ಗೋಣಿಕೊಪ್ಪಲು, ಜೂ. ೧೪: ಪ್ರತಿ ವರ್ಷವೂ ಜೂನ್ ತಿಂಗಳಿನಲ್ಲಿ ಗ್ರಾಮ ದೇವತೆಗೆ ಪೂಜೆ ಸಲ್ಲಿಸಿ ಆರ್ಶೀವಾದ ಬೇಡುವ ಗ್ರಾಮದ ಭಕ್ತರು ಈ ಬಾರಿಯೂ ವರ್ಷಂಪ್ರತಿಯAತೆ ಪೊನ್ನಂಪೇಟೆ ಕೃಷ್ಣ ನಗರದ ಗ್ರಾಮ ದೇವತೆಯಾಗಿರುವ ಶ್ರೀ ಕನ್ನಂಬಾಡಿ ಅಮ್ಮನವರ ವಾರ್ಷಿಕ ಉತ್ಸವವನ್ನು ಆಚರಿಸಿದರು.
ಮುಂಜಾನೆ ೯ ಗಂಟೆಗೆ ರಾಮ ಮಂದಿರ ಬಳಿ ಇರುವ ಕುಡಿಯುವ ನೀರಿನ ಬಾವಿಯಲ್ಲಿ ಪವಿತ್ರ ಗಂಗಾ ಜಲದೊಂದಿಗೆ ಪೊನ್ನಂಪೇಟೆ ಬಸವೇಶ್ವರ ದೇವಾಲಯದ ಅರ್ಚಕರು ಪೂಜೆ ಸಲ್ಲಿಸುವ ಮೂಲಕ ಊರಿನ ಹಬ್ಬಕ್ಕೆ ಚಾಲನೆ ನೀಡಿದರು. ನಂತರ ಕೊಡವ ಸಾಂಪ್ರದಾಯಿಕ ವಾಲಗದೊಂದಿಗೆ ಕಲಶ ಹೊತ್ತ ಮಕ್ಕಳು, ಮಹಿಳೆಯರು, ಊರಿನ ಹಿರಿಯರು ಹಾಗೂ ಸಾರ್ವಜನಿಕರು ಕನ್ನಂಬಾಡಿ ಅಮ್ಮನವರ ದೇವಾಲಯದ ಆವರಣಕ್ಕೆ ಆಗಮಿಸಿದರು. ರಸ್ತೆಯ ಉದ್ದಗಲಕ್ಕೂ ದೇವಿಗೆ ಈಡುಗಾಯಿ ಹಾಕಿದ ಭಕ್ತರು ದೇವಿಯ ಆರ್ಶೀವಾದ ಪಡೆದರು.
ಮೆರವಣಿಗೆಯು ದೇವಾಲಯಕ್ಕೆ ತೆರಳಿದ ತರುವಾಯ ಅಮ್ಮನವರಿಗೆ ವಿವಿಧ ಅಭಿಷೇಕ ಪೂಜೆಗಳು ಆರಂಭಗೊAಡವು. ನಂತರ ಅಮ್ಮನವರಿಗೆ ಮಹಾಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿತು. ಸುತ್ತಮುತ್ತಲಿನ ಗ್ರಾಮಸ್ಥರು ದೇವಾಲಯಕ್ಕೆ ಆಗಮಿಸಿ ದೇವಿಯ ಆರ್ಶೀವಾದ ಪಡೆದರು.
ದೇವಾಲಯ ಸಮಿತಿ ಅಧ್ಯಕ್ಷ ಗಿರೀಶ್, ಗೌರವ ಅಧ್ಯಕ್ಷ ಗೋಪಾಲ್, ಉಪಾಧ್ಯಕ್ಷ ಕುಮಾರ್, ಕಾರ್ಯದರ್ಶಿ ರೋಶನ್, ಖಜಾಂಚಿ ಪ್ರವೀಣ್, ಸಲಹೆಗಾರರಾದ ವೆಂಕಟೇಶ್, ಲಾಲ್ಕುಮಾರ್, ದಿನೇಶ್ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.