ಮಡಿಕೇರಿ, ಜೂ. ೧೮; ಯೋಗ ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ಮನುಷ್ಯನ ಶಾರೀರಿಕ ಮತ್ತು ಮಾನಸಿಕ ಸಮತೋಲನಕ್ಕೆ ಅತ್ಯಂತ ಪರಿಣಾಮಕಾರಿಯಾಗಿರುವ ಯೋಗ ವಿದ್ಯೆಯನ್ನು ಶಾಲಾ-ಕಾಲೇಜುಗಳಲ್ಲಿ ಕಡ್ಡಾಯವಾಗಿ ಕಲಿಸುವಂತಾಗಬೇಕು ಎಂದು ಶಕ್ತಿ ಪತ್ರಿಕೆ ಸಂಪಾದಕ ಜಿ. ಚಿದ್ವಿಲಾಸ್ ಅಭಿಮತ ವ್ಯಕ್ತಪಡಿಸಿದರು.
ನಗರದ ರೆಡ್‌ಬಿಕ್ಸ್ನ ಸತ್ಕಾರ ಸಭಾಂಗಣದಲ್ಲಿ ನಡೆದ ಯೋಗ ಭಾರತಿ ಸಂಸ್ಥೆಯ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಯೋಗಾಭ್ಯಾಸದಿಂದ ಒಬ್ಬ ವ್ಯಕ್ತಿ ಶಾರೀರಿಕ ದೃಢತೆ ಮತ್ತು ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಳ್ಳುತ್ತಾನೆ. ನಿರಂತರ ಯೋಗ ಪ್ರಕ್ರಿಯೆಯಿಂದ ವ್ಯಕ್ತಿಗಳಲ್ಲಿ ತಾಳ್ಮೆ, ಸಹನೆ, ಸಹಾನುಭೂತಿ, ಪ್ರೀತಿ-ವಾತ್ಸಲ್ಯ ಸಹಜವಾಗಿಯೇ ಮೈಗೂಡಿಕೊಳ್ಳುವುದರಿಂದ ಸಮಾಜದ ಆರೋಗ್ಯವೂ ಬಲಗೊಳ್ಳುತ್ತದೆ ಎಂದು ವಿಶ್ಲೇಷಿಸಿದರು.
ಭಾರತೀಯ ಪ್ರಾಚೀನ ಶಿಕ್ಷಣದಲ್ಲಿ ಒಂದಾದ ಯೋಗ, ಪ್ರಾಣಾಯಾಮ ಮತ್ತು ಧ್ಯಾನ ಇವುಗಳು ಒಂದು ಹಂತದಲ್ಲಿ ಮಡಿವಂತಿಕೆಯಿAದ ಕೂಡಿತ್ತು. ಇತ್ತೀಚಿನ ವರ್ಷಗಳಲ್ಲಿ ಇಡೀ ವಿಶ್ವವೇ ಅದನ್ನು ಸ್ವೀಕರಿಸಿ ಜೂನ್ ೨೧ ಅನ್ನು ವಿಶ್ವ ಯೋಗ ದಿನ ಎಂದು ಘೋಷಿಸಿರುವುದರ ಹಿಂದೆ ಭಾರತದ ಪ್ರಾಚೀನ ಪದ್ಧತಿ ಮತ್ತು ಪರಂಪರೆಗಳ ಭವ್ಯತೆಯನ್ನು ಕಾಣಬಹುದು ಎಂದರು.
ಬದಲಾದ ಜೀವನ ಶೈಲಿಯಲ್ಲಿ ಯುವಪೀಳಿಗೆಗೆ ಯೋಗ, ಧ್ಯಾನ ಮತ್ತು ಪ್ರಾಣಾಯಾಮದಂತಹ ನಿತ್ಯ ಅಭ್ಯಾಸ ಅತ್ಯಂತ ಅವಶ್ಯಕ ಎಂದು ಸಲಹೆ ನೀಡಿದ ಚಿದ್ವಿಲಾಸ್, ೨೫ ವರ್ಷಗಳನ್ನು ಪೂರೈಸಿರುವ ಯೋಗ ಭಾರತಿ ಇದುವರೆಗಿನ ಇತಿಹಾಸವನ್ನು ದಾಖಲಿಸುವ ಪ್ರಯತ್ನ ಮಾಡಲಿ ಎಂದು ಅವರು ಆಶಿಸಿದರು.
