ಕೋವರ್ಕೊಲ್ಲಿ ಇಂದ್ರೇಶ್
ಬೆAಗಳೂರು, ಜೂ. ೧೭: ರಾಜ್ಯದ ಆನೆ ಶಿಬಿರಗಳು, ಸೆರೆ ಹಿಡಿಯಲಾದ ಕಾಡಾನೆಗಳನ್ನು ಪಳಗಿಸುವ ಕೇಂದ್ರಗಳು ಮತ್ತು ಸಾರ್ವಜನಿಕ ಆನೆ ವೀಕ್ಷಣಾ ಸೌಲಭ್ಯಗಳಿಗೆ ಅನ್ವಯಿಸುವಂತೆ ರಾಜ್ಯ ಅರಣ್ಯ ಇಲಾಖೆ ಮೊಟ್ಟಮೊದಲ ಕರ್ನಾಟಕ ಆನೆ ಶಿಬಿರ ಸುರಕ್ಷತಾ ಶಿಷ್ಟಾಚಾದ ಮಾರ್ಗದರ್ಶಿ ಸೂತ್ರವನ್ನು ಬಿಡುಗಡೆ ಮಾಡಿದೆ.
ನೂತನವಾಗಿ ರೂಪಿಸಲಾಗಿರುವ ನಿಯಮಾವಳಿಗಳ ಪ್ರಕಾರ ಆನೆ ಶಿಬಿರಗಳಲ್ಲಿ ಆನೆಗಳನ್ನು ವೀಕ್ಷಿಸಲು ಪ್ರವಾಸಿಗರು ಆನೆಗಳಿಂದ ಕನಿಷ್ಟ ೩೦ ಅಡಿ ದೂರದಲ್ಲಿ ನಿಲ್ಲಬೇಕಾಗುತ್ತದೆ. ಪ್ರವಾಸಿಗರು ಇನ್ನು ಮುಂದೆ ಆನೆಗಳಿಗೆ ಸ್ನಾನ ಮಾಡಿಸಲು, ಮುಟ್ಟಲು ಅಥವಾ ಆಹಾರ ನೀಡಲು ಅವಕಾಶವಿಲ್ಲ. ಆನೆಗಳನ್ನು ನೋಡಲು ಗುರುತಿಸಲಾದ ಹಸಿರು ವಲಯ - ವೀಕ್ಷಣಾ ಗ್ಯಾಲರಿಯಲ್ಲಿ ನಿಲ್ಲಬೇಕಾಗುತ್ತದೆ. ಆನೆಗಳು ಮತ್ತು ಸಂದರ್ಶಕರ ಎಲ್ಲಾ ಚಟುವಟಿಕೆಗಳನ್ನು ಸಿಸಿಟಿವಿಗಳ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತದೆ ಮತ್ತು ದಾಖಲಿಸಲಾಗುತ್ತದೆ. ಒಂದು ಸಾಕಾನೆ ಶಿಬಿರದಲ್ಲಿ ೧೦ಕ್ಕಿಂತ ಹೆಚ್ಚು ಆನೆಗಳನ್ನು ಸಾರ್ವಜನಿಕ ವೀಕ್ಷಣೆಗೆ ಬಿಡಲಾಗುವುದಿಲ್ಲ.
