ನವದೆಹಲಿ, ಜೂ. ೧೬: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಒಡೆಯರ್ ಅವರು ಕೇಂದ್ರ ಪರಿಸರ, ಅರಣ್ಯ ಸಚಿವರಾದ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಿ, ಕೊಡಗು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಆನೆ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ಸಂಬAಧ ಮನವಿ ಸಲ್ಲಿಸಿದರು. ಕೊಡಗು ಜಿಲ್ಲೆಯ ವಿವಿಧ ಭಾಗಗಳಲ್ಲಿ ಆನೆಗಳು ಕೃಷಿ ಭೂಮಿಗಳು ಮತ್ತು ಜನವಸತಿ ಪ್ರದೇಶಗಳಿಗೆ ನುಗ್ಗುತ್ತಿರುವ ಘಟನೆಗಳು ನಿರಂತರವಾಗಿ ಹೆಚ್ಚುತ್ತಿದ್ದು, ಇದು ಜಿಲ್ಲೆಯ ಜನರ ಪ್ರಮುಖ ಸಮಸ್ಯೆಯಾಗಿ ಪರಿಣಮಿಸಿದೆ. ಆನೆಗಳ ದಾಳಿಯಿಂದ ಮಾನವ ಜೀವಹಾನಿ, ಗಾಯಗಳು, ಬೆಳೆ ನಷ್ಟ, ಆಸ್ತಿ ಹಾನಿಗಳೊಂದಿಗೆ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗುತ್ತಿದೆ. ವಿಶೇಷವಾಗಿ ಅರಣ್ಯದ ಅಂಚಿನ ಗ್ರಾಮಗಳಲ್ಲಿ ವಾಸಿಸುವ ರೈತರು, ಬೆಳೆಗಾರರು ಮತ್ತು ಕಾರ್ಮಿಕರು ಈ ಸಮಸ್ಯೆಯಿಂದ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಸಚಿವರ ಗಮನ ಸೆಳೆದ ಸಂಸದರು, ಆನೆ-ಮಾನವ ಸಂಘರ್ಷವನ್ನು ಕಡಿಮೆಗೊಳಿಸಲು ಸಮಗ್ರ ಹಾಗೂ ದೀರ್ಘಕಾಲೀನ ಕಾರ್ಯತಂತ್ರವನ್ನು ರೂಪಿಸಲು ಕೇಂದ್ರ ಸರ್ಕಾರದ ನೆರವು ಅಗತ್ಯವಿದೆ ಎಂದು ಮನವಿ ಮಾಡಿದರು.

ಸೌರ ಬೇಲಿ ವ್ಯವಸ್ಥೆ, ಆನೆಗಳ ಚಲನವಲನದ ವೈಜ್ಞಾನಿಕ ಮೇಲ್ವಿಚಾರಣೆ, ಮುನ್ನೆಚ್ಚರಿಕೆ ವ್ಯವಸ್ಥೆ, ಅರಣ್ಯ ವಾಸಸ್ಥಳಗಳ ಸುಧಾರಣೆ, ತ್ವರಿತ ಪ್ರತಿಕ್ರಿಯಾ ತಂಡಗಳ ರಚನೆ ಹಾಗೂ ಪೀಡಿತ ಕುಟುಂಬಗಳಿಗೆ ಮತ್ತು ರೈತರಿಗೆ ಸೂಕ್ತ ಪರಿಹಾರ ನೀಡುವ ವ್ಯವಸ್ಥೆಯನ್ನು ಬಲಪಡಿಸುವಂತೆ ಕೋರಿದರು ಅಲ್ಲದೆ ವನ್ಯಜೀವಿ ಸಂರಕ್ಷಣೆ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಅತ್ಯಂತ ಮುಖ್ಯವಾದರೂ, ಅರಣ್ಯದ ಅಂಚಿನ ಪ್ರದೇಶಗಳಲ್ಲಿ ವಾಸಿಸುವ ಜನರ ಜೀವ ಮತ್ತು ಜೀವನೋಪಾಯದ ರಕ್ಷಣೆಯೂ ಅಷ್ಟೇ ಮಹತ್ವದ್ದಾಗಿದೆ ಎಂದು ಹೇಳಿದರು.

ಕೇಂದ್ರ ಸಚಿವ ಭೂಪೇಂದ್ರ ಯಾದವ್ ಅವರು ಸಂಸದರ ಮನವಿಯನ್ನು ಸಕಾರಾತ್ಮಕವಾಗಿ ಪರಿಗಣಿಸಿ ಹಾಗೂ ಸಂಬAಧಿತ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು