ಸೋಮವಾರಪೇಟೆ, ಜೂ. ೨೦: ನಿವೇಶನಕ್ಕೆ ಆಗ್ರಹಿಸಿ ಕುಂಬೂರು ಗ್ರಾಮದಲ್ಲಿ ನಿವೇಶನ ರಹಿತರು ನಡೆಸುತ್ತಿರುವ ಪ್ರತಿಭಟನೆ ೫೦ ದಿನ ಪೂರೈಸಿದರೂ ಪೂರಕ ಸ್ಪಂದನ ದೊರಕದ ಹಿನ್ನೆಲೆ ತಾ. ೨೫ರಂದು ಶಾಸಕ ಡಾ. ಮಂತರ್ ಗೌಡ ಅವರ ಮನೆ ಎದುರು ಉಪವಾಸ ಸತ್ಯಾಗ್ರಹ ನಡೆಸಲು ಪ್ರತಿಭಟನಾಕಾರರು ನಿರ್ಧಾರ ಕೈಗೊಂಡಿದ್ದಾರೆ.
ಮಾದಾಪುರ ಗ್ರಾಮ ಪಂಚಾಯಿತಿ ಕುಂಬೂರು ಗ್ರಾಮದ ಸರ್ವೆ ನಂ. ೧೨೫/೧ ಮತ್ತು ೨೨/೧-೨ ರ ಸರಕಾರಿ ಜಾಗದಲ್ಲಿ ಕಳೆದ ತಿಂಗಳು ತಾ. ೨ರಿಂದ ನಿವೇಶನಕ್ಕಾಗಿ ಅಹೋರಾತ್ರಿ ಹೋರಾಟ ನಡೆಸುತ್ತಿದ್ದರೂ ಜಿಲ್ಲಾಡಳಿತ ಖುದ್ದು ಭೇಟಿ ನೀಡಿ ಸಮಸ್ಯೆ ಆಲಿಸಿಲ್ಲ. ಪ್ರತಿಭಟನೆಗೆ ಸ್ಪಂದಿಸಿಲ್ಲ. ಜಿಲ್ಲಾಡಳಿತದ ಈ ಧೋರಣೆಯ ವಿರುದ್ಧ ತಾ. ೨೫ರಂದು ಶಾಸಕರಾದ ಮಂತರ್ಗೌಡ ಅವರ ಮನೆಯವರೆಗೂ ಜಾಥಾ ನಡೆಸಿ, ಮನೆ ಎದುರು ಪ್ರತಿಭಟನೆ ಹಮ್ಮಿಕೊಳ್ಳುವ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆಯಲಾಗಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಪ್ರತಿಭಟನೆಯ ನೇತೃತ್ವ ವಹಿಸಿರುವ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ಜಿಲ್ಲಾಧ್ಯಕ್ಷ ಕೆ. ಮೊಣ್ಣಪ್ಪ ಅವರು ನಿವೇಶನಕ್ಕಾಗಿ ಹೋರಾಟ ನಡೆಸುತ್ತಿದ್ದರೂ ಕೊಡಗು ಜಿಲ್ಲಾಡಳಿತವಾಗಲಿ, ಶಾಸಕರಾಗಲಿ ಸ್ಥಳಕ್ಕೆ ಬಂದು ಬಡವರ ಸಮಸ್ಯೆಯನ್ನು ಆಲಿಸದೆ ಕಡೆಗಣಿಸಿರುವುದು ಖಂಡನೀಯ ಎಂದಿದ್ದಾರೆ.
ಈ ಹಿನ್ನೆಲೆ ತಾ. ೨೫ ರಂದು ಶಾಸಕರ ಸೋಮವಾರಪೇಟೆಯ ಮನೆಯ ಮುಂದೆ ಉಪವಾಸ ಸತ್ಯಾಗ್ರಹ ಮತ್ತು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಅಂದು ಬೆಳಿಗ್ಗೆ ೧೦.೩೦ಕ್ಕೆ ಮಾದಾಪುರ ಪಟ್ಟಣದಿಂದ ಪ್ರತಿಭಟನಾ ಜಾಥಾ ನಡೆಸಲು ನಿರ್ಧರಿಸಲಾಗಿದೆ ಎಂದು ಮೊಣ್ಣಪ್ಪ ತಿಳಿಸಿದ್ದಾರೆ.
