ಹೆಬ್ಬಾಲೆ, ಜೂ. ೧೬: ಇಲ್ಲಿನ ಹೆಬ್ಬಾಲೆ ಪ್ರೌಢಶಾಲೆಯಲ್ಲಿ ೮ನೇ ತರಗತಿ ವಿದ್ಯಾರ್ಥಿಗಳಿಗೆ ಹಳೆಯ ವಿದ್ಯಾರ್ಥಿಗಳ ಬಳಗದ ವತಿಯಿಂದ ಉಚಿತ ನೋಟ್ ಬುಕ್ ಹಾಗೂ ಶಾಲಾ ಬ್ಯಾಗ್‌ಗಳನ್ನು ವಿತರಿಸಲಾಯಿತು.

ನಿವೃತ್ತ ಸೈನಿಕ ಹೆಚ್.ಎನ್.ಪುಟ್ಟೇಗೌಡ ಅವರು ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಬ್ಯಾಗ್ ವಿತರಿಸಿ ಮಾತನಾಡಿ,ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆತರೆ ಅವರು ಉತ್ತಮ ಪ್ರಜೆಗಳಾಗಿ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು ಎಂದು ಹೇಳಿದರು.

ಮಾಜಿ ಸೈನಿಕ ಸುಂದರ್ ಮಾತನಾಡಿ,ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಳೆಯ ವಿದ್ಯಾರ್ಥಿಗಳು ಪಠ್ಯ ಸಾಮಗ್ರಿಗಳನ್ನು ಉಚಿತವಾಗಿ ಹಂಚುವ ಯೋಜನೆ ಸಮಾಜಕ್ಕೆ ಮಾದರಿಯಾಗಿದೆ ಎಂದರು.

ವಿದ್ಯಾವರ್ಧಕ ಸಂಸ್ಥೆಯ ಆಡಳಿತ ಮಂಡಳಿ ಕಾರ್ಯದರ್ಶಿ ರಾಜಶೇಖರ್ ಮಾತನಾಡಿ, ಶಾಲಾ ಅಭಿವೃದ್ಧಿಗೆ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹಳೆಯ ವಿದ್ಯಾರ್ಥಿಗಳ ಸಹಕಾರ ಮುಖ್ಯ ಎಂದರು. ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಾದ ಮಾಜಿ ಸೈನಿಕ ಹೆಚ್.ಎನ್ ಪುಟ್ಟೇಗೌಡ,ಕಡುವಿನ ಹೊಸಹಳ್ಳಿ ಸಿಂಗಾಪುರದಲ್ಲಿರುವ ಕುಮಾರ್, ರೈಲ್ವೆ ಇಲಾಖೆ ಇಂಜಿನಿಯರ್ ಕೆ. ದೀಪಕ್ ಸಮಾಜ ಸೇವಕಿ ಮಂಗಳ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಆರ್ಥಿಕ ನೆರವು ನೀಡಿದರು.

ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕ ಬಸವರಾಜ ಶೆಟ್ಟಿ, ಶಿಕ್ಷಕರಾದ ವೆಂಕಟ್ ನಾಯಕ್, ಡಿ.ಕವಿತಾ, ಸಿ.ಡಿ.ಲೋಕೇಶ್, ಬೋಜೇಗೌಡ, ಮುತ್ತಣ್ಣ, ರಾಜಕುಮಾರ್, ಅನಂತ್, ಯೋಗೇಶ್, ರೇಣುಕಸ್ವಾಮಿ, ಕೆ.ಸೂರಜ್ ಇದ್ದರು.