ಭಾರತೀಯ ವಿದ್ಯಾಭವನದ ಅಧ್ಯಕ್ಷ ಕೆ.ಎಸ್. ದೇವಯ್ಯ ಮಾತನಾಡಿ, ಭಾರತದ ಯೋಗ ವಿದ್ಯೆಯನ್ನು ವಿದೇಶಿಗರು ಕಲಿತು ಇಂದು ಅವರುಗಳೇ ಯೋಗ ಶಿಕ್ಷಕರಾಗಿ ಸಹಸ್ರಾರು ಮಂದಿಗೆ ಯೋಗವನ್ನು ಕಲಿಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಯೋಗ ಭಾರತಿ ಸಂಸ್ಥೆಯ ಪೋಷಕರಾದ ಡಾ. ಎಂ.ಜಿ. ಪಾಟ್ಕರ್ ಮಾತನಾಡಿ, ನಿರಂತರ ಯೋಗ ಅಭ್ಯಾಸ ಮಾಡುವಂತೆ ಕರೆ ನೀಡಿದರು. ಮಾನವ, ಪ್ರಕೃತಿಯ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಅಂಶವಾಗಿದ್ದು ಪ್ರಕೃತಿ ಮತ್ತು ಪರಮಾತ್ಮನ ಜೋಡಣೆಗೆ ಯೋಗಾಭ್ಯಾಸ ಅತ್ಯಂತ ಸಹಕಾರಿ. ಭಾರತದ ಕೊಡುಗೆಯಾದ ಯೋಗ ವಿದ್ಯೆ, ಮನುಷ್ಯನ ಶಾರೀರಿಕ ಮತ್ತು ಆಂತರಿಕ ಬೆಳವಣಿಗೆಗೆ ಅತ್ಯಂತ ಸಹಕಾರಿ ಎಂದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ. ಶೈಲಜಾ ಮಾತನಾಡಿ, ತಾ. ೨೧ ರಂದು ಮಡಿಕೇರಿಯ ಕಾವೇರಿ ಹಾಲ್‌ನಲ್ಲಿ ಬೆಳಿಗ್ಗೆ ಆರು ಗಂಟೆಗೆ ವಿಶ್ವ ಯೋಗ ದಿನಾಚರಣೆಯ ಕಾರ್ಯಕ್ರಮಗಳಿದ್ದು ಆಸಕ್ತರು ಪಾಲ್ಗೊಳ್ಳುವಂತೆ ಕರೆ ನೀಡಿದರು. ಯೋಗದಿಂದ ಉತ್ತಮ ಆರೋಗ್ಯ ಪಡೆಯುವ ಕುರಿತು ಆಯುಷ್ ಇಲಾಖೆಯ ಡಾ. ಅರುಣ್ ಸಭಿಕರಿಗೆ ಮಾಹಿತಿ ನೀಡಿದರು.
ಯೋಗ ಭಾರತಿ ಸಂಸ್ಥೆಯ ತರಬೇತುದಾರ ಕೆ.ಕೆ. ಮಹೇಶ್ ಕುಮಾರ್ ಅವರು, ಸಂಸ್ಥೆ ೨೫ ವರ್ಷ ನಡೆದು ಬಂದ ಹಾದಿಯ ಕುರಿತು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಜಯಲಕ್ಷಿö್ಮ ಪಾಟ್ಕರ್ ಉಪಸ್ಥಿತರಿದ್ದರು.
ಯೋಗ ಭಾರತಿ ಸಂಸ್ಥೆಯ ಶಿಬಿರಾರ್ಥಿ ಜಿ.ಆರ್. ರವಿಶಂಕರ್ ಸ್ವಾಗತಿಸಿ, ಜ್ಯೋತಿ ವರದಿ ವಾಚನ ಮಾಡಿದರು. ಸವಿತಾ ವಂದಿಸಿದರು. ಸಂಸ್ಥೆಯ ಶಿಬಿರಾರ್ಥಿಗಳು ಕಾರ್ಯಕ್ರಮದಲ್ಲಿ ಯೋಗ ಪ್ರದರ್ಶನವನ್ನು ಮಾಡಿ ಗಮನ ಸೆಳೆದರು.