ವಾಸು ಎ.ಎನ್

ಸಿದ್ದಾಪುರ, ಜೂ.೨೩: ಕೊಡಗು ಜಿಲ್ಲೆಯಲ್ಲಿ ಮಿತಿಮೀರಿದ ವನ್ಯಜೀವಿಗಳ ಹಾವಳಿಯಿಂದಾಗಿ ರೈತರು ಹಾಗೂ ಕಾರ್ಮಿಕರು, ಅಮಾಯಕರು ಸಾವನ್ನಪ್ಪಿರುವುದು ಮಾನವ ಮತ್ತು ವನ್ಯಜೀವಿ ಸಂಘರ್ಷಕ್ಕೆ ಕೊನೆ ಇಲ್ಲದಂತಾಗಿದೆ.

ದಕ್ಷಿಣ ಕೊಡಗಿನಲ್ಲಿ ಒಂದೆಡೆ ಕಾಡಾನೆಗಳ ಉಪಟಳ ಮೀತಿಮೀರಿದೆ. ಮತ್ತೊಂದೆಡೆ ಹುಲಿ ದಾಳಿಯಿಂದಾಗಿ ಹೈನುಗಾರಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿರುವ ರೈತರ ಹಾಗೂ ಕೃಷಿಕರ ಬೆಲೆಬಾಳುವ ಹಸುಗಳು ಬಲಿಯಾಗುತ್ತಿವೆ. ಕಳೆದ ಕೆಲವು ವರ್ಷಗಳಿಂದ ಜಿಲ್ಲೆಯಲ್ಲಿ ಅದೆಷ್ಟೋ ಮಂದಿ ಬೆಳೆಗಾರರು, ಕಾರ್ಮಿಕರು, ಸಾರ್ವಜನಿಕರು ಕಾಡಾನೆ ಹಾಗೂ ಹುಲಿ ದಾಳಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆಗಳು ನಡೆದಿವೆ.

ಕಾಡಾನೆಗಳೊಂದಿಗೆ, ಇದೀಗ ಬಹುತೇಕ ಗ್ರಾಮಗಳ ಕಾಫಿ ತೋಟಗಳಲ್ಲಿ ಹುಲಿಯ ಸಂಚಾರವು ಕೂಡ ಮುಂದುವರಿದಿದೆ. ಸೋಮವಾರಪೇಟೆ ತಾಲೂಕು, ಪೊನ್ನಂಪೇಟೆ ತಾಲೂಕು ಕುಶಾಲನಗರ ತಾಲೂಕುಗಳಲ್ಲಿ ಕೂಡ ವನ್ಯಪ್ರಾಣಿಗಳ ಹಾವಳಿ ನಿಯಂತ್ರಣಕ್ಕೆ ಬಾರದೆ ಅರಣ್ಯ ಇಲಾಖೆ ಕೂಡ ಅಸಹಾಯಕತೆ ವ್ಯಕ್ತಪಡಿಸುತ್ತಿದೆ.

