ವೀರಾಜಪೇಟೆ, ಜೂ. ೨೦: ನಗರದ ಪಾದಚಾರಿಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದ್ದ ಒತ್ತುವರಿ ದಂದೆಗೆ ವೀರಾಜಪೇಟೆ ಪುರಸಭೆ ಮುಖ್ಯಾಧಿಕಾರಿಗಳು ಬ್ರೇಕ್ ಹಾಕಿದ್ದಾರೆ. ಸಾರ್ವಜನಿಕರ ದೂರಿಗೆ ತಕ್ಷಣ ಸ್ಪಂದಿಸಿದ ಅಧಿಕಾರಿಗಳು, ಶನಿವಾರ ರಸ್ತೆಗಿಳಿದು ಕಾರ್ಯಾಚರಣೆ ನಡೆಸಿದ್ದಾರೆ.

ವೀರಾಜಪೇಟೆಯ ಪ್ರಮುಖ ರಸ್ತೆಗಳ ಹಾಗೂ ಗೌರಿಕೆರೆಗೆ ತೆರಳುವ ರಸ್ತೆ, ಖಾಸಗಿ ಬಸ್ಸು ನಿಲ್ದಾಣ ಸೇರಿದಂತೆ ಪಟ್ಟಣದಾದ್ಯಂತ ಪಾದಚಾರಿ ಮಾರ್ಗಗಳನ್ನು ಸ್ಥಳೀಯ ಅಂಗಡಿ ಮಾಲೀಕರು ಅತಿಕ್ರಮಿಸಿಕೊಂಡು ವ್ಯಾಪಾರ ನಡೆಸುತ್ತಿದ್ದರು. ಇದರಿಂದಾಗಿ ಸಾರ್ವಜನಿಕರು, ಮುಖ್ಯವಾಗಿ ವೃದ್ಧರು, ಮಹಿಳೆಯರು ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳು ಜೀವ ಕೈಯಲ್ಲಿ ಹಿಡಿದು ರಸ್ತೆಯಲ್ಲೇ ಓಡಾಡುವಂತಾಗಿತ್ತು. ಈ ಬಗ್ಗೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಈ ಬಗ್ಗೆ ಕಠಿಣ ನಿರ್ಧಾರವನ್ನು ಪುರಸಭೆ ಮುಖ್ಯಾಧಿಕಾರಿ ಪಿ.ಕೆ. ನಾಚಪ್ಪ ಅವರು ಕೈಗೆತ್ತಿಕೊಂಡಿದ್ದಾರೆ. ಶನಿವಾರ ಸಿಬ್ಬಂದಿಯೊAದಿಗೆ ಸ್ಥಳಕ್ಕೆ ಧಾವಿಸಿದ ಮುಖ್ಯಾಧಿಕಾರಿಗಳು, ಪಾದಚಾರಿ ಮಾರ್ಗದಲ್ಲಿದ್ದ ಅಕ್ರಮ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಿ ರಸ್ತೆಯನ್ನು ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಿದರು.

ನಗರದಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿಯಿಂದ ಸಾರ್ವಜನಿಕರು, ವಿಶೇಷವಾಗಿ ವೃದ್ಧರು, ಮಹಿಳೆಯರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ರಸ್ತೆ ಮೇಲೆಯೇ ಸಂಚರಿಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿತ್ತು.

ಈ ಕುರಿತು ಹಲವಾರು ಬಾರಿ ಸಾರ್ವಜನಿಕರು ಪುರಸಭೆಗೆ ದೂರು ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಿದ್ದರು.

ಈ ಸಂದರ್ಭ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಪಿ.ಕೆ. ನಾಚಪ್ಪ ಅವರು, ಇದು ಕೇವಲ ಒಂದು ದಿನದ ಕಾರ್ಯಾಚರಣೆಯಲ್ಲ. ನಗರದ ಸೌಂದರ್ಯ ಮತ್ತು ಪಾದಚಾರಿಗಳ ಸುರಕ್ಷತೆಯ ದೃಷ್ಟಿಯಿಂದ ಮುಂದಿನ ದಿನಗಳಲ್ಲೂ ಈ ಒತ್ತುವರಿ ತೆರವು ಕಾರ್ಯಾಚರಣೆ ನಿರಂತರವಾಗಿ ಮುಂದುವರಿಯಲಿದೆ.

ಪಾದಚಾರಿಗಳಿಗೆ ಮೀಸಲಾದ ಮಾರ್ಗಗಳಲ್ಲಿ ವ್ಯಾಪಾರಿಗಳು ತಮ್ಮ ಸಾಮಾನುಗಳನ್ನು ಇಟ್ಟು ವ್ಯಾಪಾರ ಮಾಡುತ್ತಿದ್ದರಿಂದ ಹೆಚ್ಚು ದಟ್ಟಣೆ ಉಂಟಾಗುತ್ತಿತ್ತು. ಒತ್ತುವರಿ ಮಾಡಿಕೊಂಡಿದ್ದ ಸಾಮಾನುಗಳನ್ನು ತೆರವುಗೊಳಿಸಲಾಗಿದ್ದು, ಇನ್ನು ಮುಂದೆ ಪಾದಚಾರಿ ಮಾರ್ಗದಲ್ಲಿ ವ್ಯಾಪಾರ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪಾದಚಾರಿಗಳ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಇಂತಹ ಕಾರ್ಯಾಚರಣೆ ಮುಂದುವರೆಯಲಿದೆ.

ಇನ್ನು ಮುಂದೆ ಒತ್ತುವರಿ ಮಾಡಿದರೆ ಕಠಿಣ ಕ್ರಮ, ಪಾದಚಾರಿ ಮಾರ್ಗವು ಕೇವಲ ನಡಿಗೆಗೆ ಮೀಸಲು. ಇಲ್ಲಿ ಯಾರೇ ಸಾಮಗ್ರಿ ಇಟ್ಟರೂ ಮೊದಲಿಗೆ ಎಚ್ಚರಿಕೆ, ಮತ್ತೆ ಒತ್ತುವರಿ ಮಾಡಿದರೆ ಸಾಮಗ್ರಿ ಜಪ್ತಿ ಜೊತೆಗೆ ದಂಡ ವಿಧಿಸಲಾಗುವುದು.

ಪಾದಚಾರಿಗಳ ಸುರಕ್ಷತೆ ನಮ್ಮ ಮೊದಲ ಆದ್ಯತೆ” ಎಂದು ಎಚ್ಚರಿಕೆ ನೀಡಿದರಲ್ಲದೆ ಮುಂದಿನ ದಿನಗಳಲ್ಲಿ ಪಟ್ಟಣದ ಎಲ್ಲಾ ವಾರ್ಡ್ಗಳಲ್ಲೂ ಇದೇ ರೀತಿ ತಪಾಸಣೆ ನಡೆಸಿ ಒತ್ತುವರಿ ತೆರವುಗೊಳಿಸಲಾಗುವುದು ಎಂದು ತಿಳಿಸಿದರು.