ಗೋಣಿಕೊಪ್ಪ ವರದಿ, ಜೂ. ೧೪: ಮಕ್ಕಳು ಹುಡುಕಾಟದ ಮನೋಭಾವ ರೂಡಿಸಿಕೊಳ್ಳುವುದರಿಂದ ಸಾಧಿಸಲು ಅವಕಾಶ ತೆರೆದುಕೊಳ್ಳುತ್ತದೆ ಎಂದು ನವದೆಹಲಿ ಜವಾಹರ್‌ಲಾಲ್ ನೆಹರು ವಿಶ್ವ ವಿದ್ಯಾಲಯದ ಪ್ರೊಫೆಸರ್ ಡಾ. ಎಂ. ನರಸಿಂಹಮೂರ್ತಿ ಅಭಿಪ್ರಾಯಪಟ್ಟರು.
ವೀರಾಜಪೇಟೆ ಪ್ರಗತಿ ಫೌಂಡೇಷನ್, ಲೀಫ್ ಸಂಸ್ಥೆ ಸಹಯೋಗದಲ್ಲಿ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.
ಕುತೂಹಲದಿಂದ ತೊಡಗಿಕೊಂಡಾಗ ಸಾಕಷ್ಟು ಕೌತುಕಗಳು ಕಣ್ಣೆದುರು ಕಾಣುವಂತಾಗುತ್ತದೆ. ಇಂದ್ರಿಯಗಳು ಕೂಡ ಸಾಕಷ್ಟು ಸಂಶೋಧನೆಗೆ ಸ್ಪಂದಿಸುತ್ತದೆ. ಇಂತಹ ಗುಣ ಬದುಕಿಗೆ ಅವಶ್ಯ. ದೇಶದ ರಾಷ್ಟçಪತಿಯಾಗಿದ್ದ ಡಾ. ಅಬ್ದುಲ್ ಕಲಾಂ ಕೂಡ ಬಾಲ್ಯಾವಸ್ಥೆಯಲ್ಲಿ ಕೌತುಕದ ಕಡೆ ಮನಸು ವಾಲುವಂತೆ ರೂಡಿಸಿಕೊಂಡಿದ್ದರು. ಇದರಿಂದ ವಿಜ್ಞಾನಿಯಾಗಿ ದೇಶದ ಆಸ್ತಿಯಾದರು. ಇದೇ ರೀತಿ ಕಿರಿಯ ವಯಸ್ಸಿನಲ್ಲಿ ವಿಮರ್ಷೆಯತ್ತ ಹೆಚ್ಚು ತೊಡಗಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಲೀಫ್ ಸಂಸ್ಥೆ ಮುಖ್ಯಸ್ಥ ಕರ್ಣನ್ ರಾಘವೇಂದ್ರ ನವೀನ್ ಮಾತನಾಡಿ, ಬದುಕಿಗೆ ಗಣಿತ, ವಿಜ್ಞಾನ ಮತ್ತು ಭಾಷಾ ಜ್ಞಾನ ಮುಖ್ಯ. ಗಣಿತ ಇಲ್ಲದೆ ಬದುಕು ರೂಪಿಸಿಕೊಳ್ಳಲಾಗುವುದಿಲ್ಲ. ನಿತ್ಯದ ಬದುಕಿಗೆ ಲೆಕ್ಕಚಾರ ಅವಶ್ಯವಾಗಿದೆ. ಇದಕ್ಕೆ ಶಿಕ್ಷಣವೇ ಮುಖ್ಯವಾಗುವುದಿಲ್ಲ. ಬದುಕಿಗೆ ಬೇಕಾದ ಲೆಕ್ಕದಲ್ಲಿ ಅನುಭವದಿಂದ ಪಡೆದುಕೊಳ್ಳಬಹುದಾಗಿದೆ ಎಂದರು. ವಿಜ್ಞಾನದಿಂದ ನಮ್ಮ ಬುದ್ದಿಶಕ್ತಿ ನೀಡುವ ಎಚ್ಚರಿಕೆ ನಡೆ, ಬದುಕು ಮುಂದುವರಿಸುತ್ತದೆ. ಭಾಷೆಯಿಂದ ಎಲ್ಲವನ್ನೂ ಪಡೆದುಕೊಳ್ಳಬಹುದಾಗಿದೆ. ಈ ಬಗ್ಗೆ ಕಿರಿಯ ಪ್ರಾಯದಲ್ಲಿಯೇ ಕನಿಷ್ಟ ಒಂದು ವರ್ಷದ ಗುರಿ ಅವಶ್ಯವಾಗುತ್ತದೆ ಎಂದರು.
ಇದೇ ಸಂದರ್ಭ ದೇವಾಂಶ್ ಅಕಾಡೆಮಿ ಮತ್ತು ಲೀಫ್ ಸಂಸ್ಥೆ ವತಿಯಿಂದ ಹೊರತಂದಿರುವ ಸುಲಭವಾದ ಲೆಕ್ಕ ಮತ್ತು ಕೌತುಕದ ವಿಜ್ಞಾನ ಹಾಗೂ ರಾಮಾನುಜಂ ಅವರ ಬಗ್ಗೆ ಹೊರತಂದಿರುವ ಪುಸ್ತಕವನ್ನು ಶಾಲೆಗೆ ಕೊಡುಗೆಯಾಗಿ ನೀಡಲಾಯಿತು.
ವೀರಾಜಪೇಟೆ ಪ್ರಗತಿ ಫೌಂಡೇಷನ್ ಮುಖ್ಯಸ್ಥ ಮಾದಂಡ ತಿಮ್ಮಯ್ಯ ಮಾತನಾಡಿ, ಸಂಪನ್ಮೂಲ ವ್ಯಕ್ತಿಗಳ ಸಲಹೆ, ಮಾರ್ಗದರ್ಶನ ವಿದ್ಯಾರ್ಥಿ ಜೀವನದಲ್ಲಿ ಅವಶ್ಯ. ಸರಳತೆಯಿಂದ ಬೆಳೆಯುವ ಹಾದಿ ಸುಗಮ ಎಂಬುದನ್ನು ಇಂದಿನ ಸಂಪನ್ಮೂಲ ವ್ಯಕ್ತಿಗಳಿಂದ ಕಲಿಯುವಂತಾಗಿದೆ ಎಂದರು.
ಶಾಲಾ ಉಪ ಪ್ರಾಂಶುಪಾಲ ಚಂಗಪ್ಪ ಮಾತನಾಡಿ, ವಿದ್ಯಾರ್ಥಿಗಳಿಗೆ ಶಾಲಾ ಆರಂಭದಲ್ಲಿಯೇ ಸೂಕ್ತ ಸಲಹೆ, ಮಾರ್ಗದರ್ಶನ ನೀಡಿರುವುದರಿಂದ ಉತ್ತಮ ಪ್ರಗತಿ ನಿರೀಕ್ಷಿಸಬಹುದಾಗಿದೆ. ಆಸಕ್ತಿಯಿಂದ ಕಲಿಕೆ ಸುಲಭವಾಗುತ್ತದೆ ಎಂದರು. ಕನ್ನಡ ಶಿಕ್ಷಕಿ ನಳಿನಿ ನಿರೂಪಣೆ ಮಾಡಿದರು.