ಕುಶಾಲನಗರ, ಜೂ. ೨೩: ಕನ್ನಡ ಸಾಹಿತ್ಯ ಶ್ರೀಮಂತಗೊಳ್ಳುವಲ್ಲಿ ವಚನ ಸಾಹಿತ್ಯದ ಪಾತ್ರ ಪ್ರಮುಖದ್ದಾಗಿದೆ ಎಂದು ಸುತ್ತೂರು ಮಹಾ ಸಂಸ್ಥಾನದ ಶ್ರೀ ಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ಕುಶಾಲನಗರದಲ್ಲಿ ರೈತ ಸಹಕಾರ ಭವನದಲ್ಲಿ ನಡೆದ ಕೊಡಗು ಜಿಲ್ಲಾ ಶರಣ ಸಾಹಿತ್ಯ ಪ್ರಥಮ ಸಮ್ಮೇಳನದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದರು. ವಚನ ಸಾಹಿತ್ಯ ಮತ್ತು ಶರಣ ಸಾಹಿತ್ಯ ಬಸವಾದಿ ಪ್ರಮುಖರ ಕೊಡುಗೆಯಾಗಿದ್ದು, ೧೨ನೇ ಶತಮಾನದಲ್ಲಿ ವಚನಕಾರರು ಸಾಹಿತ್ಯವನ್ನು ದೈವ ಭಾಷೆಯನ್ನಾಗಿ ಮಾಡುವಲ್ಲಿ ಶ್ರಮಿಸಿದ್ದಾರೆ ಎಂದರು.
ನಿರಂತರ ಕಾರ್ಯಕ್ರಮಗಳು ಹಾಗೂ ಜಿಲ್ಲಾ ಸಮ್ಮೇಳನಗಳ ಮೂಲಕ ಶರಣ ಸಾಹಿತ್ಯ ವಚನ ಸಾಹಿತ್ಯವನ್ನು ಪ್ರತಿಯೊಬ್ಬರಿಗೆ ತಲುಪಿಸುವ ಕೆಲಸ ಶರಣ ಸಾಹಿತ್ಯ ವೇದಿಕೆ ಮೂಲಕ ನಡೆಯುತ್ತಿದೆ. ಶರಣ ಸಾಹಿತ್ಯ ವಚನಗಳ ಅಧ್ಯಯನಗಳ ಮೂಲಕ ಮಾನವನ ಅಂತರAಗದ ಬದಲಾವಣೆ ಆಗಲು ಸಾಧ್ಯ ಎಂದ ಶ್ರೀಗಳು ಅಧ್ಯಾತ್ಮಿಕ, ಧಾರ್ಮಿಕ ನೆಲೆಗಟ್ಟಿನಲ್ಲಿ ವಚನ ಸಾಹಿತ್ಯ ನೆಲೆ ನಿಂತಿವೆ ಎಂದರು. ಪ್ರತಿಯೊಂದು ಕ್ಷೇತ್ರದಲ್ಲಿ ರಾಜಕೀಯ, ಸಾಮಾಜಿಕ ಬೆಳವಣಿಗೆಗಳ ನಡುವೆ ಧಾರ್ಮಿಕ ಬೆಳವಣಿಗೆಗಳು ಆಗಬೇಕಾಗಿದೆ. ಗದ್ದುಗೆ ಅರಮನೆಗಳು ಜೀರ್ಣೋದ್ಧಾರವಾಗಬೇಕಾಗಿದೆ. ಈ ನಿಟ್ಟಿನಲ್ಲಿ ಸರಕಾರ, ಸ್ಥಳೀಯ ಕ್ಷೇತ್ರದ ಶಾಸಕರುಗಳು ಸಹಕರಿಸಬೇಕಾಗಿದೆ ಎಂದು ಕೋರಿದರು.
