ಕೂಡಿಗೆ, ಜೂ. ೧೭: ಜಿಲ್ಲೆಯ ಪ್ರಮುಖ ನದಿಗಳಾದ ಕಾವೇರಿ ಮತ್ತು ಹಾರಂಗಿ ನದಿಗಳಲ್ಲಿ ಜೂನ್ ಎರಡನೇ ವಾರ ಕಳೆದರೂ ಸಹ ಮಳೆಯು ಸಮಗ್ರವಾಗಿ ಬೀಳದ ಹಿನ್ನೆಲೆಯಲ್ಲಿ ನೀರು ಇಳಿಮುಖವಾಗಿದೆ. ಕಾವೇರಿ ಹಾರಂಗಿ ನದಿಗಳಲ್ಲಿ ನೀರಿನಮಟ್ಟ ಭಾರಿ ಕಡಿಮೆಯಾಗಿ ಸೊರಗಿದಂತೆ ಕಂಡುಬರುತ್ತಿವ ದೃಶ್ಯವನ್ನು ಕಾಣಬಹುದಾಗಿದೆ.
ಕಳೆದ ಸಾಲಿನಲ್ಲಿ ಮೇ ತಿಂಗಳಲ್ಲಿ ಹೆಚ್ಚು ಮಳೆ ಬಿದ್ದ ಪರಿಣಾಮವಾಗಿ ಕಾವೇರಿ ನದಿ, ಮತ್ತು ಹಾರಂಗಿ ಅಣೆಕಟ್ಟೆಯಲ್ಲಿ ಹೆಚ್ಚು ನೀರು ಸಂಗ್ರಹವಾಗಿ ನದಿಗೆ ನೀರನ್ನು ಹರಿಸಲಾಗಿತ್ತು. ಅದೇ ರೀತಿಯಲ್ಲಿ ಕಾವೇರಿ ನದಿಯು ಸಹ ತುಂಬಿ ಹರಿಯುವ ಹಂತವನ್ನು ತಲುಪಿತ್ತು.
ಆದರೆ ಈ ಬಾರಿ ಜೂನ್ ತಿಂಗಳ ಎರಡನೇ ವಾರ ಕಳೆದರೂ ಸಹ ಜಿಲ್ಲೆಯಲ್ಲಿ ಮಳೆಯ ಪ್ರಮಾಣವು ಕ್ಷೀಣವಾಗಿರುವ ಹಿನ್ನೆಲೆಯಲ್ಲಿ ಅಣೆಕಟ್ಟೆಯಲ್ಲಿ ಮತ್ತು ನದಿಗಳಲ್ಲಿ ನೀರಿನ ಹರಿಯುವಿಕೆ ಮಟ್ಟವು ತೀರಾ ಕಡಿಮೆಯಾಗಿದೆ.