ಕಳೆದ ಮೇ ೧೯ ರಂದು ದುಬಾರೆ ಆನೆ ಶಿಬಿರದಲ್ಲಿ ತಮಿಳುನಾಡಿನ ಒಬ್ಬ ಪ್ರವಾಸಿ ಮಹಿಳೆ ಆನೆಗಳ ನೂಕಾಟದಲ್ಲಿ ಮೃತಪಟ್ಟ ನಂತರ ಈ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಆನೆ ಶಿಬಿರಗಳಿಗೆ ತಾತ್ಕಾಲಿಕ ನಿಷೇಧವನ್ನು ಹೇರಿದೆ. ಸುರಕ್ಷತಾ ನಿಯಮಾವಳಿಗಳನ್ನು ರೂಪಿಸಿದ ನಂತರವೇ ಪ್ರವಾಸಿಗರಿಗೆ ಆನೆಗಳ ವೀಕ್ಷಣೆಗೆ ಅವಕಾಶ ಮಾಡಿಕೊಡುವಂತೆ ಪರಿಸರವಾದಿಗಳೂ ಸರ್ಕಾರವನ್ನು ಒತ್ತಾಯಿಸಿದ್ದರು. ಇದರ ನಂತರ ಇದೀಗ ಅರಣ್ಯ ಇಲಾಖೆ ಆನೆ ಶಿಬಿರಗಳಿಗೆ ಪ್ರವಾಸಿಗರ ಪ್ರವೇಶ ಮತ್ತು ವೀಕ್ಷಣೆ ಕುರಿತಂತೆ ಪ್ರಮಾಣಿತ ಕಾರ್ಯ ವಿಧಾನವನ್ನು ಬಿಡುಗಡೆ ಮಾಡಿದೆ. ಈ ಕುರಿತು ಪ್ರತಿಕ್ರಿಯಿಸಿದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, (ವನ್ಯಜೀವಿ) ಕುಮಾರ್ ಪುಷ್ಕರ್ ಅವರು “ಈ ನೂತನ ನಿಯಮಾವಳಿಗಳ ಸುತ್ತೋಲೆಗೆ ಜೂನ್ ೧೧ ರಂದು ಸಹಿ ಹಾಕಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಕಾಡಾನೆ ಶಿಬಿರಗಳಿಗೆ ಅವುಗಳನ್ನು ಪಾಲಿಸಲು ೧೫ ದಿನಗಳ ಕಾಲಾವಕಾಶ ನೀಡಲಾಗಿದೆ. ನಂತರ ಹಿರಿಯ ಅಧಿಕಾರಿಗಳು ಶಿಬಿರಗಳನ್ನು ಪರಿಶೀಲಿಸುತ್ತಾರೆ ಮತ್ತು ಪ್ರಮಾಣೀಕರಿಸಲಾಗುತ್ತದೆ. ಪ್ರವಾಸೀ ವೀಕ್ಷಣೆಗೆ ನಂತರ ಅನುಮತಿ ನೀಡಲಾಗುತ್ತದೆ. ರಾಜ್ಯದ ಹಿರಿಯ ಅಧಿಕಾರಿಗಳಿಂದ ಅನುಮತಿ ಪಡೆಯುವವರೆಗೆ ವೀಕ್ಷಣೆಗೆ ಅವಕಾಶ ಇರುವುದಿಲ್ಲ ಎಂದು ಹೇಳಿದರು. ಕಾಡಾನೆ ಶಿಬಿರಲ್ಲಿ ಪ್ರವಾಸಿಗರು ವೀಕ್ಷಿಸಲು ಇರುವ ಸ್ಥಳಾವಕಾಶದ ಸಾಮರ್ಥ್ಯದ ಆಧಾರದ ಮೇಲೆ, ಆನೆಗಳ ಸಂಖ್ಯೆ, ವೀಕ್ಷಕರ ಸಂಖ್ಯೆ ಮತ್ತು ಆನೆಗಳನ್ನು ವೀಕ್ಷಿಸಲು ಅನುಮತಿಸಲಾದ ಸಂದರ್ಶಕರ ಸಮಯವನ್ನು ಸಹ ನಿರ್ಧರಿಸಲಾಗುತ್ತದೆ ಎಂದು ಅವರು ಹೇಳಿದರು.