ಶರಣ ಸಾಹಿತ್ಯವನ್ನು ಪ್ರತಿಯೊಬ್ಬರೂ ಬದುಕಿನ ಅಂಗವಾಗಿ ಅಳವಡಿಸಿಕೊಳ್ಳುವಂತಾಗಬೇಕು ಎಂದು ಕರೆ ನೀಡಿದ ಶ್ರೀಗಳು, ಶರಣ ಸಾಹಿತ್ಯದ ೧೪ ನೇ ರಾಷ್ಟ್ರೀಯ ಸಮ್ಮೇಳನ ಬೆಂಗಳೂರಿನಲ್ಲಿ ಜುಲೈ ತಿಂಗಳಲ್ಲಿ ಆಯೋಜಿಸಲಾಗಿದೆ. ಇದಕ್ಕೆ ಪೂರಕವಾಗಿ ಜಿಲ್ಲಾ ಸಮ್ಮೇಳನಗಳು ಬುನಾದಿಯಾಗಲಿವೆ ಎಂದು ಹೇಳಿದರು.
ವಚನಗಳ ಸಾರ ತಿಳಿಸಬೇಕು
ಸಮ್ಮೇಳನದ ಉದ್ಘಾಟನೆ ನೆರವೇರಿಸಿದ ಕರ್ನಾಟಕ ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಶರಣರಿದ್ದಲ್ಲಿ ಸಂಸ್ಕಾರ ಸಾಹಿತ್ಯ ಸಂಗೀತ ಸೇರಿದಂತೆ ಎಲ್ಲಾ ರೀತಿಯ ಸೇವೆಗಳನ್ನು ಕಾಣಬಹುದು.
ಶರಣ ತತ್ವ ಅಳವಡಿಸಿಕೊಂಡಲ್ಲಿ ಯಶಸ್ಸು ಗಳಿಸಲು ಸಾಧ್ಯ. ಮಹಿಳೆಯರ ಮೂಲಕ ಮಾತ್ರ ಮಕ್ಕಳಿಗೆ ಸಂಸ್ಕಾರ ಬದುಕು ಕಲಿಸುವ ಹೆಚ್ಚಿನ ಸಾಧ್ಯತೆ ಇರುವುದಾಗಿ ಹೇಳಿದರು.
ಸಮ್ಮೇಳನಗಳ ಮೂಲಕ ಬಸವ ತತ್ವ ಶರಣ ಸಾಹಿತ್ಯ ವಚನಗಳ ಸಾರಗಳನ್ನು ತಿಳಿಸುವ ಕೆಲಸ ನಿರಂತರವಾಗಿ ಸಾಗಬೇಕು ಎಂದರು. ಕೊಡಗು ಜಿಲ್ಲಾ ಶರಣ ಸಾಹಿತ್ಯ ವೇದಿಕೆ ಮೂಲಕ ಮಾದರಿ ಕಾರ್ಯಕ್ರಮ ಹಮ್ಮಿಕೊಂಡಿರುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಭಕ್ತಿ ಮೂಡಿಸಬೇಕು
ಸಮ್ಮೇಳನದಲ್ಲಿ ಆಶಯ ನುಡಿಗಳನಾಡಿದ ಮಡಿಕೇರಿ ವಿಧಾನಸಭಾ ಕ್ಷೇತ್ರ ಶಾಸಕ ಡಾ. ಮಂತರ್ ಗೌಡ, ಮನೆಯಿಂದಲೇ ಸಮಾನತೆಯ ಆರಂಭ ಆಗಬೇಕು ಆ ಮೂಲಕ ಸಮಾಜದಲ್ಲಿ ಸಮಗ್ರ ಸಮಾನತೆಯನ್ನು ಕಾಣಲು ಸಾಧ್ಯ ಎಂದರು.
