ಗೋಣಿಕೊಪ್ಪಲು, ಜೂ. ೧೪: ಪರಿಸರ ಸಂರಕ್ಷಣೆಯ ಸಂದೇಶ ಸಾರಲು ದಕ್ಷಿಣ ಕೊಡಗಿನ ಪೊನ್ನಂಪೇಟೆಯ ಅಪ್ಪಚ್ಚಕವಿ ವಿದ್ಯಾಲಯದ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳು, ಅಧ್ಯಾಪಕ ವೃಂದ ಮತ್ತು ಆಡಳಿತ ಮಂಡಳಿ ಸದಸ್ಯರು ವಿಶಿಷ್ಟವಾದ ಕಾರ್ಯಕ್ರಮವೊಂದನ್ನು ಆಯೋಜಿಸುವ ಮೂಲಕ ಸಾರ್ವಜನಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪರಿಸರ ಉಳಿಸಿ, ಬೆಳೆಸಿ ಎಂಬ ಘೋಷಣೆಗಳೊಂದಿಗೆ ಅಪ್ಪಚ್ಚಕವಿ ವಿದ್ಯಾಲಯದ ನೂರಾರು ವಿದ್ಯಾರ್ಥಿಗಳು ಶಾಲಾ ಆವರಣದಿಂದ ಬ್ಯಾಂಡ್ಸೆಟ್ನೊAದಿಗೆ ಭವ್ಯ ಮೆರವಣಿಗೆಯನ್ನು ಆರಂಭಿಸಿದರು. ನಗರದ ಮುಖ್ಯಬೀದಿಗಳಲ್ಲಿ ಸಾಗಿದ ವಿದ್ಯಾರ್ಥಿಗಳು ಮೆರವಣಿಗೆಯುದ್ದಕ್ಕೂ ಪರಿಸರ ಜಾಗೃತಿಯ ಘೋಷಣೆಗಳನ್ನು ಮೊಳಗಿಸಿದರು.
ಮುಖ್ಯ ರಸ್ತೆಯ ಮೂಲಕ ಸಾಗಿದ ಮೆರವಣಿಗೆಯು ನಗರದ ಪ್ರಮುಖ ಕೇಂದ್ರವಾಗಿರುವ ಬಸ್ ನಿಲ್ದಾಣ ತಲುಪಿತು. ಅಲ್ಲಿ ನೆರೆದಿದ್ದ ಸಾರ್ವಜನಿಕರಿಗೆ, ಪ್ರಯಾಣಿಕರಿಗೆ, ಆಟೋ ಚಾಲಕರಿಗೆ, ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರುವ ಕರಪತ್ರಗಳನ್ನು ಹಂಚುವ ಮೂಲಕ ವಿನೂತನ ರೀತಿಯಲ್ಲಿ ಜಾಗೃತಿ ಮೂಡಿಸಿದರು. ವಿದ್ಯಾರ್ಥಿಗಳು ತಮ್ಮ ಕೈಯಲ್ಲಿ ಹಿಡಿದಿದ್ದ ಆಕರ್ಷಕ ಪೋಸ್ಟರ್ಗಳು ಸಾರ್ವಜನಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾದವು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ಪೊನ್ನಿಮಾಡ ಸುರೇಶ್ ಹಾಗೂ ಆಡಳಿತ ಮಂಡಳಿ ನಿರ್ದೇಶಕರು, ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಪಾಲ್ಗೊಂಡಿದ್ದರು.
