ವೀರಾಜಪೇಟೆ, ಜೂ. ೧೩: ವೀರಾಜಪೇಟೆಯ ನಾಟ್ಯ ಮಯೂರಿ ನೃತ್ಯ ಟ್ರಸ್ಟ್ ವತಿಯಿಂದ ಬಸವ ಜಯಂತಿ ಅಂಗವಾಗಿ ಬಸವ ಶ್ರೀ ಕಾಯಕ ಶ್ರೇಷ್ಠ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಸಾಂಸ್ಕೃತಿಕ ಉತ್ಸವ ಇತ್ತೀಚೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ನಡೆಯಿತು. ಚಲನಚಿತ್ರ ನಟರಾದ ಅನಿರುದ್ದ ಜತಕರ್, ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ದಾವಣಗೆರೆಯ ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಸ್ಮಾಮೀಜಿಯವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು.
ನಾಟ್ಯ ಮಯೂರಿ ನೃತ್ಯ ಟ್ರಷ್ಟಿನ ಸಂಸ್ಥಾಪಕಿ ವಿದುಷಿ ಪ್ರೇಮಾಂಜಲಿ ಆಚಾರ್ಯ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ರಾಜ್ಯದ ವಿವಿಧ ಕಡೆಗಳಿಂದ ಆಗಮಿಸಿದ ನೃತ್ಯ ಸಂಸ್ಥೆಗಳ ವಿದ್ಯಾರ್ಥಿಗಳು ಉತ್ತಮ ನೃತ್ಯ ಪ್ರದರ್ಶನ ನೀಡಿದರು.