ಪೊನ್ನಂಪೇಟೆ : ಸಿದ್ದಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಗೋಣಿಕೊಪ್ಪಲಿನ ಕಾವೇರಿ ಕಾಲೇಜಿನ ಬಿಸಿಎ ಹಾಗೂ ಬಿ.ಎಸ್ಸಿ. ಐಟಿ ವಿಭಾಗದ ವತಿಯಿಂದ ದಾನಿಗಳ ನೆರವಿನೊಂದಿಗೆ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ೧ ರಿಂದ ೭ನೇ ತರಗತಿ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ವಿತರಿಸಿ ಮಾತನಾಡಿದ ಕಾವೇರಿ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಬಿ. ಕಾವೇರಿಯಪ್ಪ, ವಿದ್ಯಾರ್ಥಿಗಳು ಶಿಕ್ಷಕರು ಮಾಡುವ ಪಾಠದ ಕಡೆಗೆ ಮುತುವರ್ಜಿ ವಹಿಸಬೇಕು. ಗುರುಗಳು ಹೇಳಿಕೊಟ್ಟ ಪಾಠವನ್ನು ಮನೆಗೆ ಹೋಗಿ ಮತ್ತೊಮ್ಮೆ ಓದಿ, ಬರೆಯುವ ಮೂಲಕ ಜ್ಞಾನವನ್ನು ಹೆಚ್ಚಿಸಿಕೊಂಡು, ನೀವು ಕೂಡ ನಿಮ್ಮ ಶಿಕ್ಷಕರಂತೆಯೇ ಮುಂದಿನ ದಿನಗಳಲ್ಲಿ ಉತ್ತಮ ಸ್ಥಾನ ಪಡೆದುಕೊಳ್ಳುವಂತಾಗಬೇಕು. ಸುಳ್ಳು ಹೇಳದೆ, ಪರಸ್ಪರ ಸ್ನೇಹದಿಂದ ವಿದ್ಯಾಭ್ಯಾಸ ಮಾಡಬೇಕು. ಪ್ರತಿಯೊಬ್ಬರೂ ಶಾಲೆಗೆ ತಪ್ಪಿಸಿಕೊಳ್ಳದೆ ಹಾಜರಾಗಬೇಕು ಎಂದು ಕಿವಿಮಾತು ಹೇಳಿದರು.

ಅಲ್ಲದೆ, ಶಾಲಾಭಿವೃದ್ಧಿಗೆ ಬಳಸಿಕೊಳ್ಳಲು ಡಾ. ಕಾವೇರಿಯಪ್ಪ ಅವರು ವೈಯಕ್ತಿಕವಾಗಿ ರೂ. ೧೦,೦೦೦ ನೀಡಿದರು.

ಬಿಸಿಎ ವಿಭಾಗದ ಮುಖ್ಯಸ್ಥ ಯು.ಟಿ. ಪೆಮ್ಮಯ್ಯ ಮಾತನಾಡಿ, ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ನೀಡಲು ದಾನಿ ಅವರೆಮಾದಂಡ ಶರಣ್ ಪೂಣಚ್ಚ, ಉಪ ಪ್ರಾಂಶುಪಾಲೆ ಪ್ರೊ. ಎಂ.ಎಸ್. ಭಾರತಿ, ಕುಶಾಲನಗರ ಅಕ್ಷರ ಟ್ರೇಡರ್ಸ್ನವರು ನಮ್ಮೊಂದಿಗೆ ಕೈಜೋಡಿಸಿದ್ದಾರೆ.

ಶಾಲೆಯ ಮುಖ್ಯ ಶಿಕ್ಷಕಿ ಪ್ರೇಮ ಅವರ ಕೋರಿಕೆಯ ಮೇರೆಗೆ ಮುಂದಿನ ದಿನಗಳಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಸಾಕ್ಷರತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಟಿ.ಕೆ. ಪ್ರೇಮ, ಸಹ ಶಿಕ್ಷಕರಾದ ಎನ್.ಬಿ. ಮಾಚಯ್ಯ, ಪಲ್ಲವಿ ಎಸ್.ಕೆ., ವನಿತ ಕೆ.ಜಿ., ಕಾವೇರಿ ಕಾಲೇಜು ಉಪನ್ಯಾಸಕರಾದ ಸೂರ್ಯತೇಜ್, ವಚನ್, ಪೂಜಾ ಹಾಜರಿದ್ದರು.