ಬೆಳೆ ಹಾನಿ - ಕೈಗೆ ಬಂದ ತುತ್ತು ಬಾಯಿಗಿಲ್ಲ

ದಿನಬೆಳಗಾದರೆ ವನ್ಯಪ್ರಾಣಿಗಳ ಹಾವಳಿಯಿಂದಾಗಿ ರೈತರು, ಕಾರ್ಮಿಕರು ಹೈರಾಣಾಗುತ್ತಿದ್ದಾರೆ. ವನ್ಯಪ್ರಾಣಿಗಳು ಮಾನವನ ಮೇಲೆ ದಾಳಿ ನಡೆಸುವುದರೊಂದಿಗೆ ರೈತರು ಬೆಳೆದ ಕೃಷಿ ಫಸಲುಗಳನ್ನು ಕೂಡ ಧ್ವಂಸಗೊಳಿಸುತ್ತಿವೆ. ಜಿಲ್ಲೆಯಲ್ಲಿ ಪ್ರತಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಬೆಳೆ ಹಾನಿ ಆಗುತ್ತಿದೆ. ರೈತರು ಅರಣ್ಯ ಇಲಾಖೆಗೆ ತಮ್ಮ ನಷ್ಟದ ಪರಿಹಾರವನ್ನು ಕೋರಿ ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ. ಆದರೆ ರೈತರಿಗೆ ಸರಕಾರದಿಂದ ನೀಡುತ್ತಿರುವ ಪರಿಹಾರದ ಮೊತ್ತ ಏನೂ ಸಾಲದು. ರೈತರು ಸುಮಾರು ೫೦ ವರ್ಷಗಳಿಂದ ಬೆಳೆದು ಬಂದAತ ಕಾಫಿ ಗಿಡಗಳು, ಅಡಿಕೆ ಮರಗಳು, ಕರಿಮೆಣಸು ಬಳ್ಳಿಗಳು ಕಾಡುಪ್ರಾಣಿಗಳ ದಾಳಿಗೆ ಸಿಲುಕಿ ನಷ್ಟ ಅನುಭವಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಕಾಫಿ ಬೆಳೆಗೆ ಉತ್ತಮ ಬೆಲೆ ಲಭಿಸುತ್ತಿದ್ದರೂ ಮಿತಿಮೀರಿದ ವನ್ಯಪ್ರಾಣಿಗಳ ಹಾವಳಿಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.

ತೋಟಗಳೇ ಆನೆಗಳಿಗೆ ಆವಾಸಸ್ಥಾನ

ಅರಣ್ಯ ಪ್ರದೇಶಗಳಲ್ಲಿ ವನ್ಯಪ್ರಾಣಿಗಳಿಗೆ ಬೇಕಾದಂತ ನೀರಿನ ಸೌಕರ್ಯ, ಆಹಾರದ ಕೊರತೆ ಹಿನ್ನೆಲೆಯಲ್ಲಿ ಕಾಡು ಪ್ರಾಣಿಗಳು ಕಾಫಿ ತೋಟಗಳಲ್ಲಿ ಮರಿಗಳಿಗೆ ಜನ್ಮ ನೀಡುತ್ತಿವೆ. ತೋಟಗಳೇ ಇವುಗಳ ವಾಸಸ್ಥಾನವಾಗಿ ಮಾರ್ಪಾಡಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ದಿನನಿತ್ಯ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳು ಸೇರಿದಂತೆ ಇತರ ವನ್ಯಪ್ರಾಣಿಗಳನ್ನು ಕಾಡಿಗಟ್ಟಲು ಸಾಕಷ್ಟು ಪ್ರಯತ್ನ ಮಾಡಿದರು ಕೂಡ ಕಾಫಿ ತೋಟಗಳಿಂದ ಕಾಡಿನತ್ತ ತೆರಳಲು ಹಿಂದೇಟು ಹಾಕುತ್ತಿವೆ. ಇದರಿಂದಾಗಿ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಪೈಕಿ ಕೆಲವು ಕಾಡಾನೆಗಳು ಮಾನವನನ್ನು ಅಟ್ಟಾಡಿಸಿಕೊಂಡು ದಾಳಿ ನಡೆಸುತ್ತಿವೆ.

ಸರ್ಕಾರ, ಕೊಡಗು ಜಿಲ್ಲೆಗೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ವನ್ಯಪ್ರಾಣಿಗಳ ಹಾವಳಿಯನ್ನು ತಡೆಗಟ್ಟಲು ರೈಲ್ವೆ ಬ್ಯಾರಿಕೇಡ್ ಹಾಗೂ ಕಂದಕಗಳನ್ನು ನಿರ್ಮಾಣ ಮಾಡಿದೆ. ಕೆಲವು ಗ್ರಾಮಗಳÀಲ್ಲಿ ವನ್ಯಪ್ರಾಣಿಗಳ ಹಾವಳಿ ತಡೆಗಟ್ಟಲು ಕಾಮಗಾರಿಗಳು ನಡೆಯುತ್ತಿವೆ. ಆದರೂ ಕೂಡ ವನ್ಯಪ್ರಾಣಿಗಳ ಹಾವಳಿ ನಿಯಂತ್ರಣಕ್ಕೆ ಬಾರದೇ ಇರುವುದು ದುರಾದೃಷ್ಟಕರ.

