ಮಡಿಕೇರಿ, ಜೂ. ೧೭: ಜಿಲ್ಲೆಯಲ್ಲಿನ ಸರಕಾರಿ ಹಾಗೂ ಅನುದಾನಿತ ಕಾಲೇಜುಗಳ ತರಗತಿಗಳು ಪ್ರಾರಂಭವಾಗಿ ಬಹುತೇಕ ೧ ತಿಂಗಳಾದರೂ ಸರಕಾರದಿಂದ ವಿತರಣೆಯಾಗಬೇಕಿರುವ ಪಠ್ಯಪುಸ್ತಕಗಳು ವಿದ್ಯಾರ್ಥಿಗಳ ಕೈ ಸೇರದೆ ಪಾಠ-ಪ್ರವಚನಕ್ಕೆ ತೊಂದರೆಯುAಟಾಗುತ್ತಿದೆ.
ಕೊಡಗು ಜಿಲ್ಲೆಯು ಈ ಬಾರಿ ಪಿ.ಯು ಫಲಿತಾಂಶದಲ್ಲಿ ರಾಜ್ಯಕ್ಕೆ ೩ನೇ ಸ್ಥಾನ ಗಳಿಸಿ ಅತ್ಯುತ್ತಮ ಸಾಧನೆ ತೋರಿತ್ತು. ಈ ಫಲಿತಾಂಶದಲ್ಲಿ ಸರಕಾರಿ ಕಾಲೇಜುಗಳು ಹಾಗೂ ಅನುದಾನಿತ ಕಾಲೇಜುಗಳೂ ಉತ್ತಮ ಫಲಿತಾಂಶ ಗಳಿಸಿದ್ದವು. ಈ ಸಾಲಿನ ಪಿ.ಯು ತರಗತಿಗಳು ಮೇ.೨೫ರಂದು ಪ್ರಾರಂಭವಾಗಿದ್ದು, ಬಹುತೇಕ ಒಂದು ತಿಂಗಳಾದರೂ ವಿದ್ಯಾರ್ಥಿಗಳಿಗೆ ಸರಕಾರದಿಂದ ದೊರಕುವ ಪಠ್ಯಪುಸ್ತಕ ತಲುಪದಿರುವುದು ವಿಪರ್ಯಾಸ. ಪಠ್ಯಪುಸ್ತಕಗಳು ಇನ್ನು ಕೂಡ ವಿದ್ಯಾರ್ಥಿಗಳ ಕೈ ಸೇರದ ಕಾರಣ ಪಠ್ಯ ಪ್ರಗತಿಯಲ್ಲಿ ಹಿನ್ನೆಡೆಯಾಗಿದೆ. ಕೆಲ ಕಾಲೇಜುಗಳಲ್ಲಿ ಮೊದಲ ಆಂತರಿಕ ಪರೀಕ್ಷೆಗಳು ಕೂಡ ನಡೆಯುತ್ತಿವೆ ಎಂದು ‘ಶಕ್ತಿ‘ಗೆ ಮಾಹಿತಿ ನೀಡಿದ ಕೆಲ ಕಾಜೇಜುಗಳ ಪ್ರಾಂಶುಪಾಲರು ಸರಕಾರದಿಂದ ದೊರಕಬೇಕಿರುವ ಉಚಿತ ಪುಸ್ತಕಗಳು ಇನ್ನೂ ಕೈ ಸೇರದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ಸಾಲಿನಲ್ಲಿ ಕೊಡಗು ಜಿಲ್ಲೆಯಲ್ಲಿ ೧,೩೯೨ ವಿದ್ಯಾರ್ಥಿಗಳು ಸರಕಾರಿ ಕಾಲೇಜುಗಳಲ್ಲಿ ಹಾಗೂ ೧,೩೦೦ ವಿದ್ಯಾರ್ಥಿಗಳು ಅನುದಾನಿತ ಕಾಲೇಜುಗಳಲ್ಲಿ ಪ್ರವೇಶಾತಿ ಪಡೆದಿದ್ದರು.
ಈ ಬಾರಿ ಈಗಾಗಲೇ ತರಗತಿ ಪ್ರಾರಂಭವಾಗಿದೆ. ಪ್ರವೇಶಾತಿ ಇನ್ನೂ ನಡೆಯುತ್ತಿದ್ದು ಕಳೆದ ಸಾಲಿಗಿಂತ ಅಧಿಕ ವಿದ್ಯಾರ್ಥಿಗಳು ಸರಕಾರಿ ಹಾಗೂ ಅನುದಾನಿತ ಕಾಲೇಜುಗಳಿಗೆ ಸೇರುವ ನಿರೀಕ್ಷೆಯಿದೆ ಎಂದು ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಗಣಪತಿ ಅವರು ಮಾಹಿತಿ ನೀಡಿದ್ದಾರೆ. ಜಿಲ್ಲೆಗೆ ಕೇವಲ ಶೇ.೨೦ ರಷ್ಟು ಪಠ್ಯಪುಸ್ತಕಗಳು ಸರಬರಾಜಾಗಿವೆ. ಒಟ್ಟು ೩ ಮುದ್ರಣ ಸಂಸ್ಥಗಳಿAದ ಜಿಲ್ಲೆಯಾದ್ಯಂತ ಪುಸ್ತಕಗಳು ವಿತರಣೆಯಾಬೇಕು. ಆದರೆ ಒಬ್ಬರಿಂದ ಮಾತ್ರ ಸದ್ಯದ ಮಟ್ಟಿಗೆ ವಿತರಣೆಯಾಗಿದೆ. ಎಲ್ಲಾ ವಿದ್ಯಾರ್ಥಿಗಳಿಗೂ ಸರಬರಾಜಾಗಬೇಕಿದ್ದಲ್ಲಿ ಇನ್ನೂ ಒಂದು ತಿಂಗಳ ಕಾಲಾವಧಿ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.