ಕುಶಾಲನಗರ, ಜೂ. ೨೦: ಕೇಂದ್ರ ಸರ್ಕಾರದ ವಿರುದ್ಧ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಕಚೇರಿಯಿಂದ ಮೆರವಣಿಗೆ ಮೂಲಕ ಹೊರಟು ಕುಶಾಲನಗರ ಗಣಪತಿ ದೇವಾಲಯ ಬಳಿ ಸೇರಿ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೆಲ ಕಾಲ ಮಾನವ ಸರಪಳಿ ರಚಿಸಿ ರಸ್ತೆ ತಡೆ ಮಾಡಿದರು.

ಯುದ್ಧ ನೆಪದಲ್ಲಿ ಪೆಟ್ರೋಲ್ ಡೀಸೆಲ್ ಮತ್ತು ಅನಿಲ ಬೆಲೆ ಏರಿಕೆ ಮಾಡಿದ್ದು ಇದೀಗ ಯುದ್ಧ ನಂತರ ಬೆಲೆ ಇಳಿಸಬೇಕಾಗಿದೆ. ಆದರೆ ಕೇಂದ್ರ ಸರ್ಕಾರ ದಿವ್ಯ ಮೌನ ವಹಿಸಿದೆ ಎಂದು ವಿ.ಪಿ. ಶಶಿಧರ್ ಆರೋಪಿಸಿದರು. ನೀಟ್ ಪರೀಕ್ಷೆಯ ಅಕ್ರಮ, ಪತ್ರಿಕೆಗಳು ಸೋರಿಕೆಯಾಗಿ ಮತ್ತೆ ಮರು ಪರೀಕ್ಷೆ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಬರೆ ಎಳೆದಂತಾಗಿದೆ. ಕೇಂದ್ರ ಬಿಜೆಪಿ ಸರ್ಕಾರ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟ ಆಡುತ್ತಿರುವುದು ವಿಪರ್ಯಾಸ.

ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕಿತ್ತು. ಇದೀಗ ದೇಶದಲ್ಲಿಯೇ ಪ್ರಥಮ ಬಾರಿಗೆ ವಾಯುಪಡೆ ನೆರವಿನೊಂದಿಗೆ ನೀಟ್ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವುದು ಕೇಂದ್ರ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ ಎಂದು ಶಶಿಧರ್ ದೂರಿದರು. ರಾಜ್ಯ ಸರ್ಕಾರದ ಕನಿಷ್ಟ ವೇತನ ಸಲಹಾ ಮಂಡಳಿಯ ಅಧ್ಯಕ್ಷ ಟಿ.ಎಂ. ಶಾಹಿದ್ ತೆಕ್ಕಿಲ್ ಮಾತನಾಡಿ, ಕೇಂದ್ರ ಸರ್ಕಾರ ಎಲ್ಲಾ ಕ್ಷೇತ್ರದಲ್ಲಿಯೂ ಸಂಪೂರ್ಣ ವೈಫಲ್ಯ ಕಾಣುತ್ತಿದೆ ಎಂದು ಆರೋಪಿಸಿದರು.

ಈ ಸಂದರ್ಭ ಕಾಂಗ್ರೆಸ್ ಪ್ರಮುಖರಾದ ಮಂಜುನಾಥ್ ಕುಮಾರ್, ಕೆ ಕೆ ನಟೇಶ್ ಗೌಡ, ಚಂದ್ರ ಶೇಖರ್, ವಿ.ಎಸ್. ಆನಂದ್ ಕುಮಾರ್, ಜೆ ಫಿಲೋಮಿನಾ, ತೊರೆನೂರು ಕೃಷ್ಣೇಗೌಡ ಹಾಗೂ ಪಕ್ಷದ ತಾಲೂಕು ಹೋಬಳಿ ಘಟಕಗಳ ಪದಾಧಿಕಾರಿಗಳು ಸ್ಥಳೀಯ ಸಮಿತಿಗಳ ಸದಸ್ಯರು, ಪಕ್ಷದ ಪ್ರಮುಖರು ಕಾರ್ಯಕರ್ತರು ಇದ್ದರು.