ಕೊಡಗು ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಕಾಫಿ ತೋಟಗಳ ಒಳಗಿನಿಂದ ಶಾಲಾ ಕಾಲೇಜುಗಳಿಗೆ ಮಕ್ಕಳು ಭಯದಿಂದ ತೆರಳುತ್ತಾರೆೆ. ಸಂಜೆಯಾದರೆ ಕೆಲವು ಗ್ರಾಮಗಳಲ್ಲಿ ಕರ್ಫ್ಯೂ ವಿಧಿಸಿದಂತೆ ವನ್ಯ ಪ್ರಾಣಿಗಳ ಉಪಟಳದಿಂದಾಗಿ ವಾಹನ ಚಾಲಕರು ಕೂಡ ರಸ್ತೆಗಿಳಿಯಲು ಹಿಂದೇಟು ಹಾಕುತ್ತಿದ್ದಾರೆ.

ರಾತ್ರಿ-ಹಗಲೆನ್ನದೆ ದಾಳಿ

ಕೆಲವು ಕಾಡಾನೆಗಳು ವಾಹನಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವಂತಹ ಘಟನೆಗಳು ಕೂಡ ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿದೆ. ಕೆಲವು ಗ್ರಾಮೀಣ ಪ್ರದೇಶದಲ್ಲಿ ಹಗಲಿನ ವೇಳೆ ವನ್ಯಪ್ರಾಣಿಗಳು ರಾಜಾರೋಷವಾಗಿ ಸುತ್ತಾಡುತ್ತಿವೆ. ಕಾರ್ಮಿಕರು ಕೆಲಸ ಮಾಡುವಂತಹ ಹಗಲಿನ ವೇಳೆಯಲ್ಲಿ ಕಾರ್ಮಿಕರನ್ನು ಅಟ್ಟಾಡಿಸುವುದು ಹಾಗೂ ದಾಳಿ ನಡೆಸುವ ಘಟನೆಗಳು ಕೂಡ ನಡೆಯುತ್ತಿದೆ. ಜಿಲ್ಲೆಯಲ್ಲಿ ಸಾಕಷ್ಟು ಸಂಘಟನೆಗಳು ಹಾಗೂ ಸಾರ್ವಜನಿಕರು ವನ್ಯಪ್ರಾಣಿಗಳ ಹಾವಳಿ ತಡೆಗಟ್ಟಲು ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಹೋರಾಟಗಳು ನಡೆಸಿದರೂ ಕೂಡ ಶಾಶ್ವತ ಯೋಜನೆ ಕಾರ್ಯರೂಪಕ್ಕೆ ಬಾರದಿರುವುದು ವಿಪರ್ಯಾಸವಾಗಿದೆ. ವನ್ಯಪ್ರಾಣಿಗಳ ಹಾವಳಿಯಿಂದಾಗಿ ರೈತರ ಹಾಗೂ ಕಾರ್ಮಿಕರ ಜೀವನ ದುಸ್ತರವಾಗಿದೆ. ರಾಜ್ಯದಲ್ಲಿ ವನ್ಯಪ್ರಾಣಿಗಳ ದಾಳಿಗೆ ಸಿಲುಕಿ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಾಗಿದೆ.