ಕಳೆದ ೫೦ ದಿನಗಳಿಂದ ಮಳೆ, ಬಿಸಿಲನ್ನೂ ಲೆಕ್ಕಿಸದೇ ನಿವೇಶನಕ್ಕಾಗಿ ಹೋರಾಟ ನಡೆಯುತ್ತಿದೆ. ಪ್ರತಿಭಟನಾ ಸ್ಥಳದಿಂದಲೇ ಪ್ರತಿದಿನ ೧೨ ಮಕ್ಕಳು ಶಾಲೆಗೆ ತೆರಳುತ್ತಿದ್ದಾರೆ. ವೃದ್ಧರು ಟೆಂಟ್ನಲ್ಲಿದ್ದಾರೆ. ೨೦ಕ್ಕೂ ಅಧಿಕ ಸಣ್ಣಮಕ್ಕಳಿದ್ದಾರೆ. ನ್ಯಾಯಯುತವಾಗಿ ಕೇಳುವ ಬೇಡಿಕೆಯನ್ನೂ ಸಹ ಜಿಲ್ಲಾಡಳಿತ ಹಾಗೂ ಶಾಸಕರು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಮೊಣ್ಣಪ್ಪ ತಿಳಿಸಿದ್ದಾರೆ.
ವಾರದೊಳಗೆ ಭೇಟಿ-ಕಾನೂನು ಭಾಗದಲ್ಲಿ ಕ್ರಮ: ಶಾಸಕ ಮಂತರ್
‘ನಿವೇಶನಕ್ಕೆ ಆಗ್ರಹಿಸಿ ಹೋರಾಟ ನಡೆಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಕಾನೂನು ಭಾಗದಲ್ಲಿ ನಿವೇಶನ ಒದಗಿಸಲು ಕ್ರಮ ವಹಿಸಲಾಗುತ್ತದೆ. ಗ್ರಾಮ ಸಭೆಗಳಲ್ಲಿ ನಿವೇಶನ ರಹಿತರ ಪಟ್ಟಿ ಮಾಡಿ, ಖಾಲಿ ಇರುವ ಜಾಗವನ್ನು ಗುರುತಿಸಿ’ ಲೇಔಟ್ ಪ್ಲಾನ್’ ಮಾಡಿದ ನಂತರವಷ್ಟೇ ಅರ್ಹ ಫಲಾನುಭವಿಗಳಿಗೆ ನಿವೇಶನ ಒದಗಿಸಲು ಸಾಧ್ಯ. ಈ ನಿಟ್ಟಿನಲ್ಲಿ ತಾನೂ ಕೂಡ ಪ್ರಯತ್ನ ನಡೆಸುತ್ತಿದ್ದೇನೆ. ಈಗ ನಿವೇಶನ ರಹಿತರ ಧರಣಿ ನಡೆಸುತ್ತಿರುವ ಜಾಗದ ದಾಖಲೆಗಳ ಬಗ್ಗೆಯೂ ಗೊಂದಲವಿದೆ. ಪ್ರಸ್ತುತ ಜಾಗ ಅರಣ್ಯ ಇಲಾಖೆಗೆ ಸೇರಿದೆಯೋ ಅಥವಾ ಖಾಸಗಿ ಮಾಲೀಕತ್ವದ್ದೋ, ಅಥವಾ ಸರ್ಕಾರಿ ಪೈಸಾರಿಯೋ ಎಂಬ ಬಗ್ಗೆ ಸ್ಪಷ್ಟತೆಯಿಲ್ಲ. ತಾನೂ ಕೂಡ ನಿವೇಶನ ರಹಿತರ ಪರವಾಗಿಯೇ ಇದ್ದೇನೆ. ನಿವೇಶನ ಒದಗಿಸುವುದು ನಮ್ಮ ಜವಾಬ್ದಾರಿಯೂ ಆಗಿದೆ. ಆದರೆ ಕಾನೂನು ವ್ಯಾಪ್ತಿಯಲ್ಲಿಯೇ ಕಾರ್ಯನಿರ್ವಹಿಸಬೇಕಿದೆ. ಈ ನಿಟ್ಟಿನಲ್ಲಿ ತಾನೂ ಕೂಡ ಕಾರ್ಯೋನ್ಮುಖನಾಗಿದ್ದೇನೆ. ನಿವೇಶನ ರಹಿತರು ಕಷ್ಟಪಟ್ಟು ನನ್ನ ಮನೆಯವರೆಗೂ ಬರುವುದು ಬೇಡ; ವಾರದೊಳಗೆ ತಾನೇ ಖುದ್ದು ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ’ ಎಂದು ಶಾಸಕ ಡಾ. ಮಂತರ್ ಗೌಡ ಅವರು ‘ಶಕ್ತಿ’ಯೊಂದಿಗೆ ಅಭಿಪ್ರಾಯಿಸಿದ್ದಾರೆ.
- ವಿಜಯ್