ಹಸಿರು ವಲಯದ ಒಂದು ಹಂತದಲ್ಲಿ ೫೦-೭೫ಕ್ಕಿಂತ ಹೆಚ್ಚು ಸಂದರ್ಶಕರನ್ನು ಅನುಮತಿಸಲಾಗುವುದಿಲ್ಲ ಎಂದು ಪುಷ್ಕರ್ ಹೇಳಿದರು. ೧೦ ನಿಮಿಷಗಳ ಬ್ರೀಫಿಂಗ್ ಸಮಯ ಮತ್ತು ೧೦ ನಿಮಿಷಗಳ ಬಫರ್ ಸಮಯವನ್ನು ಹೊರತುಪಡಿಸಿ, ೨೦-೩೦ ನಿಮಿಷಗಳ ಒಳಗೆ ವೀಕ್ಷಣೆ ಸಮಯವನ್ನು ನಿರ್ಬಂಧಿಸಬೇಕು. ರಾಜ್ಯದಲ್ಲಿರುವ ಒಟ್ಟು ೧೦ ಆನೆ ಶಿಬಿರಗಳಲ್ಲಿ, ದುಬಾರೆ, ಹಾರಂಗಿ, ಮತ್ತಿಗೋಡು, ಸಕ್ರೆಬೈಲು ಮತ್ತು ದಾಂಡೇಲಿಯ ಪನ್ಸೋಲಿಯಲ್ಲಿ ಪ್ರವಾಸಿಗರಿಗೆ ಅವಕಾಶವಿದೆ. ಅರಣ್ಯ ಇಲಾಖೆಯು ರಾಜ್ಯದ ೧೦ ಶಿಬಿರಗಳಲ್ಲಿ ೧೧೪ ಆನೆಗಳನ್ನು ಇರಿಸಿದೆ, ಇಷ್ಟು ಸಂಖ್ಯೆಯ ಆನೆಗಳ ವೀಕ್ಷಣೆ ದೇಶದ ಇತರ ಯಾವುದೇ ರಾಜ್ಯದಲ್ಲೂ ಇಲ್ಲ ಎಂದು ಅವರು ಹೇಳಿದರು.
ಆಕ್ರಮಣಕಾರಿ, ಗಾಯಗೊಂಡ, ಅನಾರೋಗ್ಯಪೀಡಿತ, ದಣಿದಿರುವ, ಒತ್ತಡಕ್ಕೊಳಗಾದ, ಹೊಸದಾಗಿ ಸೆರೆಹಿಡಿಯಲಾದ, ಇತ್ತೀಚೆಗೆ ಇತರ ಸಹ ಆನೆಗಳ ಜತೆ ಕಾದಾಡಿದ ಹಿನ್ನೆಲೆಯ ಅಥವಾ ಮರಿ ಹಾಕಿದ ತಾಯಿ (ಸುಮಾರು ಆರು ತಿಂಗಳವರೆಗೆ) ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸಬಾರದು ಎಂದು ತಿಳಿಸಲಾಗಿದೆ. ಸಾರ್ವಜನಿಕ ವೀಕ್ಷಣೆ ಅಥವಾ ನಿರ್ವಹಣೆಯ ಸಮಯದಲ್ಲಿ ಆನೆಗಳನ್ನು ಪರಸ್ಪರ ತಳ್ಳಲು, ನೂಕಾಡಲು ಅವಕಾಶ ನೀಡದೆ ಒಂದು ಆನೆಯಿಂದ ಮತ್ತೊಂದು ಆನೆಗೆ ಸಾಕಷ್ಟು ಸ್ಥಳಾವಕಾಶ ಕಲ್ಪಿಸಬೇಕೆಂದು ನಿಯಮಾವಳಿ ತಿಳಿಸಿದೆ. ಎಲ್ಲಾ ಆನೆ ಶಿಬಿರಗಳು ಮೂರು ವಲಯಗಳನ್ನು ಹೊಂದಿರಬೇಕು.
ಕೆAಪು ವಲಯ : ಆನೆ ಕಾರ್ಯಾಚರಣೆ ಪ್ರದೇಶವಾಗಿದ್ದು ಇದರಲ್ಲಿ ಆನೆಗೆ ಸ್ನಾನ, ಆಹಾರ, ಉಪಚಾರ, ಪಶು ವೈದ್ಯಕೀಯ ಆರೈಕೆ ಇರುತ್ತದೆ. ಇಲ್ಲಿಗೆ ಮಾವುತರು, ಪಶುವೈದ್ಯರು ಮತ್ತು ಸಿಬ್ಬಂದಿ ಮಾತ್ರ ಪ್ರವೇಶಿಸಬಹುದು. ಈ ಪ್ರದೇಶವನ್ನು ಬ್ಯಾರಿಕೇಡ್ ಮಾಡಬೇಕು.
