ಕುಶಾಲನಗರ, ಜೂ. ೨೧: ಭಾರತೀಯ ಸೇನೆಯ ಅಗ್ನಿವೀರ್‌ಗೆ ಕುಶಾಲನಗರದಲ್ಲಿ ತರಬೇತಿಗೊಂಡು ಆಯ್ಕೆಯಾದ ಏಳು ಮಂದಿ ಯುವಕರನ್ನು ಬೀಳ್ಕೊಡಲಾಯಿತು.
ಕೊಡಗು ಎಜುಕೇಶನಲ್ ಅಂಡ್ ಸೋಶಿಯಲ್ ಸರ್ವಿಸ್ ಟ್ರಸ್ಟ್ ವತಿಯಿಂದ ಕುಶಾಲನಗರ ಪ್ರವಾಸಿ ಮಂದಿರ ಆವರಣದಲ್ಲಿ ಚಹಾ ಕೂಟದೊಂದಿಗೆ ನಡೆದ ಸರಳ ಕಾರ್ಯಕ್ರಮದಲ್ಲಿ ಟ್ರಸ್ಟ್ ಕಾರ್ಯದರ್ಶಿ ಮಾರ್ಚಂಡ ಗಣೇಶ್ ಪೊನ್ನಪ್ಪ, ಖಜಾಂಚಿ ಕ್ಯಾಪ್ಟನ್ ಪಟ್ಟಡ ಕಾರ್ಯಪ್ಪ ಮತ್ತು ಕಾರ್ಯಕ್ರಮ ಸಂಯೋಜಕರಾದ ನಿವೃತ್ತ ಹವಾಲ್ದಾರ್ ಆಮೆ ಜನಾರ್ಧನ್ ಅವರುಗಳು ಯುವಕರಿಗೆ ಶುಭ ಹಾರೈಸಿದರು.
ನಿವೃತ್ತ ಹವಾಲ್ದಾರ್ ಅಮೆ ಜನಾರ್ಧನ್ ಅವರ ನೇತೃತ್ವದಲ್ಲಿ ತರಬೇತು ಪಡೆದು ದೇಶದ ವಿವಿಧ ಸೇನಾ ವಿಭಾಗಗಳಿಗೆ ಆಯ್ಕೆಯಾದ ಬಿ.ಎಲ್. ಕುಶಾಲ್, ಯು.ಎ. ಸಚಿನ್, ಸಿ.ವಿ. ಮಿಥುನ್, ಬಿ.ಎಲ್. ಮನಸ್ವಿನ್, ಎನ್.ಎಂ. ಅಜಿತ್, ಸೂರಜ್ ಮತ್ತು ನವೀನ್ ಅವರುಗಳು ಈ ತಿಂಗಳ ೨೫ಕ್ಕೆ ಭಾರತೀಯ ಸೇನೆಗೆ ಸೇರ್ಪಡೆಯಾಗಲಿದ್ದಾರೆ. ಕಳೆದ ಹಲವು ವರ್ಷಗಳಿಂದ ೨೨೫ಕ್ಕೂ ಅಧಿಕ ಯುವಕರನ್ನು ತರಬೇತಿಗೊಳಿಸಿ ಸೇನೆಯ ಆಯ್ಕೆಗೆ ಸಜ್ಜುಗೊಳಿಸಿರುವ ಸಾಧನೆ ನಿವೃತ್ತ ಹವಾಲ್ದಾರ್ ಅಮೆ ಜನಾರ್ಧನ್ ಅವರದು. ಈಗಾಗಲೇ ಸೇನಾ ವಿಭಾಗದಲ್ಲಿ ಲೆಫ್ಟಿನೆಂಟ್ ಆಗಿ ನೇಮಕಗೊಂಡಿರುವ ಕುಶಾಲನಗರದ ರಾಹುಲ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.