ಸಮುದಾಯವನ್ನು ಒಗ್ಗೂಡಿಸುವ ಕೆಲಸವನ್ನು ಸಂಘಟನೆಗಳು ಮಾಡಬೇಕಾಗಿದೆ ೧೨ನೇ ಶತಮಾನದ ವಚನಗಳು ಪ್ರಸಕ್ತ ದಿನಗಳಲ್ಲಿ ಪ್ರಸ್ತುತ ಪಡಿಸುವ ಕಾರ್ಯ ಆಗಬೇಕಾಗಿದೆ. ಕುಶಾಲನಗರದಲ್ಲಿ ನಿರ್ಮಾಣವಾಗಲಿರುವ ವೀರಶೈವ ಮಹಾಸಭಾ ಕಟ್ಟಡಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದ ಮಂತರ್ ಗೌಡ ಅವರು; ತಮ್ಮ ಅನುದಾನದ ಮೂಲಕ ೫೦ ಲಕ್ಷ ನೀಡುವ ಭರವಸೆ ವ್ಯಕ್ತಪಡಿಸಿದರು. ಮಕ್ಕಳಲ್ಲಿ ಭಕ್ತಿ ಮೂಡಿಸುವ ಕೆಲಸವನ್ನು ಮಾಡಬೇಕಾಗಿದೆ. ಎಂದ ಶಾಸಕರು ಸಾಹಿತ್ಯ ವಚನಗಳ ತತ್ವಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕಾಗಿದೆ ಎಂದರು. ಅಖಿಲ ಭಾರತ ಶರಣ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ. ಸಿ. ಸೋಮಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಶರಣ ಸಾಹಿತ್ಯದ ಆಶಯ ಮೂಲ ಉದ್ದೇಶದ ಬಗ್ಗೆ ಸಮಗ್ರ ಮಾಹಿತಿಗಳನ್ನು ಒದಗಿಸಿದರು. ಪರಿಷತ್ ಮೂಲಕ ನೊಂದ, ಶೋಷಣೆಗೆ ಒಳಗಾದ ವರ್ಗಕ್ಕೆ ಸಾಂತ್ವನ ಹೇಳುವ ಕೆಲಸ ಆಗುತ್ತಿದೆ ಎಂದರಲ್ಲದೆ ಕಳೆದ ನಾಲ್ಕು ದಶಕಗಳಿಂದ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ಮಾಹಿತಿ ಒದಗಿಸಿದರು.
ಧರ್ಮಕ್ಕೆ ದಯೆಯ ಲೇಪನ ನೀಡಿದ ಶರಣ ಸಾಹಿತ್ಯದ ಬಗ್ಗೆ ಅವರು ವಿವರ ನೀಡಿದರು. ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾಯಕ ದೈವಿಕ ರೂಪದಲ್ಲಿರಬೇಕು
