ಬೆಂಗಳೂರು, ಜೂ. ೨೦: ಸಾರ್ವಜನಿಕರ ಅಹವಾಲುಗಳ ಪರಿಹಾರಕ್ಕೆ ರಾಜ್ಯದಲ್ಲಿ ಪ್ರತ್ಯೇಕ ಸಚಿವಾಲಯ ರಚನೆ ಮಾಡಲಾಗುತ್ತಿದ್ದು, ಅದಕ್ಕೆ ಸಚಿವರನ್ನು ಕೂಡ ನೇಮಕ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ನೂತನ ಸಚಿವಾಲಯಕ್ಕೆ ಪ್ರಜಾಸೇವೆ ಇಲಾಖೆ ಎಂದು ಹೆಸರಿಡಲಾಗುವುದು. ಅದಕ್ಕೆ ಸಚಿವರ ನೇಮಕ ಮಾಡಲಾಗುತ್ತಿದ್ದು, ಅವರು ಇಲಾಖೆಗೆ ಸಂಬAಧಿಸಿದ ವಿಷಯಗಳನ್ನು ನಿರ್ವಹಿಸಲು ಹಿರಿಯ ಐಎಎಸ್ ಅಧಿಕಾರಿಯನ್ನು ಸಹ ನೇಮಿಸಲಾಗುತ್ತದೆ ಎಂದರು. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ಕೆಲವು ಪ್ರಮುಖ ನಿರ್ಣಯಗಳ ಬಗ್ಗೆ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿಯಿತ್ತರು. ‘ಇದು ಕೇವಲ ಅರ್ಜಿಗಳನ್ನು ಸಾಗಿಸುವ ಪೋಸ್ಟ್ ಮ್ಯಾನ್ ಕೆಲಸವಲ್ಲ. ಜನರಿಗೆ ನ್ಯಾಯ ದೊರಕಿಸುವ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸಲಿದೆ’ ಎಂದು ಹೇಳಿದರು. ಈ ಪ್ರಸ್ತಾವಿತ ಸಚಿವಾಲಯವು ಅಹವಾಲು ಪರಿಹಾರ ಕಾರ್ಯಗಳನ್ನು ಸಂಯೋಜಿಸಿ, ನಾಗರಿಕರು ಹಾಗೂ ಆಡಳಿತದ ನಡುವೆ ಉತ್ತಮ ಸಂವಹನವನ್ನು ಖಚಿತಪಡಿಸಲಿದೆ ಎಂದರು.

೨೨೪ ಕ್ಷೇತ್ರಗಳಲ್ಲಿ ಜನಸ್ಪಂದನಾ ಸಭೆ

ವಿಧಾನಸಭಾ ಕ್ಷೇತ್ರಗಳಲ್ಲಿ ಸಚಿವರು ಮತ್ತು ಶಾಸಕರ ಸಮ್ಮುಖದಲ್ಲಿ ಜನಸ್ಪಂದನಾ ಸಭೆಗಳನ್ನು ನಡೆಸಲಾಗುತ್ತದೆ. ಕ್ಷೇತ್ರಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿ, ನಂತರ ಸರ್ಕಾರದ ಮಟ್ಟದಲ್ಲಿ ಪರಿಶೀಲಿಸಿ ಪರಿಹಾರ ಒದಗಿಸುವ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸಲಿದೆ. ಜಿಲ್ಲಾ ಸಚಿವರು ಮತ್ತು ಶಾಸಕರು ತಂತಮ್ಮ ಕ್ಷೇತ್ರಗಳಲ್ಲಿ ಕಡ್ಡಾಯವಾಗಿ ಜನಸ್ಪಂದನಾ ಸಭೆ ನಡೆಸಬೇಕು. ಎಲ್ಲ ೨೨೪ ಕ್ಷೇತ್ರಗಳಲ್ಲಿಯೂ ಈ ಸಭೆೆಗಳು ನಡೆಯಬೇಕು. ಜನರ ಹಿತ ಬಹಳ ಮುಖ್ಯ. ನಾವು ಯಾರೂ ಸರ್ವಜ್ಞರಲ್ಲ. ಜನರಿಗೆ ಹಲವು ಸಮಸ್ಯೆ ಎದುರಾಗುತ್ತದೆ. ಮಾಧ್ಯಮಗಳಲ್ಲಿಯೂ ಸಾರ್ವಜನಿಕರು ಸಮಸ್ಯೆಗಳನ್ನು ಹೇಳುತ್ತಾರೆ. ಅದನ್ನೆಲ್ಲ ಸಮನ್ವಯತೆ ಮಾಡಿ ಸ್ಪಂದಿಸಲು ಈ ಸಚಿವಾಲಯದ ಮೂಲಕ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು. ಸಾರ್ವಜನಿಕರ ಅಹವಾಲು, ಸಮಸ್ಯೆಗಳಿಗೆ ಸ್ಪಂದಿಸಲು, ಅವರಿಗೆ ನ್ಯಾಯ ಒದಗಿಸಲು, ಅಧಿಕಾರಿಗಳ ತಪ್ಪನ್ನು ತಿದ್ದಲು ಈ ಹೊಸ ಸಚಿವಾಲಯ ಪ್ರಾರಂಭಿಸುತ್ತಿರುವುದಾಗಿ ಖಚಿತಪಡಿಸಿದರು.