ಚೆಟ್ಟಳ್ಳಿ, ಜೂ. ೨೩: ಪ್ರತಿವರ್ಷ ಮಳೆಗಾಲದಲ್ಲಿ ಚೆಟ್ಟಳ್ಳಿ - ಮಡಿಕೇರಿ ಮುಖ್ಯ ರಸ್ತೆಯ ವಿವಿಧ ಭಾಗಗಳಲ್ಲಿ ಭೂಕುಸಿತ ಸಂಭವಿಸುವ ಹಿನ್ನೆಲೆಯಲ್ಲಿ ರಾಜ್ಯ ವಿಪತ್ತು ಉಪಶಮನ ನಿಧಿಯಡಿ ಭೂಕುಸಿತ ತಡೆ ಕಾಮಗಾರಿ ಆರಂಭಿಸಲಾಗಿದೆ.

ಈ ಹಿಂದೆ ಸರ್ವೆ ಆಧಾರದ ಮೇಲೆ ಕೊಡಗು ಜಿಲ್ಲೆಯ ೧೦೪ ಸ್ಥಳಗಳಲ್ಲಿ ಭೂಕುಸಿತ ತಡೆ ಹಾಗೂ ವಿಪತ್ತು ಉಪಶಮನ ಕಾಮಗಾರಿ ಕೈಗೊಳ್ಳಲು ಒಟ್ಟು ರೂ. ೬.೭೯ ಕೋಟಿ ಅನುದಾನ ಮಂಜೂರು ಮಾಡಲಾಗಿತ್ತು. ಅದರಂತೆ ಚೆಟ್ಟಳ್ಳಿ - ಮಡಿಕೇರಿ ಮುಖ್ಯ ರಸ್ತೆಯ ವಿವಿಧ ಅಪಾಯದ ಪ್ರದೇಶಗಳಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಮೂವರು ಗುತ್ತಿಗೆದಾರರಿಗೆ ಕಾಮಗಾರಿ ವಹಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಕುಶಾಲನಗರ ತಾಲೂಕು ಇಂಜಿನಿಯರ್ ಅರಬಾಸ್ ಅವರು, ಸುಮಾರು ೧೮೦ ಮೀಟರ್ ಉದ್ದದ ಕಾಮಗಾರಿಗೆ ರೂ. ೧೩೧ ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಕಳೆದ ವಾರದಿಂದ ಕಾಮಗಾರಿ ಪ್ರಾರಂಭಗೊAಡಿದೆ ಎಂದು ತಿಳಿಸಿದ್ದಾರೆ. ಗುರುತಿಸಲಾದ ರಸ್ತೆ ಬದಿಯ ಬರೆಗಳನ್ನು ಕೊರೆದು ತಡೆಗೋಡೆ ನಿರ್ಮಾಣ ಹಾಗೂ ಚರಂಡಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಆದರೆ ಕಾಮಗಾರಿ ಆರಂಭಿಸಿರುವ ಸಮಯದ ಕುರಿತು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಮಳೆಗಾಲ ಆರಂಭದ ಸಮಯದಲ್ಲಿ ಕಾಮಗಾರಿ ಕೈಗೊಂಡಿರುವುದರಿAದ ಸಂಚಾರಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಚೆಟ್ಟಳ್ಳಿ - ಕತ್ತಲೆಕಾಡು ರಸ್ತೆಯಲ್ಲಿ ಈ ಹಿಂದೆ ಸುಮಾರು ೨೫ ಒಳಚರಂಡಿಗಳನ್ನು ನಿರ್ಮಿಸಲಾಗಿದ್ದರೂ, ಕೇವಲ ಮೂರು ಒಳಚರಂಡಿಗಳಲ್ಲಿ ಮಾತ್ರ ಮಳೆನೀರು ಸರಾಗವಾಗಿ ಹರಿಯುತ್ತಿದ್ದು, ಉಳಿದವು ಮಣ್ಣು ಮತ್ತು ಕಸದಿಂದ ಮುಚ್ಚಿಹೋಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕಾಮಗಾರಿ ನಡೆಯುತ್ತಿರುವ ಪ್ರದೇಶಗಳಲ್ಲಿ ಮಳೆನೀರು ಹರಿದು ಹೋಗಲು ಸಮರ್ಪಕ ವ್ಯವಸ್ಥೆ ಇಲ್ಲದ ಕಾರಣ ನೀರು ರಸ್ತೆ ಮೇಲೆಯೇ ಹರಿಯುವ ಪರಿಸ್ಥಿತಿ ಉಂಟಾಗಿದೆ. ಈಗಾಗಲೇ ಚೆಟ್ಟಳ್ಳಿ - ಕತ್ತಲೆಕಾಡು ರಸ್ತೆಯಲ್ಲಿನ ಅನೇಕ ಕಾಂಕ್ರಿಟ್ ಚರಂಡಿಗಳು ಮುಚ್ಚಿಹೋಗಿದ್ದು, ಮಳೆನೀರು ಮುಖ್ಯ ರಸ್ತೆಗೆ ಹರಿದು ರಸ್ತೆ ಹಾನಿಗೊಳಗಾಗುವುದಲ್ಲದೆ ಮುಂದಿನ ಇಳಿಜಾರು ಪ್ರದೇಶ ಜರಿಯುವ ಸಾಧ್ಯತೆ ಹೆಚ್ಚಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಸಂಬAಧಿಸಿದ ಅಧಿಕಾರಿಗಳು ತಕ್ಷಣ ಚರಂಡಿಗಳ ಸ್ವಚ್ಛತೆ ಹಾಗೂ ಮಳೆನೀರು ಸರಾಗವಾಗಿ ಹರಿಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

- ಕರುಣ್ ಕಾಳಯ್ಯ