ಅನುಭವ ನುಡಿಗಳನ್ನು ಆಡಿದ ಕೊಡಗು ವಿಶ್ವವಿದ್ಯಾಲಯ ಕುಲಪತಿ ಡಾ ಅಶೋಕ್ ಸಂಗಪ್ಪ ಆಲೂರ ಮಾತನಾಡಿ ಜ್ಞಾನದ ದಾರಿದೀಪಗಳನ್ನು ಜೀವನದಲ್ಲಿ ರೂಪಿಸುವ ಕೆಲಸವನ್ನು ಶರಣ ಸಾಹಿತ್ಯಗಳು ತಿಳಿಸಿಕೊಡುತ್ತವೆ. ಜೀವನವನ್ನು ಅನುಭವಗಳ ಮೂಲಕ ಮತ್ತೆ ಜೀವಂತವಾಗಿಸುವ ಕೆಲಸ ಶರಣ ಸಾಹಿತ್ಯದ ಮೂಲಕ ನಡೆಯುತ್ತಿದೆ ಎಂದ ಅವರು; ಶರಣ ವಚನ ಸಾಹಿತ್ಯಗಳು ಗಡಿಗಳನ್ನು ಮೀರಿ ದುಡಿಯುವ ಕೈಗಳಿಗೆ ಉತ್ತುಂಗ ಸ್ಥಾನ ನೀಡುತ್ತಿದೆ ಎಂದರು. ಪ್ರತಿಯೊಬ್ಬರೂ ಎಲ್ಲಾ ಕಾಯಕಗಳಲ್ಲಿ ಸಮರ್ಪಣಾ ಭಾವದಿಂದ ತೊಡಗಿಸಿಕೊಳ್ಳಬೇಕು ಎಂದ ಅವರು; ಕಾಯಕ ದೈವಿಕ ರೂಪದಲ್ಲಿರಬೇಕು ಕಾಯಕದಲ್ಲಿ ತಾರತಮ್ಯ ಇರಬಾರದು ಅಹಂಕಾರವನ್ನು ತೊರೆಯಬೇಕು ಎಂದರು. ಸಂಪತ್ತನ್ನು ಸಮಾಜಕ್ಕೆ ನೀಡಿದಾಗ ಮೌಲ್ಯಯುತ ಬದುಕು ಸಾಗಿಸಲು ಸಾಧ್ಯ ಎಂದ ಅವರು ಜ್ಞಾನ ಸಂಪತ್ತು ಮತ್ತು ಅಧಿಕಾರಗಳನ್ನು ಹಂಚುವAತಾಗಬೇಕು. ಶಾಲಾ ಕಾಲೇಜುಗಳಲ್ಲಿ ವಚನ ಮಂಡಳಿಗಳ ರಚನೆ ಆಗಬೇಕು ವಚನ ವೇದಿಕೆಗಳು ಸೃಷ್ಟಿಯಾಗಬೇಕು ಸ್ಥಳೀಯ ಅಧ್ಯಯನದ ಮೂಲಕ ಸಂಸ್ಕೃತಿ ಮತ್ತು ಸಂಪ್ರದಾಯಗಳ ದಾಸೋಹಗಳು ನಡೆಯುವ ಮೂಲಕ ಜನತೆಗೆ ಬಸವಣ್ಣನ ಸಂದೇಶಗಳು ತಲುಪುವಂತಾಗಬೇಕು ಎಂದು ಹೇಳಿದರು.
ವಿಶೇಷ ಅತಿಥಿಗಳಾಗಿ ಪಾಲ್ಗೊಂಡ ಹಿರಿಯ ನ್ಯಾಯವಾದಿ ಎಚ್.ಎಸ್. ಚಂದ್ರ ಮೌಳಿ, ಶಕ್ತಿ ದಿನಪತ್ರಿಕೆಯ ಸಲಹಾ ಸಂಪಾದಕರಾದ ಬಿ.ಜಿ. ಅನಂತಶಯನ ಮಾತನಾಡಿದರು. ಇದೇ ಸಂದರ್ಭ ವಿವಿಧ ಕ್ಷೇತ್ರದ ಸಾಧಕರುಗಳಾದ ಟಿ.ಆರ್. ಶರವಣ ಕುಮಾರ್ ಎಂ.ಬಿ. ಬಸವರಾಜು, ಸುಶೀಲಾ ಎಸ್.ಕೆ., ವೀರಪ್ಪ, ಭಾರದ್ವಾಜ್ ಆನಂದ ತೀರ್ಥ ಜೆ ಎಸ್ ಗಿರೀಶ್, ಲಕ್ಷ್ಮಮ್ಮ, ವರಪ್ರಸಾದ್ ಮತ್ತು ಮಣಜೂರು ಮಂಜುನಾಥ್ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ವೇದಿಕೆಯಲ್ಲಿ ವಿವಿಧ ಮಠಗಳ ಮಠಾಧೀಶರಾದ ನಟರಾಜ ಸ್ವಾಮೀಜಿ, ಚೆನ್ನಬಸವ ದೇಶ ಕೇಂದ್ರ ಸ್ವಾಮೀಜಿ, ಅಪ್ಪಾಜಿ ಸ್ವಾಮೀಜಿ, ಇಮ್ಮಡಿ ಶಿವಲಿಂಗ ಸ್ವಾಮೀಜಿ, ರುದ್ರಮುನಿ ಸ್ವಾಮೀಜಿ, ಸೇರಿದಂತೆ ವಿವಿಧ ಮಠಾಧೀಶರುಗಳು, ಮಾಹಿತಿ ಆಯೋಗದ ಮಾಜಿ ಅಧ್ಯಕ್ಷ ಜೆ.