
ಈ ಕುರಿತು ಪ್ರತಿಕ್ರಿಯಿಸಿದ ೧ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಮಮ್ತಾಜ್, ಬೆದರಿಕೆ ಸಂದೇಶವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲದ ಕಾರಣ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಈ ಸಂಬAಧ ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆದರಿಕೆ ಸಂದೇಶದ ಮೂಲ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಫೆಬ್ರವರಿ ೧೬ ರಂದು ಕೂಡ ಇದೇ ರೀತಿ ನ್ಯಾಯಾಲಯ ಸ್ಫೋಟಿಸುವ ಹುಸಿಬೆದರಿಕೆ ಸಂದೇಶ ಇಮೇಲ್ ಮೂಲಕ ರವಾನೆಯಾಗಿತ್ತು.