ಹಳದಿ ವಲಯ : ಇದು ಸಿಬ್ಬಂದಿ ಚಲನೆ ಮತ್ತು ತುರ್ತು ಕೆಲಸಗಳಿಗಾಗಿ ನಿಯಂತ್ರಿತ ಮಾರ್ಗ ಆಗಿದೆ.
ಹಸಿರು ವಲಯ : ಇದು ಆನೆಗಳನ್ನು ವೀಕ್ಷಿಸಲು ಮಾರ್ಗದರ್ಶಿಗಳೊಂದಿಗೆ ಇರುವ ಸಂದರ್ಶಕರ ವೀಕ್ಷಣಾ ಪ್ರದೇಶ ಆಗಿದೆ. ಸಂದರ್ಶಕರು ಆನೆಗಳನ್ನು ಮುಟ್ಟಲು, ಆಹಾರ ನೀಡಲು ಅಥವಾ ಸ್ನಾನ ಮಾಡಿಸಲು ಸಾಧ್ಯವಿಲ್ಲ. ಪ್ರವಾಸಿಗರು ಬ್ಯಾರಿಕೇಡ್ಗಳನ್ನು ದಾಟುವುದನ್ನು ನಿಷೇಧಿಸಲಾಗಿದೆ.
ಆನೆ ಶಿಬಿರಗಳನ್ನು ಉಪವಲಯ ಅರಣ್ಯಾಧಿಕಾರಿಗಳು ಮೇಲ್ವಿಚಾರಣೆ ಮಾಡುತ್ತಾರೆ ಮತ್ತು ಮೇಲಿನ ನಿಯಮಾವಳಿ ಪಾಲಿಸದಿದ್ದರೆ ಶಿಬಿರವನ್ನು ಮುಚ್ಚಲು ಕಾರಣವಾಗಬಹುದು. ಭೇಟಿ ನೀಡುವ ಸಂದರ್ಶಕರು ಮತ್ತು ಸಮಯ ಸ್ಲಾಟ್ಗಳನ್ನು ಪಾದಚಾರಿ ಮಾರ್ಗ ಮತ್ತು ಶಿಬಿರದ ಸಾಮರ್ಥ್ಯದ ಆಧಾರದ ಮೇಲೆ ನಿಗದಿಪಡಿಸಲಾಗುತ್ತದೆ ಮತ್ತು ಪ್ರದರ್ಶಿಸಲಾಗುತ್ತದೆ. ಇದಕ್ಕ ಆನ್ಲೈನ್ ಬುಕ್ಕಿಂಗ್ ಮತ್ತು ಸ್ಪಾಟ್-ಎಂಟ್ರಿ ಟಿಕೆಟಿಂಗ್ ವ್ಯವಸ್ಥೆಯನ್ನು ಪರಿಚಯಿಸಲಾಗುವುದು. ಮಕ್ಕಳು, ಹಿರಿಯ ನಾಗರಿಕರು, ವಿಶೇಷಚೇತನರು ಮತ್ತು ಗರ್ಭಿಣಿಯರು ಕುಟುಂಬಸ್ಥರ ಮೇಲ್ವಿಚಾರಣೆಯಲ್ಲಿ ಭೇಟಿ ನೀಡಬೇಕು. ಆನೆಗಳ ನಡವಳಿಕೆಯ ಮತ್ತು ದೈನಂದಿನ ವರ್ತನೆಯ ಕಾರ್ಯವಿಧಾನದ ದಾಖಲೆಗಳನ್ನು ನಿರ್ವಹಿಸಬೇಕು ಎಂದು ಮಾರ್ಗದರ್ಶಿ ಸೂತ್ರ ತಿಳಿಸಿದೆ. ಈ ವ್ಯವಸ್ಥೆಯನ್ನು ಕಲ್ಪಿಸಿದ ನಂತರ ರಾಜ್ಯ ಆನೆ ಶಿಬಿರಗಳು ಒಂದೊAದಾಗಿ ಸಾರ್ವಜನಿಕ ವೀಕ್ಷಣೆಗೆ ತೆರೆದುಕೊಳ್ಳಲಿವೆ.