ಎಸ್. ವಿರೂಪಾಕ್ಷಯ್ಯ ಅಖಿಲ ಭಾರತ ವೀರಶೈವ ಮಹಾಸಭಾದ ಕೊಡಗು ಜಿಲ್ಲಾ ಅಧ್ಯಕ್ಷ ಎಚ್.ವಿ. ಶಿವಪ್ಪ, ಹಾಸನ ಪರಿಷತ್ ಅಧ್ಯಕ್ಷÀ ಎಂ.ಎನ್. ಕುಮಾರಸ್ವಾಮಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷÀ ಕೇಶವ ಕಾಮತ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷÀ ವಿ.ಪಿ. ಶಶಿಧರ್, ಕದಳಿ ವೇದಿಕೆಯ ರಾಜ್ಯ ಸಂಚಾಲಕಿ ಸುಶೀಲಾ ಸೋಮಶೇಖರ್, ವಾಣಿಜ್ಯ ತೆರಿಗೆ ಇಲಾಖೆ ಅಪರ ಆಯುಕ್ತÀ ಸಿದ್ದಪ್ಪ, ಅಕ್ಕನ ಬಳಗ ಕದಳಿ ವೇದಿಕೆ ಪದಾಧಿಕಾರಿಗಳು ಮತ್ತು ಸಮ್ಮೇಳನದ ವಿವಿಧ ಸಮಿತಿಗಳ ಅಧ್ಯಕ್ಷರು ಸಂಚಾಲಕರು ಇದ್ದರು.
ಸಭಾಂಗಣದ ಆವರಣದಲ್ಲಿ ರಾಷ್ಟ್ರಧ್ವಜ, ಕನ್ನಡ ಧ್ವಜ ಮತ್ತು ಶರಣ ಸಾಹಿತ್ಯ ಪರಿಷತ್ತಿನ ಧ್ವಜ ಆರೋಹಣ ಮಾಡಲಾಯಿತು. ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಸ್. ಮೂರ್ತಿ ಸ್ವಾಗತಿಸಿದರು. ಕೊಡಗು ವಿಶ್ವವಿದ್ಯಾಲಯದ ಉಪನ್ಯಾಸಕÀ ಡಾ ಜಮೀರ್ ಅಹ್ಮದ್ ಕಾರ್ಯಕ್ರಮ ನಿರೂಪಿಸಿದರು.
ನಂತರ ನಡೆದ ಅನುಭವ ಮಂಟಪ ವಿಚಾರಗೋಷ್ಠಿಗಳಲ್ಲಿ ವಚನಗಳಲ್ಲಿ ಕಾಯಕ ಪ್ರಜ್ಞೆ ಬಗ್ಗೆ ನಿವೃತ್ತ ಪ್ರಾಂಶುಪಾಲ ಜೆ. ಸೋಮಣ್ಣ ಉಪನ್ಯಾಸ ನೀಡಿದರು. ವಚನಕಾರರ ಮುನ್ನಡೆಗೆ ಬಂದ ಗೌಪ್ಯ ವಚನಗಾರ್ತಿಯರು ವಿಚಾರಗೋಷ್ಠಿಯಲ್ಲಿ ಗೋಣಿಕೊಪ್ಪ ಕಾವೇರಿ ಕಾಲೇಜು ಸಹಾಯಕ ಪ್ರಾಧ್ಯಾಪಕಿ ಎಸ್.ಎಂ. ರಜನಿ ಉಪನ್ಯಾಸ ನೀಡಿದರು.