ಮಡಿಕೇರಿ, ಜೂ. ೧೬: ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಮಡಿಕೇರಿ ತಾಲೂಕು ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯು ನಗರದ ಕೋಟೆ ಮಹಿಳಾ ಸಮಾಜ ಆವರಣದಲ್ಲಿ ನಡೆಯಿತು. ಸಭೆಯಲ್ಲಿ ಮಡಿಕೇರಿ ತಾಲೂಕು ಸಮಿತಿಯ ಅಧ್ಯಕ್ಷರಾಗಿ ರಘು ಹೆಬ್ಬೆಟ್ಟಗೇರಿ, ಉಪಾಧ್ಯಕ್ಷರಾಗಿ ದಿನೇಶ್ ಟಿ. ಪ್ರಧಾನ ಕಾರ್ಯದರ್ಶಿಯಾಗಿ ಅಶೋಕ್ ಮಡಿಕೇರಿ, ಸಹ ಕಾರ್ಯದರ್ಶಿಯಾಗಿ ದರ್ಶಿತ್, ಖಜಾಂಚಿಯಾಗಿ ಪ್ರಕಾಶ್ ಮೊಗೇರ ಹಾಗೂ ಪ್ರಚಾರಕರಾಗಿ ವಿವೇಕ್ ಮೊಗೇರ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಮೇಶ್, ಶ್ರೀನಿವಾಸ್, ಸುರೇಶ್ ಎಂ.ಕೆ.ರಾಕೇಶ್, ಶಶಿ ಮರ್ಗೋಡು, ವಿಶ್ವನಾಥ್ ಹಾಗೂ ಹರೀಶ್ ಬೆಟ್ಟಗೇರಿ ಅವರನ್ನು ಆಯ್ಕೆ ಮಾಡಲಾಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಅಧ್ಯಕ್ಷ ಜನಾರ್ಧನ್, ಸಮಾಜದ ಅಭಿವೃದ್ಧಿಗೆ ಹೊಸ ತಂಡವು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ ಸಮಾಜದ ವಿಶ್ವಾಸವನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದರು. ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಕ್ರೀಡಾ ಅಧ್ಯಕ್ಷ ಎಂ.ಜಿ. ಚಂದ್ರ ಮಾತನಾಡಿ, ಸಮಾಜದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಘಟನೆಯ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದರು. ಹಿರಿಯ ಮುಖಂಡ ಪಿ.ಎಂ. ರವಿ ಮಾತನಾಡಿ, ಸಮಾಜದ ಏಕತೆ ಮತ್ತು ಸಹಕಾರವೇ ಸಂಘಟನೆಯ ಶಕ್ತಿಯಾಗಿದ್ದು, ಎಲ್ಲರೂ ಒಂದಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು. ಸೋಮವಾರಪೇಟೆ ತಾಲೂಕು ಅಧ್ಯಕ್ಷ ದಾಮೋದರ ಮಾತನಾಡಿ, ಸಮಾಜದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನೂತನ ಪದಾಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಸಮಿತಿಯ ಹಿರಿಯ ಸದಸ್ಯ ಸೋಮಣ್ಣ ಹಾಗೂ ಸಮಾಜದ ಕಾರ್ಯಸಮಿತಿ ಸದಸ್ಯರು, ಸಮಾಜದ ಹಿರಿಯರು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ರಮೇಶ್ ವಂದಿಸಿದರು.