ಪೊನ್ನಂಪೇಟೆ, ಜೂ. ೧೪: ಪ್ಲಾಸ್ಟಿಕ್ ಎಂಬ ಆಧುನಿಕ ಅಸುರನ ದುಷ್ಪರಿಣಾಮಗಳನ್ನು ನಾಟಕದ ಮೂಲಕ ಮನಮುಟ್ಟುವಂತೆ ತಿಳಿಸಿದ ವಿಶಿಷ್ಟ ಕಾರ್ಯಕ್ರಮ ಹುದಿಕೇರಿಯಲ್ಲಿ ನಡೆಯಿತು. ಹುದಿಕೇರಿ ಗ್ರಾಮ ಪಂಚಾಯಿತಿ ಹಾಗೂ ಬಿಕ್ಲಿನ್ ಕೂರ್ಗ್ ಇನಿಶಿಯೇಟಿವ್ ಸಹಭಾಗಿತ್ವದಲ್ಲಿ ಬೆಂಗಳೂರಿನ ಖ್ಯಾತ ರಂಗಕರ್ಮಿ ವಾಸುಕಿ ಮತ್ತು ತಂಡದಿAದ ‘ಪ್ಲಾಸ್ಟಿಕ್ ಅಸುರ' ಎಂಬ ವಿನೂತನ ರೂಪಕ ನಾಟಕವನ್ನು ಪ್ರದರ್ಶಿಸಲಾಯಿತು. ಸಾಂಪ್ರದಾಯಿಕ ಉಪನ್ಯಾಸ ಶೈಲಿ ಬಿಟ್ಟು, ನಾಟಕ, ಹಾಡು, ಪಂಚಿAಗ್ ಹೇಳಿಕೆಗಳ ಮೂಲಕ ಪ್ಲಾಸ್ಟಿಕ್‌ನಿಂದ ಆಗುತ್ತಿರುವ ಹಾನಿಯನ್ನು ಕಲಾವಿದರು ಕಟ್ಟಿಕೊಟ್ಟರು. ಪ್ಲಾಸ್ಟಿಕ್ ಹೇಗೆ ಭೂಮಿ, ನೀರು, ಗಾಳಿಯನ್ನು ವಿಷಯುಕ್ತಗೊಳಿಸುತ್ತಿದೆ, ಪ್ರಾಣಿ-ಪಕ್ಷಿಗಳ ಜೀವಕ್ಕೆ ಸಂಚಕಾರ ತರುತ್ತಿದೆ, ಮನುಷ್ಯನ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳ ಬಗ್ಗೆ ವಿಶ್ಲೇಷಣಾತ್ಮಕವಾಗಿ ಹಾಗೂ ಮನರಂಜನಾತ್ಮಕವಾಗಿ ಪ್ರಸ್ತುತಪಡಿಸಲಾಯಿತು. ಪಂಚಿAಗ್ ಡೈಲಾಗ್‌ಗಳಿಗೆ ಪ್ರೇಕ್ಷಕರು ಚಪ್ಪಾಳೆತಟ್ಟಿ ಪ್ರೋತ್ಸಾಹ ನೀಡಿದರು.

ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಂದ ಪ್ಲಾಸ್ಟಿಕ್ ಬಹಿಷ್ಕಾರ ಪ್ರತಿಜ್ಞೆ ಸ್ವೀಕರಿಸಲಾಯಿತು. ಹುದಿಕೇರಿ ಜನತಾ ಪ್ರೌಢಶಾಲೆ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ಮುಖ್ಯ ಶಿಕ್ಷಕಿ ಮೋಹನ್ ಕುಮಾರಿ ಹೂಕುಂಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪಿಡಿಓ ಪುಟ್ಟರಾಜು, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ರಾಧಾ, ಬಿಕ್ಲಿನ್ ಕೂರ್ಗ್ ಇನಿಶಿಯೇಟಿವ್ ಪದಾಧಿಕಾರಿಗಳು, ಹುದಿಕೇರಿ ಜನತಾ ಪ್ರೌಢಶಾಲೆ, ಸರ್ಕಾರಿ ಪ್ರಾಥಮಿಕ ಶಾಲೆ, ಲಿಟಲ್ ಫ್ಲವರ್ ಶಾಲೆ, ಕೂರ್ಗ್ ಸಿಗ್ನೇಚರ್ ಅಕಾಡೆಮಿ, ಬೇಗೂರು, ಚೀನಿವಾಡ ಸರ್ಕಾರಿ ಶಾಲೆ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರು ಹಾಜರಿದ್ದರು.