ಐಗೂರು, ಜೂ. ೧೭: ಐಗೂರಿನ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಫೆಬ್ರವರಿ ೯ ರಂದು ಐಗೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಭಿನಂದನಾ ಸಭೆಯನ್ನು ಏರ್ಪಡಿಸಲಾಗಿತ್ತು. ಅಧ್ಯಕ್ಷತೆಯನ್ನು ಕಸಾಪ ತಾಲೂಕು ಅಧ್ಯಕ್ಷ ವಿಜೇತ್ ವಹಿಸಿದ್ದರು. ಜಿಲ್ಲಾಧ್ಯಕ್ಷರಾದ ಎಂ.ಪಿ. ಕೇಶವ್ ಕಾಮತ್ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಸ್ತಾವಿಕವಾಗಿ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ೯ನೇ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಸಹಕಾರ ನೀಡಿದ ಗ್ರಾಮಸ್ಥರು, ಸರ್ವರೂ ಅಭಿನಂದನಾರ್ಹರು. ಸಮ್ಮೇಳನದಲ್ಲಿ ಉಳಿಕೆಯಾದ ಹಣವನ್ನು ಕಸಾಪ ಜಿಲ್ಲಾ ಸಮುದಾಯ ಭವನದ ನಿರ್ಮಾಣಕ್ಕೆ ಮೀಸಲಿಡುವಂತೆ ಸಲಹೆ ನೀಡಿದರು.
ಕಸಾಪ ಜಿಲ್ಲಾಧ್ಯಕ್ಷ ಕೇಶವ ಕಾಮತ್ ಮತ್ತು ಐಗೂರಿನ ೯ನೇ ಸಮ್ಮೇಳನದ ಅಧ್ಯಕ್ಷರಾಗಿದ್ದ ಶ್ರೀಮತಿ ಜಲಜಾ ಶೇಖರ್ ಸಮ್ಮೇಳನದ ಯಶಸ್ಸಿಗೆ ಶ್ರಮಿಸಿದ ೧೨ ಉಪಸಮಿತಿಗಳು ಮತ್ತು ಐಗೂರಿನ ಗ್ರಾಮಸ್ಥರ ಕಾರ್ಯವನ್ನು ಸ್ಮರಿಸಿದರು.
ಹಣಕಾಸು ಸಮಿತಿಯ ಸಂಚಾಲಕ ಮನೋಜ್ ಮುತ್ತಪ್ಪ ಸಮ್ಮೇಳನದ ಲೆಕ್ಕಪತ್ರವನ್ನು ಮಂಡಿಸಿದರು. ಐಗೂರಿನ ಐಸಿರಿ ಎಂಬ ಹೆಸರಿನ ಸ್ಮರಣ ಸಂಚಿಕೆಯನ್ನು ಎಲ್ಲರಿಗೂ ವಿತರಿಸಲಾಯಿತು. ೯ನೇ ಕಾಸಾಪ ಸಮ್ಮೇಳನದ ಯಶಸ್ಸಿಗೆ ಸಹಕರಿಸಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸಂಜಯ್ ಜೀವಿಜಯ, ಐಗೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್. ಬಿ. ಶಿವಕುಮಾರ್, ಕಸಾಪ ತಾಲೂಕು ಅಧ್ಯಕ್ಷ ಎಸ್. ಡಿ. ವಿಜೇತ್, ಐಗೂರು ಘಟಕದ ಅಧ್ಯಕ್ಷ ನಂಗಾರು ಕೀರ್ತಿ ಪ್ರಸಾದ್, ಮತ್ತು ೧೨ ಉಪಸಮಿತಿಗಳ ಅಧ್ಯಕ್ಷರು ಮತ್ತು ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ವೀರರಾಜು, ಕೆ .ಪಿ. ದಿನೇಶ, ಪಿಡಿಓ ಪೂರ್ಣ ಕುಮಾರ್, ಜಿ.ಕೆ ವಿನೋದ್ ಮತ್ತು ಗ್ರಾಮಸ್ಥರು ಹಾಜರಿದ್ದರು. ವಾಸಂತಿ ರವೀಂದ್ರ ಸ್ವಾಗತಿಸಿ, ಜ್ಯೋತಿ ಅರುಣ್ ವಂದಿಸಿದರು.