ಸರ್ಕಾರ ಕಾಡಾನೆಗಳ ಸೆರೆಗೆ ಅನುಮತಿ ನೀಡುತ್ತಿದ್ದರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸೆರೆಹಿಡಿಯಲು ತಾಂತ್ರಿಕ ಸಮಸ್ಯೆಯಿಂದಾಗಿ ಅನುಮತಿ ದೊರೆಯುತ್ತಿಲ್ಲ ಎಂಬುದಾಗಿ ತಿಳಿದುಬಂದಿದೆ. ಇದು ಕೂಡ ಅರಣ್ಯ ಇಲಾಖೆಗೆ ತಲೆ ನೋವಾಗಿ ಪರಿಣಮಿಸಿದೆ. ಜಿಲ್ಲೆಯಲ್ಲಿ ವಿವಿಧ ವಲಯಗಳಲ್ಲಿ ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೆ ಅನುಮತಿ ಲಭಿಸಲು ಅಧಿಕ ಸಮಯ ಕಾಯುವಂತ ಪರಿಸ್ಥಿತಿ ಎದುರಾಗಿದೆÉ.

ಕಾಡುಕೋಣ ಮತ್ತು ಮಂಗಗಳ ಹಾವಳಿ

ಜಿಲ್ಲೆಯಾದ್ಯಂತ ಕಾಡಾನೆಗಳ ಹಾಗೂ ಹುಲಿಗಳ ಹಾವಳಿ ಮಿತಿಮೀರಿದ್ದು ಇದರೊಂದಿಗೆ ಕಾಫಿ ತೋಟಗಳಲ್ಲಿ ಗುಂಪು ಗುಂಪಾಗಿ ಕಾಡುಕೋಣಗಳು, ಕಾಡು ಎಮ್ಮೆಗಳು ಮತ್ತು ಮಂಗಗಳು ಕೂಡ ಸೇರಿಕೊಂಡಿದ್ದು, ಕೃಷಿ ಫಸಲುಗಳನ್ನು ನಾಶ ಮಾಡುತ್ತಿವೆ. ಕಾಡುಕೋಣಗಳು ಕಾಫಿ ಗಿಡಗಳನ್ನು ಧ್ವಂಸಗೊಳಿಸುತ್ತಿವೆ. ಮಂಗಗಳು ಕಾಫಿ ಹಣ್ಣುಗಳನ್ನು ತಿಂದು ಹಾನಿಗೊಳಿಸುತ್ತಿವೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುವ ಸಭೆಗಳಲ್ಲಿ ಹಾಗೂ ಅರಣ್ಯ ಇಲಾಖೆಗಳ ವತಿಯಿಂದ ನಡೆಸುವ ಸಭೆಗಳಲ್ಲಿ ಕೂಡ ಮಂಗಳನ್ನು ಸೆರೆಹಿಡಿದು ಸ್ಥಳಾಂತರ ಮಾಡುವಂತೆ ರೈತರು ಒತ್ತಾಯಿಸುತ್ತಾ ಬರುತ್ತಿದ್ದಾರೆ. ಅರಣ್ಯ ಇಲಾಖೆಯು ಕೂಡ ಅಸಹಾಯಕತೆ ವ್ಯಕ್ತಪಡಿಸುತ್ತಿದೆ.

೬ ಮಂದಿ ಸಾವು !

೨೦೨೬ರಲ್ಲಿ ಕೊಡಗು ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಸಿಲುಕಿ ಬೆಳೆಗಾರರು, ಕಾರ್ಮಿಕರು ಸೇರಿ ೬ ಮಂದಿ ಸಾವನ್ನಪ್ಪಿದ್ದು, ಲೆಕ್ಕವಿಲ್ಲದಷ್ಟು ಜಾನುವಾರುಗಳು ಹುಲಿ, ಚಿರತೆಗಳಿಗೆ ಆಹಾರವಾಗಿರುವುದು ಜಿಲ್ಲೆಯಲ್ಲಿ ಮಿತಿಮೀರಿರುವ ವನ್ಯಪ್ರಾಣಿ-ಮಾನ ಸಂಘರ್ಷಕ್ಕೆ ಹಿಡಿದ ಕೈಗನ್ನಡಿಯಾಗಿದೆ.