ಮಡಿಕೇರಿ ಎಫ್.ಎಂ.ಕೆ.ಎA.ಸಿ ಕಾಲೇಜು
ಮಡಿಕೇರಿ, ಜೂ. ೧೪: ನಗರದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು ಹಾಗೂ ಮಡಿಕೇರಿ ಬ್ರಹ್ಮಕುಮಾರಿ ಶಾಖೆ ಸಹಯೋಗದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಕಾಲೇಜಿನ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ರಹ್ಮಕುಮಾರಿ ಮಡಿಕೇರಿ ಶಾಖೆಯ ಸಂಚಾಲಕರಾದ ರಾಜಯೋಗಿನಿ ಬಿ.ಕೆ ಧನಲಕ್ಷಿö್ಮ ಅವರು ಮಾತನಾಡಿ, ದಿನದ ಮಹತ್ವ ತಿಳಿಸಿದರು. ಭೂಮಿಯು ಸಮಸ್ತ ಜೀವಿಗಳಿಗೂ ಜೀವನಾಧಾರ, ಪೋಷಕ ಹಾಗೂ ಎಲ್ಲವನ್ನೂ ಸಹಿಸಿಕೊಂಡು “ಕ್ಷಮಾಪನೆ ಮತ್ತು ಕೊಡುವ ಗುಣ”ಕ್ಕೆ (ದಾನಶೀಲತೆ) ಸಂಕೇತವಾಗಿದೆ. ಭೂಮಿಯು ನಮಗೆ ನೀತಿಯ ಪಾಠವನ್ನು, ಜೀವನದ ಮೌಲ್ಯಗಳನ್ನು ಮತ್ತು ಪ್ರಕೃತಿಯ ಸೌಂದರ್ಯವನ್ನು ನೀಡುತ್ತದೆ. ಆ ನಿಟ್ಟಿನಲ್ಲಿ ನಾವುಗಳು ವಿಶ್ವ ಪರಿಸರ ದಿನವನ್ನು ಒಂದು ದಿನಕ್ಕೆ ಸೀಮಿತಗೊಳಿಸದೇ ಸಹಸ್ರಾರು ಗಿಡಗಳನ್ನು ನೆಟ್ಟು ಪರಿಸರಕ್ಕೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ಕಾಲೇಜಿನ ಆವರಣದಲ್ಲಿ ಹಣ್ಣಿನ ಗಿಡನೆಟ್ಟು, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಮೇಜರ್ ಪ್ರೊ.ಬಿ ರಾಘವ ಅವರು, ಪರಿಸರ ಜ್ಞಾನವು ನಮ್ಮ ಸುತ್ತಲಿನ ಪ್ರಕೃತಿ, ಜೀವಿಗಳು ಮತ್ತು ಅವುಗಳ ನಡುವಿನ ಸಂಬAಧವನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಾಗಿದೆ. ಇದು ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸಲು, ಮಾಲಿನ್ಯವನ್ನು ತಗ್ಗಿಸಲು ಮತ್ತು ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸಲು ಪ್ರತಿಯೊಬ್ಬರಿಗೂ ಅತ್ಯಗತ್ಯವಾದ ಜ್ಞಾನವಾಗಿದೆ. ಆದ್ದರಿಂದ ಪ್ರತಿಯೊಬ್ಬರು ಪರಿಸರ ಕಾಳಜಿ ಹೊಂದಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ಸಿಬ್ಬಂದಿ ಸುರೇಶ್ ಕಾರಂತ್, ಮಡಿಕೇರಿ ಎಸ್ಬಿಐ ಶಾಖೆಯ ನಿವೃತ್ತ ಅಧಿಕಾರಿ ರೇವತಿ, ಕಾಲೇಜಿನ ಪ್ರಾಧ್ಯಾಪಕರುಗಳಾದ ಪ್ರೊ.ಕೃಷ್ಣ ಎಂ.ಪಿ, ಪ್ರೊ.ಕೆ.ಪಿ ನಾಗರಾಜು, ಪ್ರೊ. ತಿಪ್ಪೇಸ್ವಾಮಿ ಇ, ಗ್ರಂಥಪಾಲಕಿ ಡಾ ವಿಜಯಲತ ಹಾಗೂ ಬೋಧಕ, ಬೋಧಕೇತರರು, ವಿದ್ಯಾರ್ಥಿಗಳು ಮತ್ತು ಎನ್ಸಿಸಿ ಕೆಡೆಟ್ಗಳು ಪಾಲ್ಗೊಂಡಿದ್ದರು.